ಬೆಲೆಯೇರಿಕೆ ವಿರುದ್ಧ ಬೀದಿಗಳಿದ ಕಾಂಗ್ರೆಸ್| ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆ| ಕೂಡಲೇ ವಿದ್ಯುತ್, ಪೆಟ್ರೋಲ್ ದರ ಇಳಿಕೆಗೆ ಆಗ್ರಹ|
ಕೊಪ್ಪಳ(ನ.23): ವಿದ್ಯುತ್, ಪೆಟ್ರೋಲ್ ಬೆಲೆಗಳನ್ನು ಕೂಡಲೇ ಇಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಅಶೋಕ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ ಹೆಚ್ಚಾಗಿ ಜನರು ರೋಸಿ ಹೋಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಜನರಿಗೆ ಸರ್ಕಾರದ ಯಾವ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಜನರು ತುಂಬ ನೊಂದಿದ್ದಾರೆ. ಕೋವಿಡ್ ಸಮಯದಲ್ಲಿ ಬಿಜೆಪಿ ಲೂಟಿ ಹೊಡೆಯುವ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೇ ದಿನ, ಸಬ್ ಕಾ ಸಾಥ್ ಎನ್ನುವ ಮಾತನ್ನಾಡಿದರೂ ದೇಶ ಹಾಗೂ ರಾಜ್ಯದಲ್ಲಿ ಯಾವುದೇ ವಿಕಾಸ ಆಗಿಲ್ಲ ಎಂದು ಆರೋಪಿಸಿದರು.
undefined
ಕೋವಿಡ್ ಸಂದರ್ಭದಲ್ಲಿಯೇ ವಿದ್ಯುತ್ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಇದು ನಿಜಕ್ಕೂ ಖಂಡನೀಯ. ಮೊದಲೇ ಕೋವಿಡ್‌ದಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಜೀವನ ನಡೆಸುವುದೇ ದುಸ್ಥರವಾಗಿದೆ. ಇಷ್ಟಾದರೂ ಸರ್ಕಾರ ಅದ್ಯಾವುದನ್ನೂ ಲೆಕ್ಕಿಸದೇ ಶುಲ್ಕ ಹೆಚ್ಚಳ ಮಾಡಲಾಗಿದೆ. ಇನ್ನೂ ಪೆಟ್ರೋಲ್ ಏರಿಕೆಯ ಪರಿಸ್ಥಿತಿಯಂತೂ ಹೇಳದ ತೀರದಾಗಿದೆ. ನಿಜಕ್ಕೂ ಪೆಟ್ರೋಲ್ ದರವನ್ನು ನೋಡುವ ಜನರು ವಾಹನ ಸಂಚಾರ ಮಾಡುವುದನ್ನೇ ನಿಲ್ಲಿಸಬೇಕಾದ ಸ್ಥಿತಿಯಾಗಿದೆ. ಈವರೆಗೂ ದರವನ್ನು ತಗ್ಗಿಸುವ ಕೆಲಸ ಮಾಡುತ್ತಿಲ್ಲ ಎಂದರು.
'ಆನಂದ ಸಿಂಗ್‌ಗಾಗಿ ಬಳ್ಳಾರಿ ಇಬ್ಭಾಗ'
ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಿದೆ. ಪ್ರತಿಯೊಂದು ವಸ್ತುಗಳ ಬೆಲೆಯಲ್ಲಿ ಪ್ರತಿನಿತ್ಯವೂ ಏರಿಕೆಯಾಗಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇನ್ನೂ ರೈತರ ಬೆಳೆಯ ಆದಾಯದಲ್ಲಿ ದ್ವಿಗುಣ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಧಾರಣೆ ಸಿಗುತ್ತಿಲ್ಲ. ಇನ್ನು ರೈತರ ಆದಾಯ ದ್ವಿಗುಣ ದೂರದ ಮಾತು ಎಂದರು.
ಕೂಡಲೇ ಬಿಜೆಪಿ ಸರ್ಕಾರವು ರೈತರ ಹಿತದೃಷ್ಟಿಯಿಂದ ಬೆಲೆಗಳ ಏರಿಕೆಯನ್ನು ತಗ್ಗಿಸಬೇಕು. ದುರಾಡಳಿತ ನಿಲ್ಲಿಸಬೇಕು. ಪೆಟ್ರೋಲ್, ವಿದ್ಯುತ್ ಶುಲ್ಕ ಏರಿಕೆಯನ್ನು ತಪ್ಪಿಸಬೇಕೆಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮುಖಂಡರಾದ ಜುಲ್ಲು ಖಾದ್ರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೇಮಲತಾ ನಾಯಕ, ಬಸವರಾಜಸ್ವಾಮಿ ಮಳಿಮಠ, ಅಮ್ಜದ್ ಪಟೇಲ, ಕಾಟನ್ ಪಾಷಾ, ಶರಣೆಗೌಡ, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ವಿರುಪಾಕ್ಷಪ್ಪ, ಅಕ್ಬರ್ ಪಲ್ಟನ್, ಗವಿಸಿದ್ದಪ್ಪ ಚಿನ್ನೂರು, ರವಿ ಕುರಕೋಡ ಯಾದವ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.