* ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ
* ಹಲಸೂರಿನಲ್ಲಿ ಮನೆ ಕುಸಿತ
* ವಾಹನ ಸವಾರರು ಹೈರಾಣ
ಬೆಂಗಳೂರು(ನ.20): ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಬೆಂಗಳೂರಿಗರನ್ನು(Bengaluru) ಕಾಡಿದ್ದ ಜಡಿ ಮಳೆ ಶುಕ್ರವಾರ ತುಸು ಬಿಡುವು ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಯಿತು.
ಗುರುವಾರ ತಡರಾತ್ರಿ ಸುರಿದ ಮಳೆಯಿಂದ ಇಡೀ ನಗರ ತೊಯ್ದು ಹೋಗಿತ್ತು. ಸತತ ಮಳೆ(Rain) ಸುರಿದಿದ್ದರಿಂದ ಹಲಸೂರಿನಲ್ಲಿ ಮನೆಯೊಂದು ಕುಸಿದರೆ, ಕೆಲವೆಡೆ ಮರಗಳು(Trees) ನೆಲಕಚ್ಚಿದ್ದವು. ಜೊತೆಗೆ ಹಲವು ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ನಗರದ ಬಹುತೇಕ ಕಡೆ ಅಂಡರ್‌ಪಾಸ್‌ಗಳಲ್ಲಿ, ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಟ ನಡೆಸಿದರು. ಇನ್ನು ಕುಸಿದು ಬೀಳುವ ಭೀತಿಯಿಂದಾಗಿ ಎರಡು ಮನೆಗಳನ್ನು ನೆಲಸಮಗೊಳಿಸಲು ಬಿಬಿಎಂಪಿ(BBMP) ಆದೇಶಿಸಿದೆ.
Rain Effect: ಭಾರೀ ಮಳೆ, ಈ ಜಿಲ್ಲೆಗಳಲ್ಲಿ 2 ದಿನ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ
ಹಲವು ಕಡೆ ಮಳೆಹಾನಿ:
ಪಶ್ಚಿಮ ವಲಯದ ನಂದಿನಿ ಬಡಾವಣೆಯ ಕಂಠೀರವ ನಗರದ ಹೊನ್ನಮ್ಮ ಬಿಲ್ಡಿಂಗ್ ಸಮೀಪ ಗೋಡೆ ಕುಸಿತವಾಗಿದ್ದು ತೆರವುಗೊಳಿಸಲಾಗಿದೆ. ಮಹದೇವಪುರ ವಲಯದಲ್ಲಿ ಬಸವನಪುರ, ಸೀಗೆಹಳ್ಳಿ ವೃತ್ತದ ಸರ್ಕಾರಿ ಶಾಲೆ, ಹೊರಮಾವಿನ ಸಾಯಿಬಾಬಾ ದೇವಸ್ಥಾನ, ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಅಣ್ಣಯಪ್ಪ ವೃತ್ತ, ನ್ಯೂ ಹಾರಿಜೋನ್ ಕಾಲೇಜು ರಸ್ತೆ, ವಿಜ್ಞಾನ ನಗರದ ಅಭಯ ರೆಡ್ಡಿ ಲೇಔಟ್ 46ನೇ ತಿರುವು, ಅಪೆಕ್ಸ್ ಆಸ್ಪತ್ರೆ ರಸ್ತೆ, ಮಾರುತಿ ಗಾರ್ಡನ್‌ನಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿತ್ತು.
ಯಲಹಂಕದಲ್ಲಿಯೂ ಭಾರೀ ಮಳೆಯಿಂದ ವಿಎಂಎಸ್ ಗಾರ್ಡನ್ ಹಿಂಭಾಗದ ಕೆನರಾ ಬ್ಯಾಂಕ್, ನಂಜಪ್ಪ ವೃತ್ತ, ವಿದ್ಯಾರಣ್ಯಪುರದ ವೈಷ್ಣವಿ ಅಪಾರ್ಟ್‌ಮೆಂಟ್, ಮಾರಪ್ಪನಪಾಳ್ಯ, ಸರಾಯಿ ಪಾಳ್ಯ, ಬೊಮ್ಮನಹಳ್ಳಿ ವಲಯದ ಅನುಗ್ರಹ ಲೇಔಟ್, ಬಿಳೇಕಹಳ್ಳಿ, ಜನಾರ್ಧನ ಬೇಕರಿ ರಸ್ತೆ, ಎಚ್‌ಎಸ್‌ಆರ್ ಲೇಔಟ್ 6ನೇ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಆತಂಕದಲ್ಲೇ ಜನ ಸಂಚಾರ:
ಶುಕ್ರವಾರ ಮಳೆಯಾಗದಿದ್ದರೂ ಯಾವಾಗ ಬೇಕಾದರೂ ಮಳೆಯಾಗಬಹುದೆಂಬ ಆತಂಕದಲ್ಲೇ ಜನರು ರಸ್ತೆಗೆ ಇಳಿಸಿದ್ದರು. ಈ ಪರಿಣಾಮ ಕಚೇರಿ ಹಾಗೂ ಇನ್ನಿತರ ಕೆಲಸಕ್ಕೆ ಹೋಗುವವರು ಆಟೋ ಹಾಗೂ ಟ್ಯಾಕ್ಸಿಗಳನ್ನು ಆಶ್ರಯಿಸಿದ್ದರು. ಆಸ್ಪತ್ರೆಗೆ ಹೋಗುವವರು, ಮಾರುಕಟ್ಟೆ ಹಾಗೂ ಇತರೆ ಕೆಲಸಗಳಿಗೆ ಹೋಗುವವರು ಕಳೆದೆರಡು ದಿನಗಳಿಂದ ಆಟೋ, ಕಾರು, ಟ್ಯಾಕ್ಸಿ ಹಾಗೂ ಬಸ್ ಆಶ್ರಯಿಸಿದ್ದರೆ, ಶುಕ್ರವಾರ ದ್ವಿಚಕ್ರ ವಾಹನಗಳನ್ನು ರಸ್ತೆಗಿಳಿಸಿದ್ದ ದೃಶ್ಯ ಕಂಡುಬಂತು. ನಗರದಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಯೆಲ್ಲೋ ಅಲರ್ಟ್(Yellow Alert) ನೀಡಲಾಗಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ(Temperature) ಕ್ರಮವಾಗಿ 24 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ(Department of Meteorology) ಹೇಳಿದೆ.
