ಮೊದಲ ಕಾರ‍್ಯಕ್ರಮಕ್ಕೇ ಮೇಯರ್‌ ಉಪಮೇಯರ್‌ ಗೈರು : ತೀವ್ರ ಆಕ್ರೋಶ

By Kannadaprabha NewsFirst Published Oct 3, 2019, 8:42 AM IST
Highlights

ಮೇಯರ್ ಹಾಗೂ ಉಪ ಮೇಯರ್ ಇಬ್ಬರೂ ಕೂಡ ಆಯ್ಕೆಯಾದ ಬಳಿಕ ನಡೆದ ಮೊದಲ ಕಾರ್ಯಕ್ರಮಕ್ಕೆ ಗೈರಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. 

ಬೆಂಗಳೂರು [ಅ.03]:  ಬಿಬಿಎಂಪಿಯ ನೂತನ ಮೇಯರ್‌ ಗೌತಮ್‌ ಕುಮಾರ್‌ ಜೈನ್‌ ಹಾಗೂ ಉಪ ಮೇಯರ್‌ ರಾಮ್‌ ಮೋಹನ್‌ ರಾಜು ಅವರು ತಾವು ಅಧಿಕಾರ ಸ್ವೀಕರಿಸಿದ ಬಳಿಕ ಆಯೋಜನೆಯಾದ ಮೊದಲ ಕಾರ್ಯಕ್ರಮಕ್ಕೆ ಗೈರು ಹಾಜರಾದರು. ಇದಕ್ಕೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆಯಾಚಿಸಿದ ಘಟನೆ ನಡೆಯಿತು.

ಬಿಬಿಎಂಪಿಯು ಗಾಂಧಿ ಜಯಂತಿ ಅಂಗವಾಗಿ ಬುಧವಾರ ‘ಸಾಮೂಹಿಕ ಸ್ವಚ್ಛತಾ ಅಭಿಯಾನ’ ಮತ್ತು ‘ಪ್ಲಾಗ್‌ ರನ್‌ ಜಾಗೃತಿ’ ಜಾಥಾ ಸಮಾರಂಭ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮೇಯರ್‌ ಹಾಗೂ ಉಪ ಮೇಯರ್‌ ಗೈರು ಹಾಜರಾದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಮೇಯರ್‌ ಗೌತಮ್‌ ಕುಮಾರ್‌ ಹಾಗೂ ಉಪ ಮೇಯರ್‌ ರಾಮ್‌ ಮೋಹನ್‌ ರಾಜು ಆರೋಗ್ಯ ಸಮಸ್ಯೆಯಿಂದ ಸ್ವಚ್ಛತಾ ಅಭಿಯಾನ ಸಮಾರಂಭಕ್ಕೆ ಹಾಜರಾಗುವುದಕ್ಕೆ ಸಾಧ್ಯವಾಗಿಲ್ಲ ಎಂದು ಕ್ಷಮೆಯಾಚನೆ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಮೇಯರ್‌ ಗೌತಮ್‌ ಕುಮಾರ್‌ ಜೈನ್‌, ‘ಕಳೆದ ಎರಡು ದಿನಗಳಿಂದ ಸರಿಯಾಗಿ ನಿದ್ದೆ ಇರಲಿಲ್ಲ. ಹೀಗಾಗಿ, ಆರೋಗ್ಯ ಸಮಸ್ಯೆ ಉಂಟಾಗಿತ್ತು. ಅಲ್ಲದೇ ಮೇಯರ್‌ ಆಗಿ ಆಯ್ಕೆಯಾಗಿರುವುದಕ್ಕೆ ಬುಧವಾರ ಬೆಳಗ್ಗೆ ವಾರ್ಡ್‌ನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಶುಭಹಾರೈಸುವುದಕ್ಕೆ ಮನೆಯ ಬಳಿ ಆಗಮಿಸಿದರು. ಹೀಗಾಗಿ ಪಾಲಿಕೆ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಗೈರು ಹಾಜರಾಗಬೇಕಾಯಿತ್ತು. ಉದ್ದೇಶ ಪೂರ್ವಕವಾಗಿ ಗೈರು ಆಗಿಲ್ಲ’ ಎಂದು ಕ್ಷಮೆಯಾಚಿಸಿದರು.

click me!