ಕುಕ್ಕುಟೋದ್ಯಮವನ್ನು ಕೊರೋನಾ ವೈರಸ್ ಕುಕ್ಕಿದೆ. ಚಿಕನ್ ಬೆಲೆ ಪಾತಾಳಕ್ಕೆ ಇಳಿದಿದ್ದು, ತೀವ್ರ ನಷ್ಟ ಅನುಭವಿಸವಂತಾಗಿದೆ.
ಬೆಂಗಳೂರು [ಮಾ.15]: ಕೊರೋನಾ ವೈರಸ್, ಹಕ್ಕಿಜ್ವರ ಕುಕ್ಕುಟೋದ್ಯಮ ವನ್ನೂ ನಲುಗಿಸಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಳಿ ಮಾಂಸ ವ್ಯಾಪಾರ ಅಕ್ಷರಶಃ ಕುಸಿದಿದೆ. ಕರ್ನಾಟಕದಲ್ಲಿ ಒಂದು ಸಾವಿರ ಕೋಟಿ ರು.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ತಿಳಿಸಿದೆ.
ರಾಜ್ಯದಲ್ಲಿ ಕೋಳಿ ಮಾಂಸದ ಬೆಲೆ ಗಣನೀಯ ವಾಗಿ ಇಳಿಕೆಯಾಗಿದ್ದು, ವ್ಯಾಪಾರ ಶೇ. 80ರಷ್ಟು ಕುಸಿದಿದೆ. ಕೋಳಿ ಮಾಂಸ ಸೇವನೆಯಿಂದ ಕೊರೋನಾ ಹರಡುತ್ತದೆ ಎಂಬ ವದಂತಿ ರೈತರು ಹಾಗೂ ಉದ್ಯಮ ನಷ್ಟಕ್ಕೆ ದೂಡಿದೆ. ರೋಗ ಹರಡುವ ಭಯದಿಂದ ಗ್ರಾಹಕರು ಕೋಳಿ ಖರೀದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ಕೋಳಿ ಸಾಕಾಣಿಕೆದಾರರು ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ.
undefined
ನನ್ನನ್ನು ಅಸಹ್ಯಭಾವದಿಂದ ನೋಡುತ್ತಿದ್ದರು: ಕೊರೋನಾ ಶಂಕಿತನ ಬೇಸರದ ನುಡಿ.
ಫೆಬ್ರವರಿ ತಿಂಗಳಿನಿಂದ ಇಂದಿನವರೆಗೆ ಒಂದು ಸಾವಿರ ಕೋಟಿ ರು. ಕೋಳಿ ಉದ್ಯಮದಲ್ಲಿ ನಷ್ಟವಾಗಿದೆ. ರಾಜ್ಯವಾರು ಪ್ರತಿದಿನ 14 ಲಕ್ಷ ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿತು. ಬೆಂಗಳೂರು ನಗರದಲ್ಲೇ 4 ಲಕ್ಷ ಕೆ.ಜಿ. ಖರೀದಿಯಾಗುತ್ತಿತ್ತು. ಈಗ ರಾಜ್ಯದಾದ್ಯಂತ ಒಂದು ದಿನಕ್ಕೆ 1 - 2 ಲಕ್ಷ ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿದೆ. ಒಂದು ತಿಂಗಳ ಹಿಂದೆ 80 - 100 ರು. ಇದ್ದ ಕೆ.ಜಿ. ಕೋಳಿ ಮಾಂಸದ ಬೆಲೆ ಸದ್ಯ 10 - 30 ರು.ಗೆ ಕುಸಿದಿದೆ. ಕುಕ್ಕುಟೋದ್ಯಮವನ್ನೇ ನಂಬಿ ಬದುಕುತ್ತಿದ್ದ ರಾಜ್ಯದ ಸುಮಾರು 15 ಸಾವಿರ ಕೋಳಿ ಸಾಕಾಣಿಕೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ಅಧ್ಯಕ್ಷ ಡಿ.ಕೆ. ಕಾಂತರಾಜು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಕೆಲವರ ಅಪಪ್ರಚಾರದಿಂದ ಕುಕ್ಕುಟೋದ್ಯಮಕ್ಕೆ ಅಪಾರ ನಷ್ಟವಾಗಿದೆ. ಕೋಳಿ ಸಾಕಾಣಿಕೆದಾರರು ಕೆಲವೆಡೆ ಉಚಿತವಾಗಿ ಕೋಳಿಗಳನ್ನು ನೀಡುತ್ತಿದ್ದಾರೆ. ಹಲವರು ವ್ಯಾಪಾರವಿಲ್ಲದೆ ಗುಂಡಿಗೆ ಹೂಳುತ್ತಿದ್ದಾರೆ. ಬ್ರಾಯ್ಲರ್ ಕೋಳಿ ಮಾರಾಟಗಾರರು 1 ಲಕ್ಷದಿಂದ 50 ಲಕ್ಷ ರು.ವರೆಗೆ ಕಳೆದುಕೊಂಡಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ ಪ್ರತಿದಿನ ಕಳುಹಿಸುತ್ತಿದ್ದ 15 - 20 ಸಾವಿರ ಕೋಳಿ ಪೂರೈಕೆಯನ್ನು ನಿಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೋಳಿ ಮಾಂಸ ಕೇಳಿದರೂ ಸಿಗದಂತಹ ಪರಿಸ್ಥಿತಿ ಎದುರಾಗಬಹುದು ಎನ್ನುತ್ತಾರೆ ಅವರು.