ಅರ್ಧಕ್ಕೆ ನಿಂತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಮತ್ತೆ ಗ್ರಹಣ, ಗುತ್ತಿಗೆ ರದ್ದತಿಗೆ ಬಿಬಿಎಂಪಿ ಚಿಂತನೆ!

By Gowthami K  |  First Published Aug 28, 2024, 1:49 PM IST

ಬೆಂಗಳೂರಿನ ಎರಡನೇ ಅತಿ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಟೆಂಡರ್‌ ಪಡೆದ ಕಂಪನಿಯು ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದು ಪಡಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸುತ್ತಿದೆ.


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಆ.28): ರಾಜಧಾನಿ ಬೆಂಗಳೂರಿನ ಎರಡನೇ ಅತಿ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣಗಳೇ ಕಾಣುತ್ತಿಲ್ಲ. ಅಪೂರ್ಣಗೊಂಡಿದ್ದ ಕಾಮಗಾರಿಯನ್ನು ಪೂರ್ಣಗೊಳಿಸುವ ಟೆಂಡರ್‌ ಪಡೆದ ಕಂಪನಿ ಕೂಡ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದು ಪಡಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸುತ್ತಿದೆ.

Tap to resize

Latest Videos

undefined

ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಗ್ಗಿಸಲು ಬಿಬಿಎಂಪಿಯು ಈಜಿಪುರ ಮುಖ್ಯರಸ್ತೆಯ ಒಳ ವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆಯ ಬಾಕಿ ಕಾಮಗಾರಿ ಪೂರ್ಣಕ್ಕೆ ಟೆಂಡರ್‌ ಆಹ್ವಾನಿಸಿ, ಹೈದರಾಬಾದ್‌ ಮೂಲದ ಬಿಎಸ್‌ಸಿಪಿಎಲ್‌ ಪ್ರೈವೇಟ್‌ ಲಿಮಿಟೆಡ್‌ಗೆ ಗುತ್ತಿಗೆ ನೀಡಿದೆ. 2023ರ ನ.15ರಂದೇ ಕಾರ್ಯಾದೇಶ ನೀಡಿ, 15 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

ದೇಶದ ಅತ್ಯಂತ ಕಠಿಣ ಜೈಲಿಗೆ ದರ್ಶನ್‌ ಶಿಫ್ಟ್, ಬಳ್ಳಾರಿ ಜೈಲಿನ ಇತಿಹಾಸ ತಿಳಿಯಲೇಬೇಕು!

ಕಾರ್ಯಾದೇಶ ನೀಡಿ ಬರೋಬ್ಬರಿ 10 ತಿಂಗಳು ಕಳೆದಿದ್ದರೂ ಶೇಕಡ 5 ರಿಂದ 6 ರಷ್ಟು ಕೆಲಸವನ್ನಷ್ಟೇ ಮಾಡಿದೆ. ಈಗಾಗಲೇ ಬಿಬಿಎಂಪಿಯ ಯೋಜನಾ ವಿಭಾಗದಿಂದ ಹಲವು ಬಾರಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರೂ ಕಾಮಗಾರಿ ನಡೆಸುತ್ತಿಲ್ಲ. ಹೀಗಾಗಿ, ಗುತ್ತಿಗೆ ರದ್ದುಪಡಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಯೋಜನಾ ವಿಭಾಗದ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಎಚ್ಚರಿಕೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 22ರಂದು ನಡೆಸಿದ ನಗರ ಪ್ರದಕ್ಷಿಣೆ ವೇಳೆ ಈಜಿಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಗುತ್ತಿಗೆದಾರನ ವಿರುದ್ಧ ನೋಟಿಸ್‌ ಜಾರಿಗೊಳಿಸಿ, ಕಾಮಗಾರಿ ಆರಂಭಿಸದಿದ್ದರೆ, ಗುತ್ತಿಗೆ ರದ್ದುಪಡಿಸಿ ಹೊಸ ಗುತ್ತಿಗೆದಾರರನ್ನು ನೇಮಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬೆಂಗಳೂರು ರೈಲ್ವೆ ಸ್ಟೇಷನ್‌ಗೆ ಬರುವ ವಾಹನ ಸವಾರರಿಗೆ ಬ್ಯಾಡ್ ನ್ಯೂಸ್, ಪಾರ್ಕಿಂಗ್ ಶುಲ್ಕ ಕಡ್ಡಾಯ!

