ಲೋಕೋಪಯೋಗಿ, ಜಿಲ್ಲಾ ಪಂಚಾಯತಿ, ನೀರಾವರಿ ಇಲಾಖೆಗಳ ರಸ್ತೆ ಅನುದಾನದ ವಿವಿಧ ಯೋಜನೆಗಳ ಕಾಮಗಾರಿಗಳ ಕೋಟ್ಯಂತರ ರುಪಾಯಿ ಸರ್ಕಾರ ಬಾಕಿ ಇರಿಸಿಕೊಂಡಿದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುವುದು ಗುತ್ತಿಗೆದಾರರ ಅಳಲಾಗಿದೆ.
ಸಿದ್ದಯ್ಯ ಹಿರೇಮಠ
ಕಾಗವಾಡ(ಅ.07): ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ಬಿಲ್ ಪಾವತಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿ ಮುಗಿದು ವರ್ಷವೇ ಉರುಳಿದರೂ ಕೋಟ್ಯಂತರ ರುಪಾಯಿಗಳ ಬಿಲ್ ಬಾಕಿ ಉಳಿದಿದ್ದರಿಂದ ಗುತ್ತಿಗೆದಾರರು ಕಂಗಾಲಾಗಿದ್ದಾರೆ.
ಲೋಕೋಪಯೋಗಿ, ಜಿಲ್ಲಾ ಪಂಚಾಯತಿ, ನೀರಾವರಿ ಇಲಾಖೆಗಳ ರಸ್ತೆ ಅನುದಾನದ ವಿವಿಧ ಯೋಜನೆಗಳ ಕಾಮಗಾರಿಗಳ ಕೋಟ್ಯಂತರ ರುಪಾಯಿ ಸರ್ಕಾರ ಬಾಕಿ ಇರಿಸಿಕೊಂಡಿದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುವುದು ಗುತ್ತಿಗೆದಾರರ ಅಳಲಾಗಿದೆ.
ಬಿಜೆಪಿಯಂತ ನಾಲಾಯಕರಿಗೆ ಉತ್ತರಿಸುವ ಅಗತ್ಯವಿಲ್ಲ: ಸಚಿವ ಭೈರತಿ ಸುರೇಶ ತಿರುಗೇಟು
ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ,ಹುಕ್ಕೇರಿ ತಾಲೂಕಿನಲ್ಲಿನ ವಿವಿಧ ಕಾಮಗಾರಿಗಳ ಪೈಕಿ, ಲೋಕೋಪಯೋಗಿ ಇಲಾಖೆಯ ಸುಮಾರು ₹450 ಕೋಟಿ, ಜಿಲ್ಲಾ ಪಂಚಾಯತಿ ₹50 ಕೋಟಿ, ನೀರಾವರಿ ಇಲಾಖೆಯ ₹300 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯಡಿ ಪೂರ್ಣಗೊಂಡ ಕಾಮಗಾರಿಗಳ ಸುಮಾರು ₹100 ಕೋಟಿಗಳ ಬಾಕಿ ಬಿಲ್ ಬರಬೇಕಿದೆ. ಈ ಬಿಲ್ ಬಿಡುಗಡೆಗೆ ಕಚೇರಿಗಳಿಗೆ ಅಲೆದು ಸುಸ್ತಾಗಿರುವ ಗುತ್ತಿಗೆದಾರರು ಹೊಸ ಕಾಮಗಾರಿಗಳಿಗೆ ಟೆಂಡರ್ ಹಾಕಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಪರಿಣಾಮ ತ್ವರಿತವಾಗಿ ಆಗಬೇಕಾದ ಕಾಮಗಾರಿಗಳು ನೆನೆಗುದಿಗೆ ಬೀಳುವಂತಾಗಿದೆ.
ಕಳೆದ ಮಾರ್ಚ್‌ನಿಂದ ಇನ್ನು ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರ ಹಾಗೂ ಇಲಾಖೆಯ ಮೇಲೆ ನಂಬಿಕೆ ಇಟ್ಟು ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದಾರೆ. ಆದರೆ, ವರ್ಷ ಕಳೆದರೂ ಹಣ ಸಂದಾಯ ಆಗಿಲ್ಲ. ಕಾಮಗಾರಿಗೆ ಕಚ್ಚಾ ಸಾಮಗ್ರಿ ಪೂರೈಸಿದ ಮಾಲೀಕರು ಈಗ ಹಣಕ್ಕಾಗಿ ದುಂಬಾಲು ಬಿದ್ದಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 15 ದಿನಗಳಲ್ಲಿ ಬಾಕಿ ಬಿಲ್ ಬಿಡೆಗಡೆಯಾಗದಿದ್ದರೇ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಗುತ್ತಿಗೆದಾರರ ಎಚ್ಚರಿಕೆ ನೀಡಿದ್ದಾರೆ.