ಕಾಂಗ್ರೆಸ್‌ ಮುಖಂಡರಿಂದ ಸಿಎಂ ಯಡಿಯೂರಪ್ಪ ಭೇಟಿ

By Kannadaprabha NewsFirst Published Oct 3, 2019, 9:01 AM IST
Highlights

ಕಾಂಗ್ರೆಸ್ ಕೆಲ ಮುಖಂಡರು  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರು [ಅ.03]:  ನಗರದ ಅಭಿವೃದ್ಧಿ ಕಾರ್ಯಗಳ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್‌ ಕ್ಷೇತ್ರಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ತಾರತಮ್ಯವನ್ನು ಬಗೆಹರಿಸಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ನೇತೃತ್ವದಲ್ಲಿ ನಗರ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬುಧವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಗರ ಕಾಂಗ್ರೆಸ್‌ ಶಾಸಕರ ನಿಯೋಗವು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ .8 ಸಾವಿರ ಕೋಟಿ ಮೀಸಲಿಟ್ಟಿತ್ತು. ಆದರೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ ಕ್ಷೇತ್ರಗಳ ಯೋಜನೆಯನ್ನು ತಡೆ ಹಿಡಿಯಲಾಗಿದೆ. ಜತೆಗೆ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಇದರಿಂದ ಬೆಂಗಳೂರು ಸರ್ವಾಂಗೀಣ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂದು ಅಸಮಾಧಾನ ತೋಡಿಕೊಂಡರು ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸಮ್ಮಿಶ್ರ ಸರ್ಕಾರದಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ .8 ಸಾವಿರ ಕೋಟಿ ಮೀಸಲಿಟ್ಟಿತ್ತು. ನೂತನ ಸರ್ಕಾರವು ಯೋಜನೆಗಳಲ್ಲಿ ಬದಲಾವಣೆ ತಂದು ಕಾಂಗ್ರೆಸ್‌ ಕ್ಷೇತ್ರಗಳಿಗೆ ತಾರತಮ್ಯ ಮಾಡಿದೆ. ಕಾಂಗ್ರೆಸ್‌ ಕ್ಷೇತ್ರಗಳ ಅನುದಾನವನ್ನು ಕಡಿತಗೊಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಂಡದಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್‌ರ್‍, ಕೃಷ್ಣಬೈರೇಗೌಡ, ಶಾಸಕರಾದ ಸೌಮ್ಯಾರೆಡ್ಡಿ, ಬೈರತಿ ಸುರೇಶ್‌, ಎನ್‌.ಎ. ಹ್ಯಾರಿಸ್‌ ಹಾಜರಿದ್ದರು.

click me!