* 96 ಲಸಿಕಾಕರಣ ವಾಹನಗಳಿಗೆ ಚಾಲನೆ
* 2ನೇ ಡೋಸ್ ಪಡೆಯುವಂತೆ ಕರೆ ಮಾಡಲಿದ್ದಾರೆ ಆರೋಗ್ಯ ಸಿಬ್ಬಂದಿ
* 2ನೇ ಡೋಸ್ ಪಡೆದವರಷ್ಟೇ ಜಿಮ್, ಈಜುಕೊಳ ಬಳಸಿ
ಬೆಂಗಳೂರು(ನ.25): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು(BBMP) ಕೇರ್ ಇಂಡಿಯಾ ಸಹಯೋಗದಲ್ಲಿ 96 ಲಸಿಕಾ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta)ಅವರು ಬುಧವಾರ ಚಾಲನೆ ನೀಡಿದ್ದಾರೆ.
ಪ್ರತಿ ವಲಯಕ್ಕೆ ಎಂಟು ದ್ವಿಚಕ್ರ ವಾಹನಗಳು ಹಾಗೂ ಎರಡು ಮೊಬೈಲ್ ವಾಹನ (ನಾಲ್ಕು ಚಕ್ರ ವಾಹನ) ಸೇರಿದಂತೆ ಒಟ್ಟು 80 ದ್ವಿಚಕ್ರ ವಾಹನ ಹಾಗೂ 16 ಮೊಬೈಲ್(ನಾಲ್ಕು ಚಕ್ರ ವಾಹನ) ವಾಹನಗಳನ್ನು ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ(Vaccine) ನೀಡಲು ಹೋಗುವ ಆರೋಗ್ಯ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಿದ್ದಾರೆ.
ನಗರದಲ್ಲಿ(Bengaluru) ಇದುವರೆಗೆ ಒಟ್ಟು 1,36,99,018 ಡೋಸ್ ಲಸಿಕೆ ನೀಡಲಾಗಿದ್ದು, 80,57,563 ಮೊದಲ ಡೋಸ್(ಶೇ.88ರಷ್ಟು), 56,41,455 ಎರಡನೇ ಡೋಸ್ (ಶೇ.62ರಷ್ಟು) ಲಸಿಕೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
CoWIN ಲಸಿಕೆ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ!
ಯಲಹಂಕದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಮಲ್ಲೇಶ್ವರದ ಯಂಗ್‌ಸ್ಟರ್ ಕಬಡ್ಡಿ ಆಟದ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ವಾಕ್‌ಇನ್ ಹಾಗೂ ಡ್ರೈವ್ ಇನ್ ಮೂಲಕ ವಾಹನಗಳಲ್ಲೇ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯದೆ ಇರುವವರ ಪಟ್ಟಿಯನ್ನು ಕೋವಿನ್ ಪೋರ್ಟಲ್‌ನಿಂದ ಪಡೆದುಕೊಂಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯದವರಿಗೆ ದೂರವಾಣಿ ಮೂಲಕ ಕರೆ ಮಾಡಿ ಎರಡನೇ ಡೋಸ್ ಲಸಿಕೆ ಪಡೆಯಲು ತಿಳಿಸಲಾಗುತ್ತಿದೆ.
ವಾರ್ಡ್‌ವಾರು ಲಸಿಕೆ
ಕಳೆದ 10 ದಿನಗಳಿಂದ ವಾರ್ಡ್‌ವಾರು ಲಸಿಕಾಕರಣ(Vaccination) ಹೆಚ್ಚಿಸುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಲಸಿಕೆ ಪಡೆಯದಿರುವುದನ್ನು ಖಾತರಿಪಡಿಸಿಕೊಂಡು ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಅದರಂತೆ ಇದುವರೆಗೆ ಸುಮಾರು 70 ವಾರ್ಡ್‌ಗಳಲ್ಲಿ ಆರೋಗ್ಯ ತಂಡವು ಭೇಟಿ ನೀಡಿದ್ದು, ಮೊದಲ ಮತ್ತು ಎರಡನೇ ಡೋಸ್ ಸೇರಿ ಸುಮಾರು 35 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಇದೇ ವೇಳೆ ಮತದಾರರ ಪಟ್ಟಿ ಅನುಸಾರ ಮನೆಯಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.
