ಸಂಸದ ಅನಂತಕುಮಾರ್‌ ಹೆಗಡೆ ಗಡಿಪಾರಿಗೆ ಆಗ್ರಹ

By Kannadaprabha NewsFirst Published Feb 7, 2020, 11:09 AM IST
Highlights

ಗಾಂಧೀಜಿ ಟೀಕಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅನಂತಕುಮಾರ್‌ ಹೆಗಡೆ ಅಪಮಾನಿಸಿದ್ದು, ಸಂಸದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
 

ಶಿಕಾರಿಪುರ [ಫೆ.07]:  ಇತಿಹಾಸ ಅರಿವಿಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಅವಹೇಳನದಲ್ಲಿ ತೊಡಗಿರುವ ಅನಂತಕುಮಾರ್‌ ಹೆಗಡೆ ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಭದ್ರಾ ಕಾಡಾ ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ ತೀವ್ರ ವಾಗ್ದಾಳಿ ನಡೆಸಿದರು.

ತಾಲೂಕು ಕಚೇರಿ ಮುಂಭಾಗ ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪಿತಾಮಹ ಬಿರುದು ಹೊಂದಿರುವ ಗಾಂಧೀಜಿ ಬಗ್ಗೆ ಅನಂತಕುಮಾರ ಹೆಗಡೆ ಅತ್ಯಂತ ಕೀಳು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಗಾಂಧೀಜಿ ಟೀಕಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅನಂತಕುಮಾರ್‌ ಹೆಗಡೆ ಅಪಮಾನಿಸಿದ್ದು, ಸಂಸದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಲತೇಶ ಗೋಣಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯಿಂದ ಮಹಾತ್ಮ ಗಾಂಧೀಜಿ ಹೆಸರು ತೆಗೆದುಹಾಕುವ ಉದ್ದೇಶ ಬಿಜೆಪಿ ಹೊಂದಿದೆ. ಈ ದಿಸೆಯಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತಿತರರು ಸಂಸದ ಅನಂತಕುಮಾರ್‌ ಹೆಗಡೆ ಮೂಲಕ ಪ್ರಚೋದಿಸಿದ್ದಾರೆ ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ.. ಹಂದಿ ಅಣ್ಣಿ ಸಹೋದರ ಗಿರೀಶ್ ಕೊಚ್ಚಿಹಾಕಿದ್ರು!...

ಜಗತ್ತಿನಾದ್ಯಂತ ಪಿತಾಮಹ ಗೌರವ ಹೊಂದಿರುವ ಗಾಂಧೀಜಿ ಬಗ್ಗೆ ರಾಷ್ಟ್ರ ಭಕ್ತಿಯ ಪಕ್ಷ ಎಂದು ಸ್ವಯಂ ಘೋಷಿತ ಬಿಜೆಪಿ ಅವಹೇಳನ ಮಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಚನ್ನೈಗೆ ಬಂದಾಗ ಮಹಿಳೆಯರು ಬಡತನದಿಂದ ಪೂರ್ಣ ಬಟ್ಟೆಧರಿಸಲಾಗದ ಸ್ಥಿತಿ ಕಂಡು ಮಮ್ಮಲ ಮರುಗಿ ಜೀವನಪೂರ್ತಿ ಪಂಚೆ ಮಾತ್ರ ಧರಿಸಿದ ಮಹಾತ್ಮರ ಬಗೆಗಿನ ಅವಹೇಳನ ಅಕ್ಷಮ್ಯ. ಕೂಡಲೇ ಸಂಸದರ ಸದಸ್ಯತ್ವ ರದ್ದುಗೊಳಿಸಲು ರಾಷ್ಟ್ರಪತಿಗಳಿಗೆ ಪತ್ರ ಬರೆಯಬೇಕೆಂದು ಆಗ್ರಹಿಸಿದರು.

ನಂತರ ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ತಾಪಂ ಸದಸ್ಯ ಜಯಣ್ಣ, ಎಪಿಎಂಸಿ ನಿರ್ದೇಶಕ ನಗರದ ರವಿಕಿರಣ್‌, ಪುರಸಭಾ ಸದಸ್ಯ ಹುಲ್ಮಾರ್‌ ಮಹೇಶ್‌, ಗೋಣಿ ಪ್ರಕಾಶ್‌, ಮುಖಂಡ ಭಂಡಾರಿ ಮಾಲತೇಶ, ಕಲ್ಮನೆ ದೇವೇಂದ್ರಪ್ಪ, ಶಿವು ಹುಲ್ಮಾರ್‌, ತಿಮ್ಮಣ್ಣ, ಕಬೂತರ್‌, ಇದ್ರೂಸ್‌ಸಾಬ್‌, ಜಿದ್ದು ಮಂಜು, ಬಡಗಿ ಪಾಲಾಕ್ಷಪ್ಪ, ಮಟ್ಟಿಮನೆ ಚಂದ್ರಪ್ಪ, ಶರತ್‌ ಮತ್ತಿತರರು ಹಾಜರಿದ್ದರು.

click me!