ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ಒಂದೆರೆಡಲ್ಲ. ಕಾಫಿ ಡೇ ಸಿದ್ದಾರ್ಥ್ ಒಡೆತನಕ್ಕೆ ಸೇರಿದ ತರೀಕೆರೆ ತಾಲೂಕಿನ ನಂದಿಗಾವೆ ಕಾಫಿ ತೋಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಪರಿಣಾಮ ಕಾಫಿ ಗಿಡಗಳು ನಾಶವಾಗಿವೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ.10): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುರೆದಿದೆ. ಮಳೆಯಿಂದ ಸರಣಿ ಅನಾಹುತಗಳು ಸಂಭವಿಸಿದೆ. ಕಾಫಿ ಡೇ ಸಿದ್ದಾರ್ಥ್ ಒಡೆತನಕ್ಕೆ ಸೇರಿದ ತರೀಕೆರೆ ತಾಲೂಕಿನ ನಂದಿಗಾವೆ ಕಾಫಿ ತೋಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಪರಿಣಾಮ ಕಾಫಿ ಗಿಡಗಳು ನಾಶವಾಗಿವೆ. ಗುಡ್ಡದಿಂದ ನೂರಾರು ಕಲ್ಲುಬಂಡೆಗಳು ಜಾರಿ ಬಂದಿದ್ದು, ಸುಮಾರು ಒಂದು ಎಕರೆಗೂ ಹೆಚ್ಚು ಕಾಫಿ ತೋಟ ಹಾನಿ ಉಂಟಾಗಿದೆ. ಗುಡ್ಡ ಜರಿದ ಪರಿಣಾಮ ತೋಟದ ರಸ್ತೆಗಳಿಗೂ ಹಾನಿ ಸಂಭವಿಸಿದೆ. ಮಳೆ ಹಾಗೂ ಬಿರುಗಾಳಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಉರುಳಿಬಿದ್ದಿರುವ ಘಟನೆ ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ 11:30ರ ವೇಳೆಗೆ ಚಿಕ್ಕಮಗಳೂರಿನ ಯಾದವ್ ಎಂಬುವವರಿಗೆ ಸೇರಿದ ಆಲ್ಟೊ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಇದ್ದ ಎಲ್ಲರೂ ಅಪಾಯದಿಂದ ಪರಾಗಿದ್ದಾರೆ. ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ಪ್ರವಾಸ ಹೋಗಿ ಬರುತ್ತಿರುವ ಸಂದರ್ಭದಲ್ಲಿ ಭಾರಿ ಮಳೆಯಿಂದ ಕಾರು ಎಡ ಭಾಗಕ್ಕೆ ಜಾರಿ ಕಾಫಿ ತೋಟದ ದಿಬ್ಬಕ್ಕೆ ಗುದ್ದಿದೆ. ಸ್ಥಳೀಯರು ಟ್ರಾಕ್ಟರ್ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.
ಮೇಲ್ಚಾವಣಿ ಕುಸಿತ: ಮಳೆಯಿಂದಾಗಿ ದುರ್ಬಲಗೊಂಡಿದ್ದ ಎರಡು ಮನೆಗಳ ಮೇಲ್ಚಾವಣಿ ಕುಸಿದು ಬಿದ್ದಿದೆ.ಮೂಡಿಗೆರೆ ತಾಲ್ಲೂಕಿನ ಹಾರಮಕ್ಕಿ ಗ್ರಾಮದಲ್ಲಿ ಮಹಿಳೆ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲೇ ಮೇಲ್ಚಾವಣಿ ಕಳಚಿ ಬಿದ್ದಿದೆ. ಬೈರೇಗೌಡ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಜಖಂ ಆಗಿದ್ದು, ದವಸ, ಧಾನ್ಯ, ಪಾತ್ರಗಳಿಗೆ ಹಾನಿ ಸಂಭವಿಸಿದೆ.ಮತ್ತೋಂದಡೆ ಬೃಹತ್ ಗಾತ್ರದ ಮರ ಬಿದ್ದು ಮನೆಯ ಮೇಲ್ಚಾವಣಿ ಜಖಂಗೊಂಡ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲು ಗ್ರಾಮದಲ್ಲಿ ನಡೆದಿದೆ.ಬಾಬು ಎಂಬುವರಿಗೆ ಸೇರಿದ ಮನೆ ಗೋಡೆಗಳಿಗೂ ಹಾನಿಯಾಗಿದ್ದು ಕುಸಿದು ಬೀಳುವ ಆತಂಕ ಎದುರಾಗಿದೆ. ಪರಿಣಾಮ ಕುಟುಂಬ ಭಯದಿಂದ ಮಳೆಯಲ್ಲೇ ಹೊರಗೆ ಬಂದು ನಿಲ್ಲುವಂತಾಗಿದೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ ದಿಂದ ಇಬ್ಬರ ಸಾವು ?
