ಈಶ್ವರಪ್ಪ ವಿರುದ್ಧ ಕಮೀಷನ್‌ ಆರೋಪ, ಪ್ರಧಾನಿ, ಸಿಎಂಗೂ ಮನವಿ ಮಾಡ್ತೇನೆ: ಗುತ್ತಿಗೆದಾರನ ಆಕ್ರೋಶ

By Girish GoudarFirst Published Mar 30, 2022, 12:01 PM IST
Highlights

*  ಮುಂದಾಗುವ ಅನಾಹುತಕ್ಕೆ ಸಚಿವ ಈಶ್ವರಪ್ಪನವರೇ ಹೊಣೆ 
*  ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ವಿರುದ್ಧ ಮಾನನಷ್ಟು ಕೇಸು ದಾಖಲು
*  ಆರೋಪ ಮಾಡಿದ್ದ ಕಾಮಗಾರಿ ಮಂಜೂರೇ ಆಗಿಲ್ಲ, ಹೀಗಿರುವಾಗ ಅಕ್ರಮ ಎಲ್ಲಿ?

ಬೆಳಗಾವಿ(ಮಾ.30): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ವಿರುದ್ಧ 40 ಪರ್ಸೆಂಟೇಜ್‌ ಕಮೀಷನ್‌(40 Percent Commission) ಆರೋಪ ಮಾಡಿರುವ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ(Santosh Patil) ಅವರು ಕಾಮಗಾರಿ ವರ್ಕ್ ಆರ್ಡರ್‌, ಪೇಮೆಂಟ್‌ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸಚಿವ ಈಶ್ವರಪ್ಪನವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪಾಟೀಲ, ವಿಡಿಯೋ ಜೊತೆಗೆ ಬಿಜೆಪಿ(BJP) ಮೆಂಬರ್‌ಶಿಪ್‌ ಕಾರ್ಡ್‌ ಬಿಡುಗಡೆಗೊಳಿಸಿದ್ದಾರೆ. ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಪೂರ್ಣ ಮಾಡಿದ್ದೇನೆ. ವರ್ಕ್ ಆರ್ಡರ್‌, ಪೇಮೆಂಟ್‌ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರಿಂದ ನಾನು ಕಾಮಗಾರಿ ಮಾಡಿದ್ದೇನೆ. ಆದರೆ, ಸುಮ್ಮನೆ ನುಣುಚಿಕೊಳ್ಳುವ ಸಲುವಾಗಿ ಅವನು ಯಾರು ಗೊತ್ತಿಲ್ಲ ಎನ್ನುವುದು ಸರಿಯಲ್ಲ ಎಂದಿದ್ದಾರೆ.

Latest Videos

'ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದುಗೆ ಕ್ಷೇತ್ರವೇ ಇಲ್ಲ'

ಅವರ ಜೊತೆಗೆ ಇರುವ ಫೋಟೋಗಳನ್ನು ಮಾಧ್ಯಮದವರಿಗೆ ಕೊಟ್ಟಿದ್ದೇನೆ. 108 ಕಾಮಗಾರಿಗಳನ್ನು ಮಾಡಬೇಕಾದರೆ ಯಾರಾದರೂ ಸುಮ್ಮನಿರುತ್ತಾರಾ? ಮೇಲಿಂದ ದೇವರು ಬಂದು ಮಾಡಿಸುತ್ತಾರಾ? ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಪಕ್ಷಕ್ಕೂ ಒಳ್ಳೆಯ ಹೆಸರು ಬಂದಿದೆ. ಸುಮ್ಮನೆ ನುಣುಚಿಕೊಳ್ಳಲು, ಇದರಿಂದ ಪಾರಾಗಬೇಕು ಎಂದು ಏನೇನೋ ಹೇಳಿಕೆ ನೀಡಬೇಡಿ. ತಮ್ಮ ಹಿರಿತನಕ್ಕೆ ಇದು ಒಳ್ಳೆಯದಲ್ಲ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿದ್ದು, ನನ್ನ ಮೆಂಬರ್‌ಶಿಪ್‌ ಕಾರ್ಡ್‌ ಸಹ ಕಳುಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ವಿಚಾರವಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಸೇರಿ ಎಲ್ಲ ಹಿರಿಯರಿಗೂ ಮನವಿ ಮಾಡುತ್ತೇನೆ. ಈಶ್ವರಪ್ಪ ಕೂಡಲೇ ವರ್ಕ್ ಆರ್ಡರ್‌ ಮತ್ತು ಪೇಮೆಂಟ್‌ ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರ ಪಾಟೀಲ ಆಗ್ರಹಿಸಿದ್ದಾರೆ.

ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಏನಿದೆ?:

ಬೆಳಗಾವಿ(Belagavi) ತಾಲೂಕಿನ ಹಿಂಡಲಗಾ ರಸ್ತೆ ಸೇರಿದಂತೆ ಕೆಲವು ರಸ್ತೆಗಳನ್ನು ಗುತ್ತಿಗೆದಾರ ಸಂತೋಷ ಕೆ. ಪಾಟೀಲ ಅವರು ನಿರ್ಮಾಣ ಮಾಡಿದ್ದಾರೆ. ಇದಕ್ಕೆ 4 ಕೋಟಿ ಬಿಲ್‌ ಹಣವನ್ನು ಸರ್ಕಾರ ನೀಡಬೇಕಿತ್ತು. ಆದರೆ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ನೀಡದೆ ಸತಾಯಿಸುತ್ತಿದ್ದಾರೆ. ಮಾತ್ರವಲ್ಲ, ಇದರಲ್ಲಿ ಕಮೀಷನ್‌ ಕೇಳುತ್ತಿದ್ದಾರೆಂಬ ಆರೋಪ ಸಂತೋಷ ಅವರದ್ದು. ವರ್ಕ್ ಆರ್ಡರ್‌ ಮುಗಿದು ವರ್ಷಕ್ಕಿಂತ ಮೇಲಾದರೂ ಹಣ ಸಂದಾಯವಾಗಿಲ್ಲ ಎಂದು ಅವರು ಪ್ರಧಾನಿಗೆ ಮತ್ತು ಕೇಂದ್ರ ಸಚಿವರಿಗೆ (RDPR) ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಈಗಾಗಲೇ ತಮ್ಮ ಕುಟುಂಬ ಸಾಕಷ್ಟು ತೊಂದರೆಯಲ್ಲಿದೆ. ಕೈಗಡವಾಗಿ ಮತ್ತು ಬೇರೆ ಕಡೆ ಬಡ್ಡಿಗೆ ಹಣ ಪಡೆದುಕೊಂಡು ರಸ್ತೆ ಕಾಮಗಾರಿಯನ್ನು ಮಾಡಿದ್ದೇನೆ. ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ನನಗೆ ಬರಬೇಕಾಗಿರುವ ಹಣವನ್ನು ಕೂಡಲೇ ಕೊಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಹಣ ಕೊಡಿಸದೇ ಇದ್ದರೆ ನಮ್ಮ ಕುಟುಂಬದವರು ಆತ್ಮಹತ್ಯೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಮೀಷನ್‌ ಆರೋಪ ಮಾಡಿದವನ ವಿರುದ್ಧ ಕೇಸ್‌: ಸಚಿವ ಈಶ್ವರಪ್ಪ

ಬೆಂಗಳೂರು: ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಕಮಿಷನ್‌ ನೀಡಬೇಕು ಎಂದು ಸಂತೋಷ್‌ ಕೆ.ಪಾಟೀಲ್‌ ಎಂಬುವವರು ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ಆತನ ವಿರುದ್ಧ ಮಾನನಷ್ಟ(Defamation) ಮೊಕದ್ದಮೆ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಡಿಕೆಶಿಗೆ ಶಕ್ತಿಯಿದ್ರೆ ಸಿದ್ದರಾಮಯ್ಯರನ್ನು ವಜಾಗೊಳಿಸಲಿ: ಈಶ್ವರಪ್ಪ ಸವಾಲು

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಕೋಟಿ ರು.ಗಳ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಕಮಿಷನ್‌ ನೀಡಬೇಕು ಎಂದು ಕೇಳಿದ್ದೆ ಎಂದು ಆರೋಪ ಮಾಡಿದ್ದ ಸಂತೋಷ್‌, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದರು. ಆ ಬಗ್ಗೆ ಕೇಂದ್ರ ಸಚಿವರ ಕಚೇರಿಯಿಂದ ಮಾಹಿತಿಯನ್ನೂ ಕೋರಲಾಗಿತ್ತು. ಅದಕ್ಕೆ ರಾಜ್ಯದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಿವರವಾದ ಸ್ಪಷ್ಟನೆಯನ್ನೂ ನೀಡಿದ್ದಾರೆ ಎಂದು ತಿಳಿಸಿದರು.

ದೂರಿನಲ್ಲಿ ಉಲ್ಲೇಖಿಸಿದ ಕಾಮಗಾರಿಗೆ ನಮ್ಮ ಇಲಾಖೆ ಅನುಮೋದನೆಯನ್ನೂ ಕೋರಿಲ್ಲ. ಸರ್ಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ. ಈ ಕಾಮಗಾರಿಯ ಸಂಬಂಧ ಇಲಾಖೆಯು ಯಾವುದೇ ಕಾರ್ಯಾದೇಶ ನೀಡಿಲ್ಲ ಮತ್ತು ಆಡಳಿತಾತ್ಮಕ ಅನುಮೋದನೆಯನ್ನು ಸಹ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿಂಡಲಗಾ ಗ್ರಾಮದಲ್ಲಿ ಸಂತೋಷ್‌ ಪಾಟೀಲ್‌ ಹೇಳುವಂತಹ ಕಾಮಗಾರಿಯು ಇಲಾಖಾ ವತಿಯಿಂದ ಅನುಷ್ಠಾನಗೊಂಡಿಲ್ಲ. ಯಾವುದೇ ಸರ್ಕಾರಿ ಏಜೆನ್ಸಿಗಳು ಈ ಕಾಮಗಾರಿಗೆ ತಾಂತ್ರಿಕ ಅನುಮೋದನೆ ನೀಡಿಲ್ಲ ಅಥವಾ ಉಸ್ತುವಾರಿ ಮಾಡಿಲ್ಲ. ಹೀಗಾಗಿ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸಂತೋಷ್‌ ಮಾಡಿದ ಕಪೋಲಕಲ್ಪಿತ ಆರೋಪವು ಗಮನಕ್ಕೆ ಬಂದ ತಕ್ಷಣ ಆತನ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದರು.
 

click me!