
ಮಂಗಳೂರು/ಉಡುಪಿ(ಮೇ.29): ಮಂಗಳೂರು ನಗರದ ಕಂಕನಾಡಿ ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣ ಮತ್ತೊಂದು ಧರ್ಮ ದಂಗಲ್ ಆತಂಕ ಮೂಡಿಸಿದೆ. ಒಂದು ಕಡೆ ರಸ್ತೆಗಳಲ್ಲಿ ನಮಾಜ್ ನಿಲ್ಲಿಸದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ಹಿಂದೂ ಸಂಘಟನೆಗಳು ಹೇಳಿದರೆ, ನಾವೇನು ಕೈಕೊಟ್ಟಿ ಕೂತಿಲ್ಲ ಎಂದು ಎಸ್‌ಡಿಪಿಐ ವಕ್ತಾರ ರಿಯಾಜ್ ಕಡಂಬು ತಿರುಗೇಟು ನೀಡಿದ್ದಾರೆ. ಈ ಮಧ್ಯೆ ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಹಿಂದು ಸಂಘಟನೆಗಳು ಆಗ್ರಹಿಸಿದ ಬೆನ್ನಲ್ಲೇ ಪೊಲೀಸರು ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ನಮಾಜ್ ಮಾಡುತ್ತಿರುವ ವಿಡಿಯೋ ಪರಿಶೀಲನೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಐಪಿಸಿ ಕಲಂ 341, 283,143 ಹಾಗೂ 149ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಮಂಗಳೂರು: ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತ ಯುವಕರು; ವಾಹನ ಮುಂದೆ ಸಾಗದೇ ಯೂಟರ್ನ್!
ಹನುಮಾನ್ ಚಾಲೀಸ ಪಠಣ: ಇದಕ್ಕೂ ಮುನ್ನ ರಸ್ತೆಗಳಲ್ಲಿ ನಮಾಜ್ ನಿಲ್ಲಿಸದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಸಿತ್ತು. ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸಲಾಗುತ್ತಿದೆ. ತಕ್ಷಣ ಜಿಲ್ಲಾಡಳಿತ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದರು.
ತಿರುಗೇಟು: ರಸ್ತೆಯಲ್ಲಿ ನಮಾಜ್ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಎಸ್‌ಡಿಪಿಐ ವಕ್ತಾರ ರಿಯಾಜ್ ಕಡಂಬು, ಗಣೇಶೋತ್ಸವ ಸಂದರ್ಭದಲ್ಲಿ ಇಡೀ ರಸ್ತೆಯನ್ನು ಬಂದ್ ಮಾಡಿಸಿ ಮೆರವಣಿಗೆ ಮಾಡುತ್ತೇವೆ. ಅದು ಆಯಾ ಸಂದರ್ಭದ ಧಾರ್ಮಿಕ ಆಚರಣೆ. ಅದನ್ನು ನಾವು ಗೌರವಿಸಬೇಕು. ಅದನ್ನು ವಿರೋಧಿಸುವ ಮೂಲಕ ಕೋಮುಗಲಭೆಗೆ ಅವಕಾಶ ಮಾಡಿಕೊಡಬಾರದು. ಕಾನೂನಿಗೆ ವಿರುದ್ಧವಾಗಿದ್ದರೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಬಜರಂಗದಳದವರು ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳಿದರೆ ನಾವೇನು ಕೈಕಟ್ಟಿ ಕೂತಿಲ್ಲ ಎಂದು ಎಚ್ಚರಿಕೆ ನೀಡಿದರು.