ಮಾರಕ ಕೊರೋನಾ : ನಾಟಿ ವೈದ್ಯ ಶಿವಮೊಗ್ಗದ ನರಸೀಪುರ ನಾರಾಯಣಮೂರ್ತಿಗೆ ಆರೋಗ್ಯ ಇಲಾಖೆ ಸೂಚನೆ

By Kannadaprabha NewsFirst Published Mar 9, 2020, 11:40 AM IST
Highlights

ದೇಶ ವಿದೇಶಗಳಿಂದ ಲಕ್ಷಾಂತರ ಜನರ ಬಂದು ಕ್ಯಾನ್ಸರ್ ಸೇರಿ ವಿವಿಧ ರೋಗಗಳಿಗೆ ಔಷಧ ನೀಡುತ್ತಿದ್ದ ನರಸೀಪುರದ ನಾರಾಯಣಮೂರ್ತಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೋನಾ ಬೆನ್ನಲ್ಲೇ ಈ ಸೂಚನೆ ನೀಡಲಾಗಿದೆ. 

 ತ್ಯಾಗರ್ತಿ [ಮಾ.09]:  ಕೊರೋನಾ ವೈರಸ್‌ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ನಾಟಿ ಔಷಧ ನೀಡದಂತೆ ನರಸೀಪುರದ ನಾಟಿ ವೈದ್ಯ ನಾರಾಯಣಮೂರ್ತಿ ಅವರಿಗೆ ಸೂಚನೆ ನೀಡಿದೆ. ನಾಟಿ ವೈದ್ಯರು ಮನೆ ಮುಂಭಾಗದ ಗೇಟ್‌ ಬಂದ್‌ ಮಾಡಿ ಔಷಧ ನೀಡುವುದಿಲ್ಲ ಎಂದು ಬೋರ್ಡ್‌ ಹಾಕಿದ್ದರೂ ಸಹ ವಿವಿಧ ಭಾಗಗಳಿಂದ ಬಂದಿದ್ದ ಜನರಿಗೆ ಗ್ರಾಮದ ಬೇರೆ ಬೇರೆ ವ್ಯಕ್ತಿಗಳು ಹಿಂಬಾಗಿಲ ಮೂಲಕ ಔಷಧ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ಗ್ರಾಮದ ಮುಖ್ಯರಸ್ತೆಯನ್ನು ಬಂದ್‌ ಮಾಡಿ ಧರಣಿ ನಡೆಸಿದರು.

ಸಾಗರ ತಾಲೂಕಿನ ಗೌವುತಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರಸೀಪುರ ಗ್ರಾಮಕ್ಕೆ ವಿವಿಧ ರಾಜ್ಯಗಳಿಂದ ಔಷಧಿಗಾಗಿ ಖಾಸಗಿ ವಾಹನಗಳಲ್ಲಿ ಬಂದಿದ್ದ ಜನರಿಗೆ ಊರಿಂದ ಹೊರಹೋಗಲು ಬಿಡದಂತೆ ಅವರ ಬಳಿ ಇದ್ದ ಔಷಧ ಪೊಟ್ಟಣಗಳನ್ನು ಕಸಿದುಕೊಂಡು ಗ್ರಾಮಕ್ಕೆ ಬೇರೆ ಊರಿನ ಯಾವುದೇ ವ್ಯಕ್ತಿಗಳು ಬರದಂತೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನರಸೀಪುರದಲ್ಲಿ ಹಣಕ್ಕಾಗಿ ನಕಲಿ ಔಷಧಗಳ ಮಾರಾಟ ಜಾಲವೇ ಇದೆ. ಊರಿನ ವಾತಾವರಣ ಕಲುತವಾಗಿದೆ. ವಿವಿಧ ಊರುಗಳಿಂದ ಬರುವ ಜನರು ಸಾಂಕ್ರಾಮಿಕ ರೋಗಗಳನ್ನು ತಂದು ಗ್ರಾಮದ ನೈರ್ಮಲ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಮಂಗಳೂರು: ಕೊರೋನ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್.

ಕೊರೋನಾ ವೈರಸ್‌ ಭೀತಿಯಿಂದ ಊರಿನ ಜನರು ಆತಂಕಕ್ಕೀಡಾಗಿದ್ದಾರೆ. ಸ್ಥಳೀಯ ನಾಟಿ ವೈದ್ಯರು ಆರೋಗ್ಯ ಇಲಾಖೆಯ ಸೂಚನೆಯಂತೆ ಔಷಧ ಕೊಡುವುದನ್ನು ನಿಲ್ಲಿಸುವುದಾಗಿ ಹೇಳಿದ್ದರೂ ಸಹ ಅವರ ಆಪ್ತ ವಲಯದಲ್ಲಿ ಗುಂಪು ಕಟ್ಟಿಕೊಂಡು ಹಣಕ್ಕಾಗಿ ನಕಲಿ ಔಷಧ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಹೊರ ಊರುಗಳಿಂದ ಬಂದ ಜನರಿಗೆ ಯಾವುದೇ ತೊಂದರೆ ಆಗದಂತೆ ಕಳುಹಿಸಿ ಕೊರೋನಾ ವೈರಸ್‌ ಭೀತಿ ಇರುವುದರಿಂದ ಇಲಾಖೆಯ ಸೂಚನೆಯ ಮೇರೆಗೆ ಔಷಧ ಕೊಡುವುದನ್ನು ನಿಲ್ಲಿಸಲಾಗಿದೆ. ಮುಂದಿನ ಆದೇಶ ಬರುವವರೆಗೆ ಈ ಗ್ರಾಮಕ್ಕೆ ಬ್ಯಾರಿಕೇಡ್‌ ಹಾಕಿ ಔಷಧಿಗಾಗಿ ಬೇರೆ ಊರುಗಳಿಂದ ಯಾರೂ ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾಗರ ಗ್ರಾಮಾಂತರ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

50 ವರ್ಷಗಳಿಂದ ನಾಟಿ ಔಷಧ ನೀಡುತ್ತಿದ್ದೇನೆ. ಇದುವರೆಗೂ ಯಾವುದೇ ವ್ಯಕ್ತಿಗೆ ತೊಂದರೆಯಾಗಿಲ್ಲ. ನಮ್ಮಲ್ಲಿ ನೀಡುವ ಔಷಧಗಳನ್ನು ಯಾವುದೇ ಪ್ರಯೋಗಾಲಯದಲ್ಲಿ ಬೇಕಾದರೂ ಪರೀಕ್ಷಿಸಬಹುದು. ನಮ್ಮ ಹೆಸರು ಹೇಳಿಕೊಂಡು ಹೊರಗಿನ ವ್ಯಕ್ತಿಗಳು ಗ್ರಾಮದಲ್ಲಿ ಔಷಧ ನೀಡುವ ದಂಧೆ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಸಮಸ್ಯೆ ಆಗುತ್ತಿದೆ. ಹೊರಗಡೆ ನೀಡುವ ನಕಲಿ ಔಷಧಗಳಿಗೆ ನಾವು ಜವಾಬ್ದಾರರಲ್ಲ. ಆರೋಗ್ಯ ಇಲಾಖೆಯ ಸೂಚನೆ ಬರುವ ಮೊದಲೇ ಕೊರೋನಾ ವೈರಸ್‌ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಬೋರ್ಡ್‌ಗಳನ್ನು ಹಾಕಲಾಗಿದೆ. ಔಷಧ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

-ನಾರಾಯಣಮೂರ್ತಿ, ನಾಟಿವೈದ್ಯ, ನರಸೀಪುರ

click me!