ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾನುವಾರ ನಿರಂತರ ಮಳೆ ಸುರಿದಿದೆ. ಮಲೆನಾಡಿನಲ್ಲಿ ಬತ್ತದ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತ ಬಯಲುಸೀಮೆಯಲ್ಲೂ ಬಿತ್ತನೆ ಕಾರ್ಯ ಚುರುಕಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜೂ.15): ಜಿಲ್ಲೆಯಲ್ಲಿ ಭಾನುವಾರವೂ ಮಳೆ ಮುಂದುವರಿದಿತ್ತು. ಆದರೆ, ಮಳೆಯ ಪ್ರಮಾಣ ಸಾಧಾರಣವಾಗಿದ್ದು, ಆಗಾಗ ತುಂತುರು ಮಳೆ ಬರುತ್ತಿದೆ. ಇದರ ಜತೆಗೆ ಥಂಡಿ ಗಾಳಿ ಬೀಸುತ್ತಿದೆ. ಮಳೆ ಬರುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಮಲೆನಾಡಿನಲ್ಲಿ ಬತ್ತದ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತ ಬಯಲುಸೀಮೆಯಲ್ಲೂ ಬಿತ್ತನೆ ಕಾರ್ಯ ಚುರುಕಾಗಿದೆ.
ಶೃಂಗೇರಿಯಲ್ಲಿ ಭಾರಿ ಮಳೆ:
ಶೃಂಗೇರಿ ತಾಲೂಕಿನಾದ್ಯಂತ ಶನಿವಾರ ಮಧ್ಯಾಹ್ನದಿಂದ ಭಾನುವಾರವೂ ಭಾರಿ ಗಾಳಿ ಮಳೆ ಸುರಿಯಿತು. ಶನಿವಾರ ಬೆಳಗ್ಗೆಯಿಂದಲೇ ಸಾಧಾರಣವಾಗಿ ಮಳೆ ಬೀಳುತ್ತಿತ್ತು. ಮಧ್ಯಾಹ್ನದಿಂದ ಮಳೆ ಜೋರಾಗಿ ಆರ್ಭಟಿಸತೊಡಗಿದೆ. ಎಡಬಿಡದೇ ಸುರಿಯಲಾರಂಭಿಸಿದ ಮಳೆ ರಾತ್ರಿಯಿಡೀ ಸುರಿದು, ಭಾನುವಾರ ಮಧ್ಯಾಹ್ನದವರೆಗೂ ಸುರಿಯಿತು.
ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ಬಿರುಸು
ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಗಾಳಿ ಸಹಿತ ಮಳೆ ಧಾರಾಕಾರವಾಗಿ ಸುರಿಯಿತು. ಕಾಲುವೆ, ಚರಂಡಿ, ಹಳ್ಳಗಳಲ್ಲಿ ನೀರು ಉಕ್ಕಿ ಹರಿಯಲಾರಂಭಿಸಿತು. ತುಂಗಾನದಿಯ ಉಗಮ ಸ್ಥಳ ಕೆರೆಕಟ್ಟೆಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ತುಂಬಿ ಹರಿಯಲಾರಂಭಿಸಿದೆ. ಮಳೆಯಿಂದ ಯಾವುದೇ ಹಾನಿಯುಂಟಾಗಿಲ್ಲ.
ತರೀಕೆರೆ ವರದಿ:
ಪಟ್ಟಣದಲ್ಲಿ ಶನಿವಾರ ಬಿದ್ದ ಮಳೆಯು ಭಾನುವಾರವೂ ಮುಂದುವರಿದಿದೆ. ಭಾನುವಾರ ಬೆಳಗಿನಿಂದಲೇ ದಟ್ಟಮೋಡ ಕವಿದಿತ್ತು, ಆಗಾಗ್ಗೆ ಸೋನೆ ಮಳೆ ಸುರಿಯುತ್ತಿತ್ತು, ಸಾಯಂಕಾಲ 4 ಗಂಟೆ ಸಮಯದಲ್ಲಿ ಇಪ್ಪತ್ತು ನಿಮಿಶ ಉತ್ತಮವಾಗಿ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.