ಬಿಸಿಯೂಟ ತಯಾರಕರ ಕೆಲಸ ಕಾಯಂ ಮಾಡಿ: ಕಾಂತರಾಜು

By Kannadaprabha News  |  First Published Feb 12, 2023, 5:48 AM IST

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರು ಬಿಡಿಗಾಸಿಗೆ ದುಡಿಯುತ್ತಿದ್ದು, ಸೇವಾ ಭದ್ರತೆಯಿಲ್ಲದೆ ನರಳುತ್ತಿದ್ದಾರೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್‌ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು ಅಸಮಾಧಾನ ವ್ಯಕ್ತಪಡಿಸಿದರು.


  ತುಮಕೂರು :  ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರು ಬಿಡಿಗಾಸಿಗೆ ದುಡಿಯುತ್ತಿದ್ದು, ಸೇವಾ ಭದ್ರತೆಯಿಲ್ಲದೆ ನರಳುತ್ತಿದ್ದಾರೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್‌ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Tap to resize

Latest Videos

2003ರಲ್ಲಿ ಬಿಸಿಯೂಟ ಕೆಲಸಗಾರರಿಗೆ ಕೇವಲ ಮಾಸಿಕ 300 ರು.ಗಳನ್ನು ನೀಡುವ ಮೂಲಕ ಕೆಲಸಕ್ಕೆ ನೇಮಿಸಿಕೊಂಡ ಸರ್ಕಾರ, ಹಲವು ಹೋರಾಟಗಳ ಫಲವಾಗಿ ಇಂದು 3600 ರಿಂದ 3700 ರು.ಗಳನ್ನು ನೀಡುತ್ತಿದೆ. ಬಿಸಿಯೂಟದ ಕೆಲಸದ ಜೊತೆಗೆ ಶಾಲೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆಯವರೆಗೂ ಇತರೆ ಕೆಲಸಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಠ 31,500 ರು.ಗಳು ಮಾಸಿಕ ವೇತನ ಜಾರಿಗೊಳಿಸಬೇಕು. ಬಿಸಿಯೂಟ ತಯಾಕರಿಗೆ ಉತ್ತರ ಪ್ರದೇಶದ ಅಲಹಬಾದ್‌ ಹೈಕೋರ್ಚ್‌ ಆದೇಶ ಸಂಖ್ಯೆ (9927/2020) (15/12/2020) ಆದೇಶಿಸಿರುವಂತೆ ಅವರ ಕೆಲಸವನ್ನು ಕಾಯಂಗೊಳಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಬಿಸಿಯೂಟ ತಯಾರಿಕೆ ಯೋಜನೆ ಎನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮವೆಂದು ಮಾರ್ಪಡಿಸಬೇಕು. ಬಿಸಿಯೂಟ ಅಡುಗೆ ತಯಾರಕರನ್ನು ಗೌರವ ಕಾರ್ಯಕರ್ತೆಯರು ಎಂಬುದನ್ನು ಕೈಬಿಟ್ಟು ಕಾರ್ಮಿಕರು ಎಂದು ಘೋಷಿಸಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು. 60 ವರ್ಷ ವಯೋಮಾನ ಮೀರಿ ನಿವೃತ್ತಿಯಾದವರಿಗೆ ರು. 2 ಲಕ್ಷ ಇಡುಗಂಟು ನೀಡಬೇಕು ಮತ್ತು ಮಾಸಿಕ ಪಿಂಚಣಿ 3000 ರು. ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಬಿಸಿಯೂಟ ತಯಾರಕರ ಫೆಡರೇಷನ್‌ (ಎಐಟಿಯುಸಿ)ನೇತೃತ್ವದಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 15ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ಕರ್ನಾಟಕ ರಾಜ್ಯ ಸಮಿತಿ ತೀರ್ಮಾನಿಸಿದ್ದು ಜಿಲ್ಲೆಯಿಂದಲೂ ಬಿಸಿಯೂಟ ತಯಾರಕರು ಭಾಗವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸಂಚಾಲಕಿ ಎ.ಬಿ. ಉಮಾದೇವಿ, ಸಾವಿತ್ರಮ್ಮ, ಗುಬ್ಬಿ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಿ, ಕೊರಟಗೆರೆಯ ಸಂಚಾಲಕಿ ಪಾರ್ವತಮ್ಮ, ತುಮಕೂರು ತಾಲೂಕು ಅಧ್ಯಕ್ಷೆ ರಾಧಮ್ಮ, ಶಿರಾ ಅಧ್ಯಕ್ಷೆ, ಪುಷ್ಪಲತ, ಕೊರಟಗೆರೆ ತಾಲೂಕು ಅಧ್ಯಕ್ಷೆ ಲಕ್ಷ್ಮಮ್ಮ, ರೇಣುಕಮ್ಮ, ನಾಗರತ್ನಮ್ಮ, ಮಂಜುಳ, ಶಾಂತಮ್ಮ, ನಾಗರತ್ನಮ್ಮ, ಮೀನಾ, ರಾಧ, ರಾಜಮ್ಮ ಇತರರು ಇದ್ದರು.

ಕಳೆದ 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸತತವಾಗಿ ಬಿಸಿಯೂಟ ತಯಾರು ಮಾಡುವ ಮಹಿಳೆಯರಿಗೆ ಸೂಕ್ತ ಸೌಲಭ್ಯ ಹಾಗೂ ಸೂಕ್ತ ಮಾಸಿಕ ವೇತನ ನೀಡದೆ ಅತ್ಯಂತ ಕಡಿಮೆ ಬೆಲೆಗೆ ಗೌರವಧನದ ಹೆಸರಿನಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ನೌಕರರ ಕೆಲಸವನ್ನು ಕಾಯಂ ಮಾಡಿ ಕೂಡಲೇ ಆದೇಶ ಹೊರಡಿಸಬೇಕು, 60 ವರ್ಷ ಮೇಲ್ಪಟ್ಟಬಿಸಿಯೂಟ ತಯಾರಿಕೆ ಮಹಿಳೆಯರಿಗೆ ಕನಿಷ್ಠ ಪಿಂಚಣಿ 3000 ರು.ನೀಡಬೇಕು, 2 ಲಕ್ಷ ರು.ಇಡುಗಂಟು ನೀಡಬೇಕು.

ಕಾಂತರಾಜು ಜಿಲ್ಲಾ ಸಂಚಾಲಕ ಬಿಸಿಯೂಟ ತಯಾರಕರ ಫೆಡರೇಷನ್‌

click me!