72 ವರ್ಷದಲ್ಲಿ ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಕೈ ಮೊದಲ ಗೆಲುವು : ಪರಮೇಶ್ವರ್

By Kannadaprabha NewsFirst Published Jul 8, 2024, 12:32 PM IST
Highlights

ಆರು ಕ್ಷೇತ್ರಗಳ ಶಿಕ್ಷಕರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 72 ವರ್ಷಗಳಲ್ಲಿ ಮೊದಲ ಬಾರಿಗೆ ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಅತ್ಯಂತ ಸಂತೋಷ ನೀಡಿದೆ.

 ತುಮಕೂರು :  ಸರ್ಕಾರದ ಮುಂದಿರುವ 7ನೇ ವೇತನ ಆಯೋಗ ಶಿಫಾರಸು ಜಾರಿಗೆ ತರಲು ₹18,0000 ಕೋಟಿ ಬೇಕು. ಇದರ ಜತೆಗೆ ಒಪಿಎಸ್ ಜಾರಿಗೆ ಸಹ ನೂರಾರು ಕೋಟಿ ರು. ಬೇಕು. ಹಾಗಾಗಿ ಒಂದೇ ದಿನದಲ್ಲಿ ಎಲ್ಲವನ್ನು ಜಾರಿಗೆ ತರಲು ಸಾಧ್ಯವಿಲ್ಲ. ಕಾಂಗ್ರಸ್‌ ಸರ್ಕಾರವೇ 6ನೇ ವೇತನ ಆಯೋಗ ಜಾರಿಗೆ ತಂದಿದೆ. ನಾವು ಯಾರಿಗೂ ಮೋಸ ಮಾಡಲ್ಲ, ತಾಳ್ಮೆಯಿಂದ ಇರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಎಂಪ್ರೆಸ್ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಅಭಿಮಾನಿ ಬಳಗದಿಂದ ಶಿಕ್ಷಕ ವರ್ಗ ಮತ್ತು ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂಬ ಭರವಸೆ ನೀಡಿದರು.

Latest Videos

ಆರು ಕ್ಷೇತ್ರಗಳ ಶಿಕ್ಷಕರ ಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 72 ವರ್ಷಗಳಲ್ಲಿ ಮೊದಲ ಬಾರಿಗೆ ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಅತ್ಯಂತ ಸಂತೋಷ ನೀಡಿದೆ. ಈ ಮೌನ ಕ್ರಾಂತಿಗೆ ಸಹಕಾರ ನೀಡಿದ ಶಿಕ್ಷಕರಿಗೆ ಹಾಗೂ ಅದಕ್ಕೆ ಬೆನ್ನೆಲುಬಾಗಿ ನಿಂತ ಡಿ.ಟಿ.ಶ್ರೀನಿವಾಸ್‌ ದಂಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಿಕ್ಷಕರು ಬಹಳ ಅಚ್ಚುಕಟ್ಟಾಗಿ, ಶಾಂತಿ ಮತ್ತು ಯಾರಿಗೂ ಗೊತ್ತಾಗದ ಹಾಗೆ ರಾಜಕಾರಣ ಮಾಡಿದ್ದೀರಿ. ಇದು ಬಹಳ ದೊಡ್ಡ ಬದಲಾವಣೆ. ತುಮಕೂರು ಜಿಲ್ಲೆಯಲ್ಲಿಯೇ 5300ಕ್ಕೂ ಹೆಚ್ಚು ಮತಗಳು ಡಿ.ಟಿ.ಶ್ರೀನಿವಾಸ್‌ಗೆ ಬಂದಿವೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಸ್ವಾತಂತ್ರ ಬಂದಾಗ ಶೇ.12ರಷ್ಟಿದ್ದ ಸಾಕ್ಷರರ ಸಂಖ್ಯೆಗೆ ಇಂದು ಶೇ.82ಕ್ಕೆ ಮುಟ್ಟಿದೆ. ಇದೊಂದು ದೊಡ್ಡ ಸಾಧನೆಯಾಗಿದೆ. ಯಾರು ಏನು ಹೇಳಿಕೊಳ್ಳಲಿ, ಇದು ಕಾಂಗ್ರೆಸ್‌ನ ದೊಡ್ಡ ಕೊಡುಗೆ. ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಿದೆ. ಪ್ರಶ್ನಿಸುವಂತಹ ಧೈರ್ಯವನ್ನು ತಂದುಕೊಟ್ಟಿದೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ತಂದಿರುವ ಹಲವಾರು ಬದಲಾವಣೆಗಳೇ ಕಾರಣ ಎಂದರು.

ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಇದಕ್ಕೆ ಅನುಗುಣವಾಗಿ ನಮಗೆ ತೆರಿಗೆ ಪಾಲು ವಾಪಸ್ ಬರುತ್ತಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇವೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಆದ ಬದಲಾವಣೆಯಿಂದ ಕರ್ನಾಟಕ ಶಕ್ತಿಯುತವಾಗಿದೆ. ದುಡಿಯುವ ಶಕ್ತಿ ಇದೆ. ಅದೇ ರೀತಿ ಇತರೆ ರಾಜ್ಯಗಳಿಗೂ ಶಕ್ತಿ ನೀಡಲು ಈ ಹಣ ಬಳಕೆ ಮಾಡುತ್ತಿದ್ದೇವೆ. ಇದು ಒಂದು ರೀತಿಯ ಸಮಾಧಾನ ತಂದಿದೆ. ನಮ್ಮ ರಾಜ್ಯ ಪ್ರಗತಿ ಪಥದಲ್ಲಿದೆ ಎಂಬುದು ಇದರ ಧ್ಯೋತಕ ಎಂದು ತಿಳಿಸಿದರು.

ಅನುದಾನಿತ ಶಾಲೆಗಳ ಶಿಕ್ಷಕ, ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧಿಸಿದಂತೆ ಸರ್ಕಾರ ಶೀಘ್ರವೇ ಒಂದು ನಿರ್ಧಾರಕ್ಕೆ ಬರಲಿದೆ. ನಾನು ಕೂಡ ಒಂದು ಶಿಕ್ಷಕ ಸಂಸ್ಥೆಯ ಕಾರ್ಯದರ್ಶಿಯಾಗಿ ಸಮಸ್ಯೆಯ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಗೌರವ ಧನ ಏನಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅವಕಾಶ ನೀಡಲಿದೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಓಪಿಎಸ್ ಜಾರಿಗೆ ಕ್ರಮ ವಹಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಅನುದಾನಿತ ಶಾಲೆಗಳ ಒಕ್ಕೂಟ ಹಾಗೂ ಎಲ್ಲಾ ಶಿಕ್ಷಕರು ನನ್ನ ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಬದಲಾವಣೆ ತರಬೇಕು ಎಂದು ಆಂತರ್ಯದಲ್ಲಿ ನಡೆದ ಕೆಲಸ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕಾರಿಯಾಯಿತು ಎಂದರು.

ಮಾಜಿ ಶಾಸಕ ಡಾ.ರಫೀಕ್ ಅಹಮದ್, ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಎನ್.ಪಿ.ಎಸ್ ವಿರೋಧಿ ಹೋರಾಟಗಾರರ ವೇದಿಕೆ ಅಧ್ಯಕ್ಷ ಮಂಜುನಾಥ್, ಮಾಜಿ ಶಾಸಕಿ ಪೂರ್ಣಿಮಾ ಇದ್ದರು 

click me!