ಮಂಗಳಮುಖಿಯರನ್ನು ಕಾಂಗ್ರೆಸ್‌ ಗ್ಯಾರಂಟಿಗೆ ಪರಿಗಣಿಸಿ: ನಾವೇನು ಪಾಪ ಮಾಡಿದ್ದೇವೆ, ಮಂಜಮ್ಮ ಪ್ರಶ್ನೆ

By Kannadaprabha News  |  First Published Jun 2, 2023, 1:34 PM IST

ಕಾಂಗ್ರೆಸ್‌ ಗ್ಯಾರಂಟಿಗಾಗಿ ಮಂಗಳಮುಖಿಯರ ಹಕ್ಕೊತ್ತಾಯ, ಮತ ಹಾಕಿಸಿಕೊಳ್ಳುವಾಗ ಮನೆಗೆ ಬರುತ್ತೀರಿ, ಈಗೇಕೆ ನಮ್ಮನ್ನು ಕಡೆಗಣಿಸಿದ್ದೀರಿ: ಮಂಗಳಮುಖಿಯರ ಪ್ರಶ್ನೆ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.02):  ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಘೋಷಿಸಿರುವ ‘ಗೃಹಲಕ್ಷ್ಮಿ ಭಾಗ್ಯ’ ಕುಟುಂಬದ ಸೊಸೆಗೊ, ಅತ್ತೆಗೊ ಎನ್ನುವ ಬಿಸಿಬಿಸಿ ಚರ್ಚೆ ನಡೆದಿರುವಾಗ ಮಂಗಳಮುಖಿಯರು ‘ಗ್ಯಾರಂಟಿಗಳಿಗೆ ನಮ್ಮನ್ನೂ ಪರಿಗಣಿಸಿ’ ಎಂಬ ಹಕ್ಕೊತ್ತಾಯವನ್ನು ಸರ್ಕಾರದ ಮುಂದಿಟ್ಟಿದ್ದಾರೆ.

Tap to resize

Latest Videos

ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮಿ (ಮನೆಯೊಡತಿಗೆ .2000), ಮಹಿಳೆಯರಿಗೆ ಉಚಿತ ಸಾರಿಗೆ, 200 ಯುನಿಟ್‌ ಉಚಿತ ವಿದ್ಯುತ್‌ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಅಂದುಕೊಂಡಂತೆ ಇದಕ್ಕೆ ಜನತೆಯಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿ ಕಾಂಗ್ರೆಸ್‌ ಸರ್ಕಾರವೇ ಆಡಳಿತಕ್ಕೆ ಬಂದಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಐದು ಗ್ಯಾರಂಟಿಗಳಲ್ಲಿ ಮೂರನ್ನು ಜಾರಿಗೊಳಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.

ಗ್ಯಾರಂಟಿ ಅನುಷ್ಠಾನ ಖಚಿತ: ಪರಮೇಶ್ವರ್‌

ನಮ್ಮನ್ನೇಕೆ ಕಡೆಗಣಿಸ್ತೀರಿ?:

ಗ್ಯಾರಂಟಿ ಘೋಷಿಸುವಾಗ ಆಗಲಿ, ಈಗ ಜಾರಿಗೊಳಿಸುವ ವೇಳೆಯಲ್ಲಾಗಲಿ ಮಂಗಳಮುಖಿಯರ ಪ್ರಸ್ತಾಪವೇ ಇಲ್ಲ. ಇದು ಮಂಗಳಮುಖಿಯರಿಗೆ ಮಾಡುತ್ತಿರುವ ಅವಮಾನ ಎನ್ನುವ ಅಸಮಾಧಾನ ಕೇಳಿಬಂದಿದೆ. ರಾಜ್ಯದಲ್ಲಿ ಮಂಗಳಮುಖಿಯರು (ತೃತೀಯಲಿಂಗಿಯರು) 3-4 ಲಕ್ಷ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 41,312 ಜನ ಮತದಾರರಿದ್ದಾರೆ. ಕೆಲವರು ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಮತದಾರರ ಸಂಖ್ಯೆಯಲ್ಲಿ ಕಡಿಮೆ ಇದೆ.