Karnataka Rains| ಹಿಂಗಾರು ಅಬ್ಬರಕ್ಕೆ ಭಾರೀ ಬೆಳೆ, ಜಾನುವಾರು ಹಾನಿ!
ರೈತರಲ್ಲಿ ಆತಂಕ:
ಇನ್ನೂ ಹೀಗೆ ಮಳೆ ಸುರಿಯುತ್ತಿದ್ದರೆ ಭತ್ತ, ರಾಗಿ ತೆನೆ ಕೊಳೆಯುತ್ತವೆ ಜತೆಗೆ ಭತ್ತಗಳು ಜಾಳಾಗಿ ಇಳುವರಿ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೇ ತೆನೆಯಲ್ಲಿಯೇ ಮೊಳಕೆಯೊಡೆಯುತ್ತಿವೆ. ಜತೆಗೆ ಭತ್ತ ಮಳೆಗೆ ಸತತವಾಗಿ ನೆನೆಯುವುದರಿಂದ ಕಟಾವಿನ ಸಮಯ ತೆನೆಯಿಂದ ಭತ್ತ ನೆಲಕ್ಕೆ ಬೀಳುವುದರಿಂದ ನಿರೀಕ್ಷಿಸಿದಷ್ಟು ಬೆಳೆ(Crop) ರೈತರ(Farmers) ಕೈಗೆ ಸೇರುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಕಬ್ಬು, ಜೋಳ, ಅವರೆ ಇನ್ನಿತರ ವಾಣಿಜ್ಯ ಬೆಳೆಗಳು ಕೂಡ ಮಳೆಯಿಂದಾಗಿ ಕೃಷಿ(Agriculture) ಚಟುವಟಿ ನಡೆಸದೆ ನಷ್ಟದ ಹಾದಿಯಲ್ಲಿದ್ದು, ಬೆಳೆದ ಬೆಳೆಗಳು ಏನಾದಿತೋ ಎಂಬ ಚಿಂತೆ ರೈತರನ್ನು ಆವರಿಸಿದ್ದು, ಎಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಭಯ ಅನ್ನದಾತರನ್ನು ಕಾಡುತ್ತಿದೆ.
ಕಟಾವಿನ ಆರಂಭದಲ್ಲಿ ಸುಗ್ಗಿ ಸಂಭ್ರಮ ಸಡಗರದೊಂದಿಗೆ ಭತ್ತ(Paddy) ಕಟಾವು ಮಾಡಿ, ಭತ್ತ ರಾಶಿಯನ್ನು ಮನೆಗೆ ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಕಟಾವು ಮಾಡುತ್ತಿದ್ದ ಕೃಷಿಕರು, ನೋವುಗಳನ್ನು ಮರೆತು ಸಂಜೆಯ ತನಕ ಖುಷಿಯಿಂದ ಕಟಾವು ಮಾಡುತ್ತಿದ್ದರು. ಆದರೀಗ ನಿರಂತರ ಮಳೆಯ ಕಾರಣದಿದಂತ ಆಸೆಗೆಲ್ಲ ತಣ್ಣೀರೆರೆಚಿದಂದಾಗಿದೆ. ಭತ್ತದ ಗದ್ದೆಗಳು ಹಸಿಯಾಗಿಯೇ ಇವೆ. ಇದರಿಂದಾಗಿ ಯಂತ್ರಗಳಿಂದಾಗಲಿ, ಕೂಲಿ ಕಾರ್ಮಿಕರಿಂದಾಗಲಿ ಕಟಾವು ನಡೆಸಲಾಗದೆ ಅಡಕತ್ತರಿಗೆ ಸಿಲುಕಿದ್ದಾರೆ.