* ಬಸವರಾಜ ರಾಯರಡ್ಡಿ ಆಕ್ಷೇಪಕ್ಕೆ ಹಾಲಪ್ಪ ಆಚಾರ್ ತಿರುಗೇಟು
* ಬೆಂಗಳೂರಿನಲ್ಲಿರುವ ಆಕ್ಸಿಜನ್ ಬಸ್‌ಗಳಂತೆ ಯಲಬುರ್ಗಾದಲ್ಲಿ ಪ್ರಾರಂಭ
* ಯಲಬುರ್ಗಾ ಕ್ಷೇತ್ರದಲ್ಲಿ ಆಕ್ಸಿಜನ್ ಬೆಡ್ ಬಸ್ ಆರಂಭಿಸಿದ ಹಾಲಪ್ಪ ಆಚಾರ್
ಕೊಪ್ಪಳ(ಮೇ.24): ಯಲಬುರ್ಗಾದಲ್ಲಿ ಕೊರೋನಾ ರೋಗಿಗಳ ತುರ್ತು ಸೇವೆಗೆ ಅರ್ಪಿಸಿರುವ ಬಸ್ ಈಗ ವಿವಾದಕ್ಕೀಡಾಗಿದೆ! ಈಗ ಬಗ್ಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆಕ್ಸಿಜನ್ ಬಸ್ ಪ್ರಾರಂಭಿಸಿರುವುದು ಒಳ್ಳೆಯ ವಿಚಾರವೇ ಆಗಿದೆ. ಆದರೆ, ಅದು ಪ್ರಾಯೋಜಿತವಾಗಿದ್ದರೆ ಅವರು ಅದರ ವೆಚ್ಚ ಭರಿಸಲಿ. ಆದರೆ, ಸರ್ಕಾರಿ ವೆಚ್ಚದಲ್ಲಿಯೇ ಮಾಡಲಾಗಿದ್ದರೆ ಸರ್ಕಾರದ ಲೋಗೋ ಬಳಕೆ ಮಾಡಲಿ ಎಂದು ಆಕ್ಷೇಪಿಸಿದ್ದಾರೆ.
ಶಾಸಕ ಹಾಲಪ್ಪ ಆಚಾರ್ ಅವರೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಬಸ್ಸಿಗೆ ಆಕ್ಸಿಜನ್ ಮತ್ತು ವೈದ್ಯರು ಹಾಗೂ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದ್ದಾರೆ. ಬಸ್ ಸಾರಿಗೆ ಇಲಾಖೆಯದ್ದು, ಇತರೆ ವ್ಯವಸ್ಥೆ ಜಿಲ್ಲಾಡಳಿತದ್ದು ಎನ್ನುವುದಾದರೆ ಇದರಲ್ಲಿ ಶಾಸಕರ ಸ್ವಂತ ಖರ್ಚಿನಲ್ಲಿ ಮಾಡಿದ ಆಕ್ಸಿಜನ್ ಬಸ್ಸು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಶಾಸಕರು ಬ್ಯಾನರ್ ಹಾಕಿಕೊಳ್ಳುವುದು ಎಷ್ಟುಸರಿ ಎಂದು ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ.
ಕೊರೋನಾ ಗೆದ್ದ ಬಾಣಂತಿಯರು, ಹಸುಗೂಸುಗಳು!
ಹಾಲಪ್ಪ ಆಚಾರ್ ಆಕ್ಷೇಪ:
ಇದಕ್ಕೆ ಶಾಸಕ ಹಾಲಪ್ಪ ಆಚಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಮುಂದೆಯೇ ನಾಲ್ಕು ಜೀವಗಳು ಹೋದವು. ಇದನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಇವರನ್ನು ಉಳಿಸಿಕೊಳ್ಳಲು ಬೆಂಗಳೂರಿನಲ್ಲಿರುವ ಆಕ್ಸಿಜನ್ ಬಸ್‌ಗಳಂತೆ ಯಲಬುರ್ಗಾದಲ್ಲಿ ಪ್ರಾರಂಭಿಸಿದ್ದೇವೆ. ಇದರಲ್ಲಿ ತಪ್ಪೇನು ಬಂತು? ಎಲ್ಲಿಯೋ ಕುಳಿತುಕೊಂಡು ಏನೋ ಮಾತನಾಡುವುದಲ್ಲ, ಜೀವ ಉಳಿಸುವುದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ತಲೆ ಕೆಟ್ಟವರು ಮಾತ್ರ ಇಂಥ ಸಂದರ್ಭದಲ್ಲಿ ತಗಾದೆ ತೆಗೆಯುತ್ತಾರೆ ಮತ್ತು ರಾಜಕೀಯ ಮಾಡುತ್ತಾರೆ ಎಂದು ಕಟುವಾಗಿ ಉತ್ತರಿಸಿದ್ದಾರೆ.
ನಾನು ಆಸಕ್ತಿ ವಹಿಸಿ, ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಿದ್ದೇನೆ. ವೈದ್ಯರು ಹಗಲಿರಳು ಶ್ರಮಿಸುತ್ತಿದ್ದಾರೆ. ನನ್ನ ಜವಾಬ್ದಾರಿಯಿಂದ ನಾನು ಜನರ ಸೇವೆಯನ್ನು ಮಾಡುತ್ತಿದ್ದೇನೆ. ಇದರಲ್ಲಿ ಹುಳುಕು ಹುಡುವುದು ಸರಿಯಲ್ಲ. ನಾನು ಇಷ್ಟೆಲ್ಲಾ ಮಾಡಿದ ಮೇಲೆ ಬಸ್ಸಿಗೆ ಬ್ಯಾನರ್ ಹಾಕಿದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಶಾಸಕ ಹಾಲಪ್ಪ ಆಚಾರ್ ಅವರು ಆಕ್ಸಿಜನ್ ಬೆಡ್ ಬಸ್ ಆರಂಭಿಸಿದ್ದಾರೆ. ಯಾರಾದರೂ ಪ್ರಾಯೋಜಕರು ಆರೋಗ್ಯದ ವಿಷಯದಲ್ಲಿ ಮುಂದೆ ಬಂದರೆ ಎನ್‌ಇಕೆಎಸ್‌ಆರ್‌ಟಿಸಿ ಆದೇಶದ ಪ್ರಕಾರ ನಾವು ಬಸ್‌ಗಳನ್ನು ಉಚಿತವಾಗಿ ಕೊಡಲು ಅವಕಾಶವಿದೆ. ಅದರಂತೆ ಬಸ್‌ಗಳನ್ನು ಅವರಿಗೆ ಉಚಿತವಾಗಿ ನೀಡಿದ್ದೇವೆ. ಆದರೆ ಆಕ್ಸಿಜನ್ ಸೇರಿ ಬೆಡ್‌ಗಳ ವ್ಯವಸ್ಥೆಯನ್ನು ಪ್ರಾಯೋಜಕರೇ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಡಿಸಿವಿಕಾಸ್ ಕಿಶೋರ್ ತಿಳಿಸಿದ್ದಾರೆ.