ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

By Kannadaprabha News  |  First Published Oct 30, 2020, 1:43 PM IST

ಆರ್‌.ಆರ್‌.ನಗರ ಉಪಚುನಾವಣೆ:ಮತಗಟ್ಟೆಗೆ ಕರೆತರಲು 90 ಆ್ಯಂಬುಲೆನ್ಸ್‌| ನ.3ರಂದು ಸಂಜೆ 5ರಿಂದ 6ರವರೆಗೆ ಮತದಾನಕ್ಕೆ ಅವಕಾಶ| ಅ.17ರಿಂದ 28ರವರೆಗೆ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1117 ಸೋಂಕಿತರು ಪತ್ತೆ| 
 
 


ಬೆಂಗಳೂರು(ಅ.30): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ನಡೆಯುವ ಉಪ ಚುನಾವಣೆ ವೇಳೆ ಕೊರೋನಾ ಸೋಂಕಿತರು, ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಸೋಂಕಿನ ಶಂಕೆ ಇರುವ ಮತದಾರರಿಗೆ ಸಂಜೆ 5ರಿಂದ 6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸೋಂಕಿತರನ್ನು ಮತಗಟ್ಟೆಗೆ ಕರೆತರಲು 90 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅ.17ರ ನಂತರ ಕೊರೋನಾ ಸೋಂಕು ದೃಢಪಡುತ್ತಿರುವ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮತದಾನದಂದು ಕೊರೋನಾ ಸೋಂಕಿತರು ಮತದಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಅವರಿಗೆ ನ.3ರಂದು ಸಂಜೆ 5ರಿಂದ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ರೋಗಿಗಳನ್ನು ಆಸ್ಪತ್ರೆ ಹಾಗೂ ಮನೆಯಿಂದ ಮತಗಟ್ಟೆಗೆ ಕರೆತರುವುದಕ್ಕೆ 90 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಪಿಪಿ ಕಿಟ್‌, ಮಾಸ್ಕ್‌ ಧರಿಸಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು ಎಂದು ತಿಳಿಸಿದ್ದಾರೆ. 

Latest Videos

undefined

 ವಿಜಯಪುರ: ಮಹಾಮಾರಿ ಕೊರೋನಾ ಸೋಂಕಿಗೆ ಮತ್ತೊಬ್ಬ ಶಿಕ್ಷಕ ಬಲಿ

ಸೋಂಕಿತರ ಜೊತೆಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಕೊರೋನಾ ಸೋಂಕಿನ ಲಕ್ಷಣ ಹೊಂದಿರುವವರು, ಸೋಂಕು ಪರೀಕ್ಷೆಗೆ ಒಳಗಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು. ಆ್ಯಂಬುಲೆನ್ಸ್‌ ಸೇವೆ ಬೇಕಾದವರು ಸಹಾಯವಾಣಿ ಸಂಖ್ಯೆ 080-28600954/28604331/28601050, ಮೊಬೈಲ್‌ ಸಂಖ್ಯೆ 9482224474ಗೆ ಸಂಪರ್ಕಿಸಬಹುದು ಎಂದರು.

ಕ್ಷೇತ್ರದ ಒಂಬತ್ತು ವಾರ್ಡ್‌ಗೆ ನೋಡಲ್‌ ಅಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಸಹ ಸಂಪರ್ಕಿಸಬಹುದು. ಒಂದು ವೇಳೆ ಸಂಜೆ 5ರಿಂದ 6 ಗಂಟೆ ಅವಧಿಯಲ್ಲಿ ಸಾಮಾನ್ಯ ಮತದಾರರು ಆಗಮಿಸಿದರೆ ಇಡೀ ಮತಗಟ್ಟೆಯನ್ನು ಸೋಂಕು ಮುಕ್ತಗೊಳಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. 

117 ಸೋಂಕಿತರು ಪತ್ತೆ

ಅ.17ರಿಂದ 28ರವರೆಗೆ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1117 ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಆಸ್ಪತ್ರೆಯಲ್ಲಿ 317 ಜನ, ಮನೆಯಲ್ಲಿ 842 ಹಾಗೂ ಕೋವಿಡ್‌ ಆರೈಕೆ ಕೇಂದ್ರದಲ್ಲಿ 17 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಶೇ.20 ರಷ್ಟು ಮಂದಿಯ ಮತಗಳು ಮಾತ್ರ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ಈ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!