‘ಮಹಿಳೆಯರಂತೆ ನಾವೂ ಸೀರೆ ಉಡುತ್ತೇವೆ, ಅವರಂತೆ ಬದುಕು ಸಾಗಿಸುತ್ತೇವೆ. ಎಷ್ಟೋ ಜನ ರಸ್ತೆ ಬದಿಗಳಲ್ಲಿ, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡಿಯೇ ಜೀವನ ನಿರ್ವಹಣೆ ಮಾಡುತ್ತಾರೆ. ಸಮಾಜದಲ್ಲಿ ಈಗಲೂ ನಮ್ಮನ್ನು ಅತ್ಯಂತ ಕೀಳಾಗಿ ನೋಡಲಾಗುತ್ತಿದೆ. ಹಾಗೆ ನೋಡಿದರೆ ಸರ್ಕಾರಗಳ ಸೌಲಭ್ಯಗಳು ಮೊದಲು ನಮಗೇ ಸಲ್ಲಬೇಕು. ಆದರೆ ಪ್ರತಿ ಸರ್ಕಾರಗಳು ಸೌಲಭ್ಯಗಳನ್ನು ಘೋಷಿಸುವಾಗ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ನಮ್ಮನ್ನೇಕೆ ಕಡೆಗಣಿಸಲಾಗುತ್ತಿದೆ ಎಂಬುದೇ ತಿಳಿಯುವುದಿಲ್ಲ’ ಎನ್ನುವುದು ಮಂಗಳಮುಖಿಯರ ಪ್ರಶ್ನೆ.

ತಾಳ್ಮೆಯಿಂದ ಇರಿ, ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್

ಮತ ಕೇಳುವಾಗ ಬರ್ತಾರೆ:

ಮತ ಕೇಳುವಾಗ ಮಾತ್ರ ನಾವು ನೆನಪಿಗೆ ಬರುತ್ತೇವೆ. ಆಗ ನಮ್ಮನೆಗೆ ಬಂದು ನಮಗೆ ಮತ ಹಾಕಿ ಎಂದು ಎಲ್ಲ ರಾಜಕೀಯ ಪಕ್ಷಗಳು ಬೆನ್ನು ಹತ್ತುತ್ತವೆ. ಆದರೆ ಸೌಲಭ್ಯಕ್ಕೆ ಮಾತ್ರ ನಾವು ಬೇಡ. ನಾವೇನು ಪಾಪ ಮಾಡಿದ್ದೇವೆ? ಎಂದು ಪ್ರಶ್ನಿಸುವ ಹುಬ್ಬಳ್ಳಿಯ ಮಂಗಳಮುಖಿಯೊಬ್ಬರು, ಕಾಂಗ್ರೆಸ್‌ ಸರ್ಕಾರ ಇದೀಗ ಜಾರಿಗೊಳಿಸುತ್ತಿರುವ ಗೃಹಲಕ್ಷ್ಮಿ ಹಾಗೂ ಉಚಿತ ಸಾರಿಗೆ ಸೇರಿದಂತೆ ಎಲ್ಲ ಗ್ಯಾರಂಟಿಗಳಲ್ಲೂ ನಮ್ಮ ಸಮುದಾಯವನ್ನೂ ಉಲ್ಲೇಖಿಸಬೇಕು. ನಮಗೂ ಈ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದಲ್ಲಿ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದರು.

ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷವರೆಗೆ ಮಂಗಳಮುಖಿಯರಿದ್ದಾರೆ. ಇದು ಅಂದಾಜು. ಈ ಸಂಖ್ಯೆ ಇನ್ನು ಹೆಚ್ಚಿರಬಹುದು. ಎಲ್ಲ ಪಕ್ಷಗಳು ಸರ್ಕಾರ ಬಗ್ಗೆ ಅನುಕಂಪ ಪಡುತ್ತವೆಯೇ ಹೊರತು ಸೌಲಭ್ಯದ ವಿಷಯಕ್ಕೆ ಬಂದಾಗ ಕಡೆಗಣಿಸುತ್ತವೆ. ಇದೀಗ ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ, ಉಚಿತ ಸಾರಿಗೆ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳೂ ನಮಗೂ ಸಿಗುವಂತಾಗಬೇಕು ಅಂತ ಪದ್ಮಶ್ರೀ ಮಂಜಮ್ಮ ಜೋಗತಿ ತಿಳಿಸಿದ್ದಾರೆ. 

click me!