ಚನ್ನಪಟ್ಟಣ ಎಪಿಎಂಸಿಯಲ್ಲಿ ಮಾವು ವಹಿವಾಟು ತೀವ್ರ ಕುಸಿತ!

By Kannadaprabha News  |  First Published Jul 8, 2024, 11:37 AM IST

 ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿಯೂ ಜಿಲ್ಲೆಯಲ್ಲಿ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಕಳೆದ 9 ವರ್ಷಗಳಿಗೆ ಹೋಲಿಸಿದರೆ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಗೆ ಉತ್ಪನ್ನದ ಆವಕ ತೀರಾ ಕಡಿಮೆಯಾಗಿದೆ.


 -ಎಂ.ಅಫ್ರೋಜ್ ಖಾನ್

  ರಾಮನಗರ :  ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿಯೂ ಜಿಲ್ಲೆಯಲ್ಲಿ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಕಳೆದ 9 ವರ್ಷಗಳಿಗೆ ಹೋಲಿಸಿದರೆ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಗೆ ಉತ್ಪನ್ನದ ಆವಕ ತೀರಾ ಕಡಿಮೆಯಾಗಿದೆ.

Latest Videos

undefined

ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾವು ಆವಕ ಹಾಗೂ ತೋಟಗಾರಿಕೆ ಇಲಾಖೆ ಜಿಲ್ಲಾಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಸಲ್ಲಿಸಿದ ಮಾವು ಬೆಳೆ ಹಾನಿ ವರದಿಯನ್ನು ತಾಳೆ ಮಾಡಿದರೆ ಈ ಬಾರಿ ಮಾವನ್ನು ನಂಬಿದ ರೈತರು ನಷ್ಟಕ್ಕೊಳಗಾಗಿರುವುದು ಸ್ಪಷ್ಟವಾಗಿದೆ.

ಪ್ರಸಕ್ತ ಸಾಲಿನಲ್ಲಿ ಚನ್ನಪಟ್ಟಣ ಎಪಿಎಂಸಿಯಲ್ಲಿ 74,247 ಕ್ವಿಂಟಲ್ ಮಾವು ಉತ್ಪನ್ನದ ವಹಿವಾಟು ನಡೆದಿದ್ದು, ರಾಮನಗರ ಎಪಿಎಂಸಿಯಲ್ಲಿ ನಡೆದಿರುವ ಮಾವಿನ ವಹಿವಾಟಿನ ಮಾಹಿತಿ ಲಭ್ಯವಾಗಿಲ್ಲ.

ಕಳೆದ 9 ವರ್ಷಗಳಿಗೆ ಹೋಲಿಕೆ ಮಾಡಿದರೆ ಚನ್ನಪಟ್ಟಣ ಎಪಿಎಂಸಿಯಲ್ಲಿ ಪ್ರತಿ ವರ್ಷ ಮಾವು ಉತ್ಪನ್ನದ ಆವಕ 1 ರಿಂದ 1.50 ಲಕ್ಷ ಕ್ವಿಂಟಲ್ ಇದೆ. 2015-16ನೇ ಸಾಲಿನಲ್ಲಿ 64,521 ಕ್ವಿಂಟಲ್ ಇದ್ದಿದ್ದು, ಹೊರತು ಪಡಿಸಿದರೆ ಈ ವರ್ಷ (2024-25) 74,247 ಕ್ಟಿಂಟಲ್ ಗೆ ಮಾವು ಉತ್ಪನ್ನದ ಆವಕ ಕುಸಿದಿದೆ.

