ಮಳೆ ಅಬ್ಬರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿ ನೀರಿನ ಹರಿವು ಹೆಚ್ಚಳಗೊಂಡು ಅಪಾಯದ ಮಟ್ಟ ಮುಟ್ಟಿವೆ. ಅನಾಹುತಗಳ ಸರಣಿ ಮುಂದುವರಿದಿದ್ದು, ಜನತೆ ಪ್ರತಿ ಕ್ಷಣವನ್ನೂ ಆತಂಕದಲ್ಲೇ ಕಳೆಯುವಂತಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.13): ಮಳೆ ಅಬ್ಬರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿ ನೀರಿನ ಹರಿವು ಹೆಚ್ಚಳಗೊಂಡು ಅಪಾಯದ ಮಟ್ಟ ಮುಟ್ಟಿವೆ. ಅನಾಹುತಗಳ ಸರಣಿ ಮುಂದುವರಿದಿದ್ದು, ಜನತೆ ಪ್ರತಿ ಕ್ಷಣವನ್ನೂ ಆತಂಕದಲ್ಲೇ ಕಳೆಯುವಂತಾಗಿದೆ.
ಮಲೆನಾಡಿನಲ್ಲಿ ಭೂ ಕುಸಿತ-ಮರಗಳು ಧರೆಗೆ: ನಿರಂತರ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿರುವ ಕಾರಣ ಧರೆ ಕುಸಿತ, ಮನೆಗಳು ಹಾಗೂ ರಸ್ತೆಗಳಿಗೆ ಹಾನಿ ಸಂಭವಿಸುತ್ತಲೇ ಇದೆ. ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಾಣುತ್ತಲೇ ಇಲ್ಲ.
ಭಾರೀ ಮಳೆಗೆ ರಸ್ತೆ ಕುಸಿತ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ರಸ್ತೆ ಸಮೇತ ಭೂ ಕುಸಿತ ಸಂಭವಿಸಿದೆ. ಕಳೆದ ಎರಡು ವರ್ಷದ ಹಿಂದೆಯೂ ಇದೇ ಜಾಗದಲ್ಲಿ ಕುಸಿತ ಸಂಭವಿಸಿತ್ತು. ಇದರಿಂದಾಗಿ ಉತ್ತಿನಗದ್ದೆ-ಶುಂಠಿಕೂಡಿಗೆ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
Chikkamagaluru: ಕಾಣೆಯಾಗಿದ್ದ ಬಸವನನ್ನು ಹುಡುಕಿ ದೇವಾಲಯಕ್ಕೆ ಒಪ್ಪಿಸಿದ ಪೊಲೀಸರು!
ತೋಟ ಜಲಾವೃತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಅಯ್ಯನ ಕೆರೆ ಕೋಡಿ ಬಿದ್ದ ನಂತರ ಭಾರೀ ಪ್ರಮಾಣದ ನೀರು ಹೊರ ಹೋಗುತ್ತಿದ್ದು, ಪಿಳ್ಳೇನಹಳ್ಳಿ ಗ್ರಾಮದ ಬಳಿ ಅಡಿಕೆ ಹಾಗೂ ತೆಂಗಿನ ತೋಟಗಳು ಜಲಾವೃತಗೊಂಡಿದೆ. ರೈತರು ಪರದಾಡುತ್ತಿದ್ದು, ಸೇತುವೆಯ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಸಂಕಷ್ಟ ಎದುರಾಗಿದೆ ಎಂದು ರೈತರು ದೂರಿದ್ದಾರೆ. ಹಳ್ಳದ ಅಂಚಿನ ಜಮೀನುಗಳಿಗೆ ಇನ್ನೂ ಭಾರೀ ಪ್ರಮಾಣದಲ್ಲಿ ನೀರು ನುಗ್ಗುತ್ತಿದೆ.