2ನೇ ಡೋಸ್ ಪಡೆದವರಷ್ಟೇ ಜಿಮ್, ಈಜುಕೊಳ ಬಳಸಿ
ಬೆಂಗಳೂರು: ಕೊರೋನಾ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ನಗರದ ಅಪಾರ್ಟ್‌ಮೆಂಟ್(Apartment) ಮತ್ತು ಇತರ ಕಡೆಗಳಲ್ಲಿರುವ ಜಿಮ್ ಮತ್ತು ಕ್ರೀಡಾ ಸೌಲಭ್ಯಗಳ ಬಳಕೆ ಅನುಮತಿ ನೀಡುವಂತೆ ಬಿಬಿಎಂಪಿ ಪರಿಷ್ಕೃತ ಮಾರ್ಗಸೂಚಿ(Guidelines) ಹೊರಡಿಸಿದೆ.
ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಬಿಬಿಎಂಪಿ ಅ.11ರಂದು ಕೋವಿಡ್ ಮಾರ್ಗಸೂಚಿ ಹೊರಡಿಸಿ, ಜಿಮ್‌ಗಳಲ್ಲಿ ಶೇ.50ರಷ್ಟು ಬಳಕೆಗೆ ಅವಕಾಶ ನೀಡಿ ಈಜುಕೊಳ ಬಳಸದಂತೆ ನಿರ್ಬಂಧಿಸಿತ್ತು. ಸದ್ಯ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಕೋವಿಡ್ 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಜಿಮ್ ಪ್ರವೇಶಕ್ಕೆ ಅನುಮತಿ ನೀಡುವಂತೆ ತಿಳಿಸಿದೆ. ಈಜುಕೊಳಗಳನ್ನು(Swimmingpool) ಉಪಯೋಗಿಸಲು ಅನುಮತಿ ನೀಡಿದೆ. ಜತೆಗೆ ಈಜುಕೊಳಕ್ಕೆ ಬರುವ ಪ್ರತಿ ಬ್ಯಾಚ್‌ನಲ್ಲಿ ಈಜುಗಾರರು ಬಳಸುವ ವಿಶ್ರಾಂತಿ ಕೊಠಡಿಗಳು, ಈಜುಕೊಳದ ಸುತ್ತಮುತ್ತಲಿನ ಪ್ರದೇಶವನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕೆಂದು ಸೂಚಿಸಿದೆ.
Covid19| ಡ್ರೋನ್‌ನಲ್ಲಿ ಕೋವಿಡ್ ಲಸಿಕೆ ಪೂರೈಕೆ..!
ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ
ನಗರದಲ್ಲಿ ಕೋವಿಡ್(Covid19) ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಬುಧವಾರ 152 ಜನರಲ್ಲಿ ಸೋಂಕು ದೃಢಪಟ್ಟಿದೆ. ಓರ್ವ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,55,440ಕ್ಕೆ ಏರಿಕೆಯಾಗಿದೆ. 252 ಪುರುಷರು, 212 ಮಹಿಳೆಯರು ಸೇರಿದಂತೆ 464 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,33,996ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿಯ ಸಾವಿನಿಂದ ಮೃತರ ಸಂಖ್ಯೆ 16,327ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5117 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.
ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್‌ನಲ್ಲಿ 5, ಬೇಗೂರು, ಹೊರಮಾವು, ದೊಡ್ಡ ನೆಕ್ಕುಂದಿ ವಾರ್ಡ್‌ಗಳಲ್ಲಿ ತಲಾ 4 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಹಗದೂರು, ಗರುಡಾಚಾರ್‌ಪಾಳ್ಯ, ಹೂಡಿ ವಾರ್ಡ್‌ಗಳಲ್ಲಿ ತಲಾ 3, ಕೋರಮಂಗಲ, ಉತ್ತರಹಳ್ಳಿ , ಬ್ಯಾಟರಾಯನಪುರ ವಾರ್ಡ್‌ಗಳಲ್ಲಿ ತಲಾ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಬನಶಂಕರಿ ದೇವಸ್ಥಾನ, ಹೊಸಕೆರೆಹಳ್ಳಿ, ಆಡುಗೋಡಿ, ಆಜಾದ್‌ನಗರ, ಕೆ.ಆರ್.ಮಾರುಕಟ್ಟೆ, ಚಲವಾದಿಪಾಳ್ಯ, ರಾಯಪುರ, ಜಗಜೀವನರಾಂನಗರ, ಬಾಪೂಜಿನಗರ, ಹಮ್ಮಿಗೆನಗರ ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
66 ಮೈಕ್ರೋ ಕಂಟೈನ್ಮೆಂಟ್: ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 66 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 17, ದಕ್ಷಿಣ ವಲಯ 17, ಪೂರ್ವ 10, ಯಲಹಂಕ 10, ಮಹದೇವಪುರ 9, ಪಶ್ಚಿಮ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್ ಮುಕ್ತವಾಗಿವೆ.