ಗುಂಡಿ ಮುಚ್ಚಿಲ್ಲ, ಪಾದಚಾರಿ ಮಾರ್ಗ ಸರಿಪಡಿಸಿಲ್ಲ:
ಈಜಿಪುರದ ಮೇಲ್ಸೇತುವೆ ಕಾಮಗಾರಿ ನಡೆಯುವ ರಸ್ತೆಯ ನಿರ್ವಹಣೆಯನ್ನು ಗುತ್ತಿಗೆದಾರರೇ ಮಾಡಬೇಕು. ಮಳೆಯಿಂದ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗಿವೆ. ಪಾದಚಾರಿ ಮಾರ್ಗಗಳು ಹಾಳಾಗಿವೆ, ಸರಿಪಡಿಸುವಂತೆ ಬಿಬಿಎಂಪಿಯಿಂದ ಹಲವು ಬಾರಿ ಸೂಚನೆ ನೀಡಿದರೂ ಸರಿಪಡಿಸಿಲ್ಲ. ಸಾರ್ವಜನಿಕರಿಂದ ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜತೆಗೆ, ವಾಹನ ಸವಾರರೂ ಸಮಸ್ಯೆ ಅನುಭವಿಸುತ್ತಿದ್ದಾರೆ.

2017ರಲ್ಲಿ ಆರಂಭಗೊಂಡ ಕಾಮಗಾರಿ: 2017ರ ಮೇ 4ರಂದು ಆರಂಭವಾದ ಕಾಮಗಾರಿ 2019ರ ನ.4ಕ್ಕೆ ಪೂರ್ಣಗೊಳ್ಳಬೇಕೆಂದು ಯೋಜನೆ ರೂಪಿಸಲಾಗಿತ್ತು. ಒಟ್ಟು ₹203.20 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್‌ ಕಂಪನಿಗೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣಕ್ಕೆ ಗುತ್ತಿಗೆ ರದ್ದು ಪಡಿಸಿ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಕ್ಕೆ ಹೊಸದಾಗಿ ಟೆಂಡರ್‌ ಆಹ್ವಾನಿಸಿ, 2023ರ ನವೆಂಬರ್‌ನಲ್ಲಿ ಬಿಎಸ್‌ಸಿಪಿಎಲ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪೂರ್ಣಕ್ಕಾಗಿ ₹176.11 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮೂಲ ವೆಚ್ಚಕ್ಕಿಂತ ₹48.02 ಕೋಟಿ ಹೆಚ್ಚುವರಿ ಮೊತ್ತ ಖರ್ಚು ಮಾಡಲಾಗುತ್ತಿದೆ. ಮೇಲ್ಸೇತುವೆಯ ಒಟ್ಟು 81 ಪಿಲ್ಲರ್‌ಗಳ ಪೈಕಿ 67 ಪಿಲ್ಲರ್‌ಗಳನ್ನು ಮಾತ್ರ ನಿರ್ಮಿಸಲಾಗಿದೆ.

ಈಜಿಪುರ ಮೇಲ್ಸೇತುವೆ ಪೂರ್ಣಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತ್ವರಿತವಾಗಿ ಕಾಮಗಾರಿ ನಡೆಸುವುದಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ನಿಗದಿತ ವೇಗದಲ್ಲಿ ಕಾಮಗಾರಿ ನಡೆಸದಿದ್ದರೆ ನೇಮಿಸಲಾದ ಗುತ್ತಿಗೆ ರದ್ದು ಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು.-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ

click me!