ಚನ್ನಪಟ್ಟಣ ಎಪಿಎಂಸಿಯಲ್ಲಿ 2018-19ರಲ್ಲಿ 1.85 ಲಕ್ಷ ಕ್ವಿಂಟಲ್ ಇದ್ದ ಮಾವಿನ ವಹಿವಾಟು 2019-20ನೇ ಸಾಲಿಗೆ 2.50 ಲಕ್ಷ ಕ್ವಿಂಟಲ್‌ಗೆ ಹೆಚ್ಚಳ ಕಂಡಿತು. ಕೊರೋನಾ ಸಾಂಕ್ರಾಮಿಕದಲ್ಲಿ ಅಂದರೆ 2020-21ರಲ್ಲಿ 1.75 ಲಕ್ಷ , 2021-22ರಲ್ಲಿ 1.77 ಲಕ್ಷ ಕ್ವಿಂಟಲ್ ಇದ್ದ ಮಾವಿನ ವಹಿವಾಟು 2022-23ನೇ ಸಾಲಿನಲ್ಲಿ 1.22 ಲಕ್ಷ ಕ್ವಿಂಟಲ್ ಗೆ ಕುಸಿಯಿತು. 2023-24ನೇ ಸಾಲಿಗೆ 1,38,540 ಕ್ವಿಂಟಲ್ ಇದ್ದ ಮಾವಿನ ವಹಿವಾಟು 2024-25ನೇ ಸಾಲಿನಲ್ಲಿ 74,247 ಕ್ವಿಂಟಲ್‌ಗೆ ಕುಸಿದಿದೆ.

ಇಳುವರಿ ಕುಸಿತಕ್ಕೆ ಕಾರಣವೇನು ? :

ಜಿಲ್ಲೆಯಲ್ಲಿ ಶೇಕಡ 90-95ರಷ್ಟು ಭಾಗ ಮಾವು ಬೆಳೆಯನ್ನು ಮಳೆಯಾಶ್ರಯದಲ್ಲಿ ಬೆಳೆಯಲಾಗುತ್ತಿದೆ. ಮುಂಗಾರಿನಲ್ಲಿ ಮಳೆಯ ಕೊರತೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಕಚ್ಚಿದ ಹೂವು ಹಾಗೂ ಕಾಯಿಗಳು ಉದುರಿ ಹೋಗಿದ್ದವು.

ಮಳೆಯ ಕೊರತೆಯಿಂದಾಗಿ ಜೋನಿ ಮತ್ತು ನುಸಿ ಹುಳುವಿನ ಬಾಧೆ ಹೆಚ್ಚಾಗಿರುವುದು ಕಂಡು ಬಂದಿದ್ದು, ಮಾವಿನ ಮರಗಳು ಅಲ್ಲಲ್ಲಿ ಒಣಗಿ ಹೋದವು. ಹೆಚ್ಚಿನ ತಾಪಮಾನದಿಂದ ಬಾದಾಮಿ ತಳಿಯಲ್ಲಿ ಸ್ಪಾಂಜಿ ಟಿಸ್ಸ್ಯು ಎಂಬ ಶಾರೀಕ ಸಮಸ್ಯೆ ಹೆಚ್ಚಾಗಿದ್ದು, ಹಣ್ಣುಗಳ ಗುಣಮಟ್ಟ ಕುಸಿಯಲು ಕಾರಣವಾಯಿತು.

103.33 ಕೋಟಿ ಮೌಲ್ಯದ ಮಾವು ಹಾನಿ:

ರಣ ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಶೇಕಡ 90 ರಿಂದ 95ರಷ್ಟು ಮಾವು ಬೆಳೆ ಹಾನಿಯಾಗಿದ್ದು, ಇದರಿಂದ 103.33 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದಲ್ಲಿ ರಚಿಸಿದ್ದ ಜಂಟಿ ಸಮೀಕ್ಷಾ ತಂಡದ ವರದಿ ಸಲ್ಲಿಸಿತ್ತು.

ಜಿಲ್ಲಾಡಳಿತ ಆ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿ ಪ್ರಕೃತಿ ವಿಕೋಪದಡಿ ಮಾವು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ಮನವಿ ಮಾಡಿಕೊಂಡಿತ್ತು. ಆದರೆ, ಇಲ್ಲಿವರೆಗೂ ರಾಜ್ಯ ಸರ್ಕಾರದಿಂದ ಮಾವು ಬೆಳೆಗಾರರಿಗೆ ಬಿಡಿಗಾಸಿನಷ್ಟು ಪರಿಹಾರ ಹಣ ಬಿಡುಗಡೆ ಆಗಿಲ್ಲ.

