ಊರಿನ ಅನುಕೂಲಕ್ಕಾಗಿ ಹಿಂದೆ ರಾಜಮಹಾರಾಜರು, ಗ್ರಾಮಸ್ಥರು ಕಟ್ಟಿಸಿದ್ದ ಕೆರೆಗಳನ್ನು ಸಂರಕ್ಷಣಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವುಗಳ ಉಳಿವು ಅಗತ್ಯ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರು : ಊರಿನ ಅನುಕೂಲಕ್ಕಾಗಿ ಹಿಂದೆ ರಾಜಮಹಾರಾಜರು, ಗ್ರಾಮಸ್ಥರು ಕಟ್ಟಿಸಿದ್ದ ಕೆರೆಗಳನ್ನು ಸಂರಕ್ಷಣಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವುಗಳ ಉಳಿವು ಅಗತ್ಯ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಉಪ್ಪಾರಹಳ್ಳಿ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಗರದ ಉಪ್ಪಾರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ನಡೆದ ‘ನಮ್ಮೂರು ನಮ್ಮ ಕೆರೆ’ ಎಂಬ ಕೆರೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಊರಿನ ಕೆರೆಗಳ ಉಳಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿ, ಕೆರೆಗಳ ಪುನಶ್ಚೇತನಗೊಳಿಸಿ ಸಂರಕ್ಷಣೆ ಮಾಡುವ ಧರ್ಮಸ್ಥಳ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.
ಮಹಿಳೆಯರಿಗೆ ವಿವಿದ್ದೋದ್ದೇಶಕ್ಕಾಗಿ ಸಾಲ ನೀಡುವುದು, ಸ್ವಯಂ ಉದ್ಯೋಗ ಆರಂಭಿಸಿ ಹೆಣ್ಣುಮಕ್ಕಳನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದು, ಕುಡಿತದ ಚಟ ಬಿಡಿಸಲು ಅನೇಕ ಮದ್ಯವ್ಯಸನ ಶಿಬಿರ ಆಯೋಜಿಸಿ ಹಲವು ಸಂಸಾರಗಳ ನೆಮ್ಮದಿಗೆ ಕಾರಣವಾಗುವಂತಹ ಅನೇಕ ಜನಪರ ಯೋಜನೆಗಳಿಗೆ ಧರ್ಮಸ್ಥಳ ಸಂಸ್ಥೆ ಜನಮನ್ನಣೆ ಪಡೆದಿದೆ. ಕೆರೆಗಳ ಪುನಶ್ಚೇತನ, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮೂಲಕ ಜನರಿಗೆ ಅನುಕೂಲ ಮಾಡಿರುವ ಸಂಸ್ಥೆ ಸರ್ಕಾರ ಮಾಡಲಾಗದ ಅನೇಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೆಗಳ ಪುನಶ್ಚೇತನ ಕಾರ್ಯ ಕಠಿಣ ಕೆಲಸ, ಆದರೂ ಧರ್ಮಸ್ಥಳ ಸಂಸ್ಥೆ ರಾಜ್ಯದಲ್ಲಿ 626ಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆದು, ಕೆರೆಗಳ ಪುನಶ್ಚೇತನ ಮಾಡಿ ನೀರು ಸಂಗ್ರಹವಾಗಲು ಅನುಕೂಲ ಮಾಡಿದೆ. ಇಂತಹ ಅನೇಕ ಸೇವಾ ಕಾರ್ಯಗಳ ನೇತೃತ್ವ ವಹಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ ಎಂದು ಸಚಿವರು ಹೇಳಿದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆರೆಗಳಲ್ಲಿ ನಾವು ಮುಳುಗುವ ಸಾಧ್ಯತೆಗಳಿವೆ. ಆದರೆ ಈಗ ಕೆರೆಯನ್ನೇ ಮುಳಗಿಸುವವರಿದ್ದಾರೆ. ಕೆರೆಗಳನ್ನು ರಕ್ಷಣೆ ಮಾಡಬೇಕು. ಉತ್ತಮ ಪರಿಸರ ಕಾಪಾಡಬೇಕು ಎಂಬ ಜವಾಬ್ದಾರಿ ಎಲ್ಲರಲ್ಲೂ ಮೂಡಬೇಕು. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯನ್ನು ಛಾಯಾ ಸರ್ಕಾರ ಎಂದು ಸ್ವಾಮೀಜಿ ಬಣ್ಣಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕ್ರಾಂತಿಕಾರಕ ಕೆಲಸಗಳಾಗುತ್ತಿವೆ. ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಚಟುವಟಿಕೆ ನಡೆಸಿ ಸ್ವಾವಲಂಬಿಯಾಗಿ ಬಾಳಲು ಸಹಕಾರ ನೀಡುತ್ತಿದೆ. ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚತನಕ್ಕೆ ಒತ್ತು ನೀಡುತ್ತಾ ನಮ್ಮ ಸಂಸ್ಕೃತಿ, ಜೀವನ ಕ್ರಮವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯರಾದ ಮುಜಿದಾ ಖಾನಂ, ಶಿವರಾಂ, ವಿಷ್ಣುವರ್ಧನ್, ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಜಿಲ್ಲಾ ನಿರ್ದೇಶಕಿ ಜಯಶೀಲಾ, ಯೋಜನಾಧಿಕಾರಿ ಸುನಿತಾ ಪ್ರಭು, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಶೋತ್ತಮ್ ಮೊದಲಾದವರು ಭಾಗವಹಿಸಿದ್ದರು.
ಒತ್ತುವರಿ ತೆರವಿಗೆ ಸೂಚನೆ
ಉಪ್ಪಾರಹಳ್ಳಿ ಕೆರೆ ಜಾಗವನ್ನು ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಗಡಿ ನಿಗದಿಗೊಳಿಸಿ, ಅಗತ್ಯ ಸೌಲಭ್ಯ ಒದಗಿಸಿ ಎಂದು ಸಚಿವ ಡಾ.ಪರಮೇಶ್ವರ್ ಅವರು ನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಸೂಚಿಸಿದರು.