ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ

By Kannadaprabha News  |  First Published Jan 9, 2024, 12:11 PM IST

ಅರಣ್ಯ ಸಂಪತ್ತಿನ ಅಭಿವೃದ್ಧಿಯಲ್ಲಿ ರೈತನ ಪಾತ್ರವಹಿಸುವ ಪಕ್ಷಿಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ ಅಭಿಪ್ರಾಯಪಟ್ಟರು.


  ಹುಣಸೂರು :  ಅರಣ್ಯ ಸಂಪತ್ತಿನ ಅಭಿವೃದ್ಧಿಯಲ್ಲಿ ರೈತನ ಪಾತ್ರವಹಿಸುವ ಪಕ್ಷಿಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಪಕ್ಷಿ ದಿನಾಚರಣೆ ಅಂಗವಾಗಿ ಪ್ರಾದೇಶಿಕ ವಿಭಾಗದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಹೊರವಲಯದ ಕಲ್ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Tap to resize

Latest Videos

undefined

ಪಕ್ಷಿಗಳು ವಿವಿಧ ರೀತಿಯಲ್ಲಿ ಕೂಗುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.ಗಳ ಕೂಗು ಅವುಗಳ ಅಭಿವ್ಯಕ್ತಿಯ ಸಾಧನವಾಗಿದೆ. ಪಕ್ಷಿ ಹೆದರಿದಾಗ, ಹಸಿವಾದಾಗ, ಖುಷಿಯಾದಾಗ ಇನ್ನಿತರ ಸಂದರ್ಭಗಳಲ್ಲಿ ಕೂಗುವ ಧಾಟಿ ಬೇರೆ ಬೇರೆಯದ್ದಾಗಿರುತ್ತದೆ. ಅವುಗಳ ಭಾವನೆಯನ್ನು ಅರ್ಥೈಸಿಕೊಳ್ಳುವಲ್ಲಿ ನಾವೆಲ್ಲರೂ ಎಡವಿದ್ದೇವೆ ಎಂದರು.

ಪಕ್ಷಿ ಮರದ ಹಣ್ಣನ್ನು ತಿಂದು ಬೀಜವನ್ನು ನೆಲದಲ್ಲಿ ಹಾಕಿ ಮತ್ತೆ ಬೆಳೆಯುವಂತೆ ಮಾಡುವ ಮೂಲಕ ಬಿತ್ತನೆ ಕಾರ್ಯದ ಮೂಲಕ ಅರಣ್ಯದ ರೈತನ ಪಾತ್ರ ವಹಿಸುತ್ತದೆ. ಪ್ರಕೃತಿಯ ಸಂರಕ್ಷಣೆ ಮತ್ತು ಪ್ರಾಕೃತಿಕ ಆಹಾರ ಚಕ್ರದಲ್ಲಿ ಪಕ್ಷಿಗಳ ಪಾತ್ರ ಬಹುದೊಡ್ಡದು. ಯುವಸಮೂಹ ಪಕ್ಷಿವೀಕ್ಷಣೆಯನ್ನು ಹವ್ಯಾಸವನ್ನಾಗಿಸಕೊಂಡು ಆಗಾಗ ಅರಣ್ಯ ಪ್ರದೇಶದಲ್ಲಿ ಪ್ರಶಾಂತವಾಗಿ ಕುಳಿತು ಪಕ್ಷಿಗಳ ಕೂಗು ಮತ್ತು ವೀಕ್ಷಣೆ ಮಾಡಿದಲ್ಲಿ ಅವುಳನ್ನು ಅರ್ಥ ಮಾಡಿಕೊಳ್ಳಬಹುದು. ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳಿವೆ. ದೇಶದಲ್ಲಿ 1300ಕ್ಕೂ ಹೆಚ್ಚು ಮತ್ತು ರಾಜ್ಯದಲ್ಲಿ 550ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳು ಕಾಣಸಿಗುತ್ತವೆ ಎಂದು ಅವರು ಮಾಹಿತಿ ನೀಡಿದರು.

ರಂಗನತಿಟ್ಟು ಪಕ್ಷಿಧಾಮದ ವನಪಾಲಕ ಪ್ರವೀಣ್, ನಾಗರಹೊಳೆಯ ನ್ಯಾಚುರಲಿಸ್ಟ್ ಗೋಪಿ ಪಕ್ಷಿ ವೀಕ್ಷಣೆ ಕುರಿತು ಮಾಹಿತಿ ನೀಡಿದರು.

70 ವಿದ್ಯಾರ್ಥಿಗಳನ್ನು 5 ತಂಡವಾಗಿ ಪ್ರತಿ ತಂಡಕ್ಕೆ ಒಬ್ಬ ಗೈಡರ್ ಮತ್ತು ಬೈನಾಕ್ಯುಲರ್ ನೀಡಿ ಅರಣ್ಯ ಇಲಾಖೆ ವಿವಿಧೆಡೆ ನಿರ್ಮಿಸಿದ್ದ ಅಟ್ಟಣಿಗೆಗಳಲ್ಲಿ ನಿಲ್ಲಿಸಿ ಪಕ್ಷಿ ವೀಕ್ಷಣೆ ಮಾಡಲಾಯಿತು. ನಂತರ ವೀಕ್ಷಿಸಿದ ಪಕ್ಷಿಗಳ ಕುರಿತು ಮಾಹಿತಿ ನೀಡಲಾಯಿತು.

ಪಕ್ಷಿ ವೀಕ್ಷಣೆಯ ನಂತರ ಸಮೀಪದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಪಕ್ಷಿಗಳ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಶಾಸ್ತ್ರಿ ಸಂಯುಕ್ತ ಪದವಿಕಾಲೇಜು ಪ್ರಥಮ, ನಗರದ ಬಾಲಕಿಯರ ಪ.ಪೂರ್ವ ಕಾಲೇಜು ದ್ವಿತೀಯ ಹಾಗೂ ಪಿರಿಯಾಪಟ್ಟಣದ ಐಟಿಐ ಕಾಲೇಜು ತೃತೀಯ ಸ್ಥಾನ ಗಳಿಸಿದರು. ಬೆಟ್ಟದಪುರದ ಐಟಿಐ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆರ್‌ಎಫ್ಒ ನಂದಕುಮಾರ್, ಡಿಎಫ್‌ಆರ್‌ಒ ರಮ್ಯಾ, ಸಿಬ್ಬಂದಿ ಮಲ್ಲಿಕಾರ್ಜುನ್, ಪ್ಯಾರೇಜಾನ್, ಹರೀಶ್, ವಿನಯ್, ವ್ಯವಸ್ಥಾಪಕ ಬಸವರಾಜ್ ಹೊನ್ನಾರೆಡ್ಡಿ, ಮಂಜುನಾಥ್, ವಿನಯ್, ಗಸ್ತು ಅರಣ್ಯ ಪಾಲಕರಾದ ರವಿ, ದೇವಯ್ಯ, ಶಿವಣ್ಣ, ಬಸವರಾಜು, ಕುಮಾರ್, ಜಯರಾಮ್, ತಮ್ಮೇಗೌಡ, ರವಿ, ಶಿವಲಿಂಗ ಇದ್ದರು.

click me!