ನಿರೀಕ್ಷೆಯಷ್ಟು ಇಳುವರಿ ಸಿಕ್ಕಿರುವುದು ಅನುಮಾನ

ಕಳೆದ ವರ್ಷವೂ ಮಾವಿನ ಫಸಲು ಕೈಕೊಟ್ಟಿದ್ದರಿಂದ ಎಚ್ಚೆತ್ತುಕೊಂಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಧಿಕ ಇಳುವರಿ ಪಡೆಯಲು ಬೇಕಾಗಿದ್ದ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದರು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಮಾವು ಬೆಳೆಗೆ ಸಾಕಷ್ಟು ಹಾನಿಯಾಯಿತು. ಹಾಗಾಗಿ ಈ ಬಾರಿಯೂ ಮಾವು ಬೆಳೆ ನೆಲ ಕಚ್ಚಿತು.

ಮಾವು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವಾರ್ಷಿಕ ಸರಾಸರಿ 12 ರಿಂದ 16 ಲಕ್ಷ ಟನ್ ನಷ್ಟು ಮಾವು ಬೆಳೆಯಲಾಗುತ್ತಿದೆ. ಇದರಲ್ಲಿ ಬದಾಮಿ ತಳಿಯದ್ದು ಸಿಂಹಪಾಲು. ಆದರೆ, ಈ ವರ್ಷ ಇಳುವರಿ ಕುಸಿದಿದೆ. ರಾಮನಗರ ಜಿಯಲ್ಲಿ 33 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, ವಾರ್ಷಿಕ ಸರಾಸರಿ 2 ಲಕ್ಷ ಟನ್ ನಷ್ಟು ಇಳುವರಿ ಇದೆ. ಆದರೆ, ಈ ವರ್ಷ ನಿರೀಕ್ಷೆಯಷ್ಟು ಇಳುವರಿ ಸಿಕ್ಕಿರುವುದು ಅನುಮಾನ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ

ರಾಮನಗರ ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಒಟ್ಟಾರೆ ಕೇವಲ 39,851 ಮೆಟ್ರಿಕ್ ಟನ್ ಮಾವು ಇಳುವರಿಯನ್ನು ಮಾತ್ರ ನಿರೀಕ್ಷಿಸಲಾಗಿದ್ದು, ಅಂದಾಜು ಒಟ್ಟು 2,34,885 ಮೆಟ್ರಿಕ್ ಟನ್ ಇಳುವಳಿ ಪ್ರತಿಕೂಲ ಹವಾಮಾನದಿಂದ ನಷ್ಟವಾಗಿದೆ. ಒಟ್ಟು 103.33 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್ ಗೆ 22,500 ರು.ನಂತೆ ಒಟ್ಟು 57.67 ಕೋಟಿ ರು.ಗಳಲ್ಲಿ ಪರಿಹಾರದ ಮೊತ್ತ ರೈತರಿಗೆ ನೀಡಬೇಕಾಗಿದೆ.

ಚನ್ನಪಟ್ಟಣ ಎಪಿಎಂಸಿಯಲ್ಲಿ ಮಾವು ಉತ್ಪನ್ನದ ವಹಿವಾಟು (ಕ್ವಿಂಟಲ್‌ನಲ್ಲಿ)

ವರ್ಷ ಚನ್ನಪಟ್ಟಣ ಎಪಿಎಂಸಿ ಮೊತ್ತ

2018-19 1,85,246 39,66,946

2019-20 2,50,388 48,19,700

2020-21 1,75,646 12,05,475

2021-22 1,77,218 34,16,771

2022-23 1,22,123 28,54,356

2023-24 1,38,540 26,57,100

7ಕೆಆರ್ ಎಂಎನ್ 1.ಜೆಪಿಜಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಕಾಯಿ ರಾಶಿ 

click me!