ಕಳೆದ ರಾತ್ರಿ ಮನೆಯೊಂದರ ಮೇಲೆ ಮರ ಉರುಳಿಬಿದ್ದು ಇಬ್ಬರು ಮಹಿಳೆತರು ಸಾವಿಗೀಡಾಗಿರುವ ದುರ್ಘಟನೆ ಮೂಡಿಗೆರೆ ತಾಲ್ಲೂಕಿನಲ್ಲಿ ಸಂಭವಿಸಿದೆ.ಬಾಳೂರು ವ್ಯಾಪ್ತಿಯ ಕೆ.ತಲಗೂರು ಗ್ರಾಮದ ಚಂದ್ರಮ್ಮ ಮತ್ತು ಸರಿತಾ ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಸುನಿಲ್ ಮತ್ತು ದೀಕ್ಷಿತ್ ಎಂಬ ಇಬ್ಬರು ಮಕ್ಕಳು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೃತರ ಪೈಕಿ ಸರಿತಾ ತನ್ನ ಮನೆಯ ಮೇಲೆ ಮರ ಬೀಳಬಹುದು ಎನ್ನುವ ಭೀತಿಯಿಂದ ಕಳೆದ ರಾತ್ರಿ ತಮ್ಮಿಬ್ಬರು ಮಕ್ಕಳನ್ನು ಕರೆದುಕೊಂಡು ಪಕ್ಕದಲ್ಲಿದ್ದ ಚಂದ್ರಮ್ಮ ಎಂಬುವವರ ಮನೆಗೆ ಬಂದು ಮಲಗಿದ್ದರು. ಆದರೆ ಜವರಾಯ ಅವರನ್ನು ಅಲ್ಲಿಯೂ ಬಿಡದೆ ಹಿಂಬಾಲಿಸಿದ್ದಾನೆ. ಅವರು ಆಶ್ರಯ ಪಡೆದಿದ್ದ ಮನೆಯಮೇಲೂ ಮರ ಬಿದ್ದ ಪರಿಣಾಮ ಮನೆಯೊಡತಿ ಚಂದ್ರಮ್ಮ ಸೇರಿದಂತೆ ಸರಿತಾ ಸಹ ಮೃತಪಟ್ಟಿದ್ದಾರೆ.
ಮರ ಬಿದ್ದು ಎರಡು ಜೀವಗಳಿಗೆ ಕುತ್ತುಂಟಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ. ತನ್ನ ಮನೆ ಪಕ್ಕದಲ್ಲಿರುವ ಮರ ಎಂದಾದರೂ ಮನೆಯ ಮೇಲೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮರವನ್ನು ತೆರವುಗೊಳಸುವಂತೆ ಮೊದಲೇ ಈ ಮಹಿಳೆಯರು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯಅಧಿಕಾರಿಗಳಿಗೆ ಮರ ತೆರವುಗೊಳಿಸುವಂತೆ ಮಹಿಳೆ ಪರಿಪರಿಯಾಗಿ ಮನವಿ ಮಾಡಿದ್ದರೂ ಯಾರೂ ಕಿವಿಗೊಡದ ಕಾರಣ ಎರಡು ಜೀವ ಹಾನಿಯಾಗಿದೆ.
UDUPI; ಸಮುದ್ರದಲ್ಲಿ ರಾಶಿ ರಾಶಿ ಹೊಳೆ ಮೀನುಗಳು, ರಾತ್ರಿ ಹಗಲೆನ್ನದೆ ಕಾಯೋ ಜನ
ಮೃತರ ಸಂಖ್ಯೆ 5 ಕ್ಕೆ ಏರಿಕೆ: ವರುಣನ ಆರ್ಭಟಕ್ಕೆ ಈ ವರ್ಷ ಮೃತಪಟ್ಟರವರ ಸಂಖ್ಯೆ 5 ಕ್ಕೇರಿದೆ. ನಿನ್ನೆಯಷ್ಟೆ ಎನ್ಆರ್ಪುರ ತಾಲ್ಲೂಕಿನಲ್ಲಿ ಪ್ರಸನ್ನ ಎಂಬುವವರು ಕಾರು ಸಮೇಯ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು. ಇದಕ್ಕೆ ಮುನ್ನ ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆಯಲ್ಲಿ ಶಾಲಾ ಬಾಲಕಿ ಹಾಗೂ ಕಳಸ ತಾಲ್ಲೂಕಿನಲ್ಲಿ ತೋಟದ ಕಾರ್ಮಿಕ ಯುವತಿ ಮರಬಿದ್ದು ಮೃತಪಟ್ಟಿದ್ದರು. ನಿನ್ನೆ ರಾತ್ರಿ ಮೆನೆಯ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 5 ಕ್ಕೇರಿದೆ.
ಚಿಕ್ಕಮಗಳೂರಲ್ಲಿ ಭಾರೀ ಮಳೆ: ಮನೆ ಮೇಲೆ ಮರ ಬಿದ್ದು ಇಬ್ಬರ ದುರ್ಮರಣ
ಶಾಲೆಗಳಿಗೆ ರಜೆ: ಮಳೆ ಮಳೆಯಿಂದ ಅನಾಹುತಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕಿ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಈ ಸಂಬಂಧ ಬಿಇಓ ಆದೇಶ ಹೊರಡಿಸಿದ್ದಾರೆ.ಮಳೆ ಪ್ರಮಾಣವನ್ನು ನೋಡಿಕೊಂಡು ಗುರುವಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಮನೆಯ ಮೇಲೆ ಮರ ಬಿದ್ದ ಘಟನೆ ಸೇರಿದಂತೆ ಮೊನ್ನೆ ಬಣಕಲ್ನಲ್ಲಿ ಶಾಲೆಯ ಮೇಲ್ಚಾವಣಿಯೊಂದು ಕುಸಿದು ಹಾನಿ ಸಂಭವಿಸಿದ್ದ ಕಾರಣ ಶಾಲೆಗಳಿಗೆ ರಜೆ ನೀಡಬೇಕು ಎನ್ನುವ ಒತ್ತಡಗಳು ಬಂದಿದ್ದರಿಂದ ರಜೆ ಘೋಷಿಸಲಾಗಿದೆ.