ಕೆಸರು ಗದ್ದೆಯಾದ ರಸ್ತೆ: ಮಳೆ ಆರ್ಭಟಕ್ಕೆ ರಸ್ತೆ ಕೆಸರು ಗದ್ದೆಯಂತಾಗಿರುವ ಪ್ರಕರಣ ತರೀಕೆರೆ ತಾಲ್ಲೂಕಿನ ಹೆಚ್.ಮಲ್ಲೇಹನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಸ್ತೆಯಲ್ಲಿ ಕಾಲಿಟ್ಟರೆ ಹೂತುಕೊಳ್ಳುವಷ್ಟು ಕೆಸರು ನಿರ್ಮಾಣವಾಗಿದೆ. ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರ ಓಡಾಟಕ್ಕೆ ತೀವ್ರ ತೊಡಕಾಗಿದೆ.ಸ್ಥಳೀಯಾಡಳಿತ ಮತ್ತು ಶಾಸಕರು ರಸ್ತೆ ದುರಸ್ಥಿ ಬಗ್ಗೆ ಕಾಳಜಿ ವಹಿಸದಿರುವುದು ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಹಾರಿ ಹೋದ ಮೇಲ್ಚಾವಣಿ: ಗಾಳಿ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಹಾರಿಹೋದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಗ್ರಾಮದಲ್ಲಿ ನಡೆದಿದೆ. ಮೇಲ್ಚಾವಣಿ ಹಾರುತ್ತಿದ್ದಂತೆ ಮನೆ ಹಿಂಭಾಗದ ಗೋಡೆಯೂ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದರು ಜೀವಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಹಾನಿಗೀಡಾಗಿದ್ದು, ಮನೆ ಕಳೆದುಕೊಂಡ ನಿವಾಸಿಗಳು ಬೀದಿಗೆ ಬಿದ್ದಂತಾಗಿದೆ.
ಪತ್ತೆಯಾಗದ ವ್ಯಕ್ತಿ: ಪ್ಲಾಸ್ಟಿಕ್ ಬಾಟಲಿಗಳನ್ನು ಆಯಲು ಹೋಗಿ ನಗರದ ಉಂಡೇದಾಸರಹಳ್ಳಿ ಬಳಿ ಯಗಚಿ ಕಾಲುವೆಯಲ್ಲಿ ಕೊಚ್ಚಿ ಹೋದ ಸೂರ್ಯ ಎನ್ನುವ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ಮಂಗಳವಾರ ಸಂಜೆ ಆತನ ಪತ್ನಿ ಹಳ್ಳದ ಬದಿ ಬಾಟಲಿ ಹೆಕ್ಕುವಾಗ ಹಳ್ಳದಲ್ಲಿ ಕೊಚ್ಚಿಹೋಗುವುದನ್ನು ತಪ್ಪಿಸಲು ಹೋದ ಸೂರ್ಯ ಆಕೆಯನ್ನು ಬದುಕಿಸಿ ತಾನು ತುಂಬಿ ಹರಿಯುವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಇಂದೂ ಎಸ್ಡಿಆರ್ಎಫ್ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗಳು ಬೆಳಗಿನಿಂದಲೇ ಆತನ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಹಳ್ಳ ತುಂಬಿ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಆಯುಕ್ತ ಬಸವರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದು ಸಹಕರಿಸುತ್ತಿದ್ದಾರೆ.
ಬಾಲಕಿ ಇನ್ನೂ ನಾಪತ್ತೆ: ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕಳೆದ 10 ದಿನಗಳ ಹಿಂದೆ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಶಾಲಾ ಬಾಲಕಿ ಸುಪ್ರಿತಾ ಈವರೆಗೆ ಪತ್ತೆಯಾಗಿಲ್ಲ. ಪ್ರತಿದಿನ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗದ ಕಾರಣ ಕುಟುಂಬ ಇನ್ನೂ ಕಣ್ಣೀರಿಡುತ್ತಿದೆ.
ಚಿಕ್ಕಮಗಳೂರು ನೆರೆ ಪ್ರದೇಶಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಪರಿಶೀಲನೆ
ಶೃಂಗೇರಿ ಶಾಲೆಗೆ ರಜೆ: ಮಳೆ ಕಾರಣಕ್ಕೆ ಮಲೆನಾಡು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ನೀಡಿದ್ದ ರಜೆ ಮಂಗಳವಾರ ಮುಕ್ತಾಯವಾಗಿದೆ. ಮಳೆ ಇನ್ನೂ ಮುಂದುವರೆದು ಅನಾಹುತಗಳು ಸಂಭವಿಸುತ್ತಲೇ ಇದೆ. ಆದರೆ ಶಾಲೆಗಳನ್ನು ಆರಂಭಿಸುವ ಕುರಿತು ಜಿಲ್ಲಾಡಳಿತ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಶೃಂಗೇರಿ ತಾಲ್ಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.