ಆ್ಯಂಬುಲೆನ್ಸ್‌ನಲ್ಲಿ ಹತ್ತಾರು ಆಸ್ಪತ್ರೆಗಳಿಗೆ ಅಲೆದಾಟ|ಕೊನೆಗೆ ಬೆಡ್ ಸಿಕ್ಕರೂ ವೆಂಟಿಲೇಟರ್ ಇಲ್ಲದೇ ಕೊನೆಯುಸಿರು| ಬಡವರು ಬದುಕುವುದೇ ಕಷ್ಟ| ಸಂಬಂಧಿಕರ ಅಳಲು|
ಬೆಂಗಳೂರು(ಏ.19): ಎಂಟು ತಾಸು ಆ್ಯಂಬುಲೆನ್ಸ್‌ನಲ್ಲಿ ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಹಾಗೂ ವೆಂಟಿಲೇಟರ್ ಸಿಗದೇ 45 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿರುವ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ. ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದ ಬಳಿ ಭಾನುವಾರ ಮೃತನ ಸಂಬಂಧಿಕರು ಈ ರೀತಿಯ ಸಾವು ಯಾರಿಗೂ ಬಾರದಿರಲಿ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.
ತನ್ನ ಅಣ್ಣನ ಸಾವಿನ ಬಗ್ಗೆ ತಮ್ಮ ಕಣ್ಣೀರಿಡುತ್ತಾ ಹೇಳಿದ ತಮ್ಮ, ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಸರ್ಕಾರಿ ಆಸ್ಪತ್ರೆಯಲ್ಲಿ ಅಣ್ಣನಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದೆವು. ಅಲ್ಲಿನ ಸಿಬ್ಬಂದಿ ಬೆಡ್ ಖಾಲಿ ಇಲ್ಲ ಎಂದರು. ಅಷ್ಟರಲ್ಲಿ ಅಣ್ಣನಿಗೆ ಉಸಿರಾಟದ ಸಮಸ್ಯೆ ಹೆಚ್ಚಾದ್ದರಿಂದ ವೆಂಟಿಲೇಟ್ ಅಗತ್ಯಬಿತ್ತು. ಹೀಗಾಗಿ ಆ್ಯಂಬುಲೆನ್ಸ್‌ನಲ್ಲಿ ಹತ್ತಾರು ಆಸ್ಪತ್ರೆಗಳಿಗೆ ಕರೆದೊಯ್ದರೂ ಎಲ್ಲಿಯೂ ವೆಂಟಿಲೇಟರ್ ಸಿಗಲಿಲ್ಲ. ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿಕೊಳ್ಳಲು 25 ಸಾವಿರ ರು. ಕೇಳಿದರು. ತಕ್ಷಣಕ್ಕೆ 10 ಸಾವಿರ ರು. ಕಟ್ಟಲು ಮುಂದಾದೆವು. ಈ ವೇಳೆ ನಮ್ಮಲ್ಲಿ ವೆಂಟಿಲೇಟರ್ ಇಲ್ಲ. ಬೇರೆಡೆಗೆ ಕರೆದೊಯ್ಯಿರಿ ಎಂದು ಕಳುಹಿಸಿದರು. ಕಡೆಗೂ ವೆಂಟಿಲೇಟರ್ ಸಿಗದೇ ಅಣ್ಣ ಕೊನೆಯುಸಿರೆಳೆದರು ಎಂದು ಕಣ್ಣೀರಿಟ್ಟರು.
ಕೊರೋನಾ ಕಾರಣ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ; ಕೈಗಾರಿಕೆಗೆ ಆಮ್ಲಜನಕ ಪೂರೈಕೆ ನಿಷೇಧಿಸಿದ ಸರ್ಕಾರ!
ಬಡವರು ಬದುಕುವುದೇ ಕಷ್ಟ:
ರಾಜ್ಯ ಸರ್ಕಾರ ಕೊರೋನಾ ಸೋಂಕಿತರಿಗಾಗಿ 500 ಆಸ್ಪತ್ರೆ, 5 ಸಾವಿರ ಬೆಡ್, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳುತ್ತಿದೆ. ಆದರೆ, ಎಂಟು ತಾಸು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಯಗೆ ಅಲೆದಾಡಿದರೂ ಒಂದೇ ಒಂದು ಬೆಡ್ ಸಿಗಲಿಲ್ಲ. ಸರಿಯಾದ ಸಮಯಕ್ಕೆ ಬೆಡ್ ಹಾಗೂ ವೆಂಟಿಲೇಟರ್ ಸಿಕ್ಕದ್ದರೆ ಅಣ್ಣ ಬದುಕುತ್ತಿದ್ದರು ಎಂದು ಮೃತನ ಸಹೋದರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ ಕೊರೋನಾ ಬಂದರೆ ಬದುಕುವುದೇ ಕಷ್ಟ ಎನ್ನುವಂತಾಗಿದೆ ಎಂದು ಮೃತನ ಕುಟುಂಬದ ಸದಸ್ಯರು ನೋವಿನಿಂದ ನುಡಿದರು.