ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಅದಾನಿ ಏರ್‌ಪೋರ್ಟ್’ ಹೆಸರನ್ನು ಕೂಡಲೆ ತೆಗೆಯಬೇಕು ಹಾಗೂ ಏರ್‌ಪೋರ್ಟ್‌ಗೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ಎನ್ನುವ ಚರ್ಚೆ ಶುರುವಾಗಿದೆ
ಮಂಗಳೂರು (ನ.19): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಫಲಕದಲ್ಲಿ ಅಳವಡಿಸಿರುವ ‘ಅದಾನಿ ಏರ್‌ಪೋರ್ಟ್’ ಹೆಸರನ್ನು ಕೂಡಲೆ ತೆಗೆಯಬೇಕು ಹಾಗೂ ಏರ್‌ಪೋರ್ಟ್‌ಗೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಮಂಗಳೂರಿನಿಂದ ಬಜ್ಪೆವರೆಗೆ 10 ಕಿ.ಮೀ. ಬೃಹತ್ ಪಂಜಿನ ಮೆರವಣಿಗೆ ಬುಧವಾರ ಸಂಜೆ ನಡೆಯಿತು.
ಮೂಲ್ಕಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ, ಮಾಜಿ ಸಚಿವ ರಮಾನಾಥ ರೈ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು, ಹಿರಿಯ ನಾಯಕರು ಭಾಗವಹಿಸಿದ್ದರು. ಕೋಟಿ ಚೆನ್ನಯರ ಹೆಸರಿಡುವವರೆಗೆ ಹೋರಾಟ ನಿಲ್ಲಿಸಲ್ಲ ಎಂದು ಈ ಸಂದರ್ಭ ಘೋಷಿಸಲಾಯಿತು.
ನಗರದ ಸಕ್ರ್ಯೂಟ್ ಹೌಸ್ ಎದುರು ಜಮಾಯಿಸಿದ್ದ ