ಇನ್ಫೋಸಿಸ್‌ ಸಾಧಕಿಯ ಮನೆಗೆ ತೆರಳಿ ಬರ್ತ್‌ಡೇ ಗಿಫ್ಟ್‌ ನೀಡಿದ ಖಾದರ್‌ ಪುತ್ರಿ!

By Web DeskFirst Published Sep 12, 2019, 1:09 PM IST
Highlights

ಇನ್ಫೋಸಿಸ್‌ ಸಾಧಕಿಯ ಮನೆಗೆ ತೆರಳಿ ಬರ್ತ್‌ಡೇ ಗಿಫ್ಟ್‌ ನೀಡಿದ ಶಾಸಕ ಯು.ಟಿ. ಖಾದರ್‌ ಪುತ್ರಿ!| ಸುಧಾಮೂರ್ತಿಗೆ ಫಿದಾ ಆದ ಹವ್ವ ನಸೀಮಾ ನಡವಳಿಕೆ| 

ಮಂಗಳೂರು[ಸೆ.12]: ಇನ್ಫೋಸಿಸ್‌ನ ಸುಧಾಮೂರ್ತಿಯವರ ಸರಳತೆ, ವೈಚಾರಿಕತೆ ಹಾಗೂ ಅವರ ಜೀವನಕ್ರಮ, ಸಾಹಿತ್ಯಾಭಿರುಚಿಗೆ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್‌ ಮತ್ತು ಲಾಮಿಸ್‌ ದಂಪತಿಯ ಏಕೈಕ ಪುತ್ರಿ ಹತ್ತನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಹವ್ವ ನಸೀಮಾ ಫಿದಾ ಆಗಿದ್ದಾರೆ. ಬುಧವಾರ ಸುಧಾಮೂರ್ತಿಯವರ ಬೆಂಗಳೂರು ಜಯನಗರದ ನಿವಾಸಕ್ಕೆ ತಂದೆ ಯು.ಟಿ.ಖಾದರ್‌ ಜೊತೆಗೆ ತೆರಳಿ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸುಧಾಮೂರ್ತಿ ಅವರ ಪುಸ್ತಕ ಅಂದರೆ ಹವ್ವಳಿಗೆ ಪಂಚಪ್ರಾಣ. ಸುಧಾಮೂರ್ತಿ ಅವರು ಬರೆದ ಅಥವಾ ಅವರ ಬಗ್ಗೆ ಪ್ರಕಟವಾದ ಪುಸ್ತಕ, ಲೇಖನಗಳನ್ನು ಹವ್ವ ನಸೀಮಾ ಆಸಕ್ತಿಯಿಂದ ಓದುತ್ತಿದ್ದರು. ಆದರೆ ಈ ವಿಚಾರ ಹೆತ್ತವರಿಗೆ ಗೊತ್ತಿರಲಿಲ್ಲ. ಒಂದಿನ ವಿಮಾನ ನಿಲ್ದಾಣದಲ್ಲಿ ಸುಧಾಮೂರ್ತಿಯವರ ಸಾಹಿತ್ಯ ಪುಸ್ತಕವನ್ನು ಹವ್ವ ಎತ್ತಿಕೊಂಡು ಓದುವಾಗ ತಂದೆ ಯು.ಟಿ.ಖಾದರ್‌ ಅವರು ಮಗಳನ್ನು ಕುತೂಹಲದಿಂದ ವಿಚಾರಿಸಿದರು. ಸುಧಾಮೂರ್ತಿಯನ್ನು ಭೇಟಿಯಾಗಬೇಕು ಎಂಬ ಅದಮ್ಯ ಬಯಕೆ ಹೊಂದಿದ್ದ ಪುತ್ರಿಯ ಕನಸನ್ನು ಯು.ಟಿ.ಖಾದರ್‌ ಬುಧವಾರ ಈಡೇರಿಸಿದ್ದಾರೆ.

ಸರಳತೆಯ ಸಾಕಾರಮೂರ್ತಿ ಸುಧಾಮೂರ್ತಿಗೆ ಹುಟ್ಟುಹಬ್ಬದ ಸಂಭ್ರಮ

ಹವ್ವ ಹಾಗೂ ಸುಧಾಮೂರ್ತಿ ಅವರ ಜನ್ಮದಿನಕ್ಕೆ ಎರಡೇ ದಿನದ ವ್ಯತ್ಯಾಸ. ಸುಧಾಮೂರ್ತಿಯವರದ್ದು ಆಗಸ್ಟ್‌ 19 ಆದರೆ, ಹವ್ವಳ ಜನ್ಮದಿನ ಆಗಸ್ಟ್‌ 22. ಈ ವರ್ಷದ ಜನ್ಮದಿನಕ್ಕೆ ಸುಧಾಮೂರ್ತಿಯವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು. ಪುತ್ರಿಯ ಬೇಡಿಕೆಯನ್ನು ಯು.ಟಿ.ಖಾದರ್‌ ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಬುಧವಾರ ಸುಧಾಮೂರ್ತಿ ಮನೆಗೆ ತೆರಳಿದ ಹವ್ವ ಸ್ವರಚಿಸಿದ ಬರಹದ ಸ್ಮರಣಿಕೆಯನ್ನು ವಿತರಿಸಿದ್ದಾರೆ.

ನನ್ನ ಪ್ರೀತಿಯ ಸುಧಾಮೂರ್ತಿಯವರಿಗೆ,

ಹೆಚ್ಚಿಸಿರುವಿರಿ ನೀವು ನಮ್ಮ ನಾಡಿನ ಕೀರ್ತಿ, ನೀಡುತಿರುವಿರಿ ನೀವು ಹಲವರಿಗೆ ಸ್ಫೂರ್ತಿ. ನಿಮ್ಮ ನಡೆ ನುಡಿ ಬರಹ ನಮಗೆ ದಾರಿದೀಪ, ಸದಾ ನಗುಮುಖ ನಿಮ್ಮದು ನಿಮಗಿಲ್ಲ ಕೋಪ. ನಿಮ್ಮನ್ನು ನೋಡುವ ಆಸೆ ಬಂದಿತ್ತು ನನಗೆ, ಇದೋ ಇಂದು ನಿಮ್ಮೆದುರು ನಮಸ್ಕಾರ ನಿಮಗೆ- ಎಂದು ಬರೆದ ಸ್ಮರಣಿಕೆಯನ್ನು ಸುಧಾಮೂರ್ತಿಯವರಿಗೆ ಹವ್ವ ಹಸ್ತಾಂತರ ಮಾಡಿದ್ದಾರೆ.

ಬೆನ್ನು ತಟ್ಟಿದ ಸುಧಾಮೂರ್ತಿ:

ಇದಕ್ಕೆ ಸಂತೋಷದಿಂದಲೇ ಸ್ವಾಗತಿಸಿ ಪ್ರತಿಕ್ರಿಯಿಸಿದ ಸುಧಾಮೂರ್ತಿಯವರು, ಮೌಲ್ಯಯುತ ಶಿಕ್ಷಣವನ್ನು ಮನೋಜ್ಞವಾಗಿ ಕಲಿತು ಜೀವನದಲ್ಲಿ ಅಳವಡಿಸಿರುವ ಹವ್ವಳ ಸರಳತೆಯನ್ನು ಶ್ಲಾಘಿಸಿದರಲ್ಲದೆ, ಎಳೆಯದರಲ್ಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಸುಧಾಮೂರ್ತಿಯವರು ಬರೆದ ನಾಲ್ಕು ಆಂಗ್ಲ ಕೃತಿಗಳನ್ನು ಹವ್ವ ನಸೀಮಾ ಅವರಿಗೆ ನೀಡಿದರು.

click me!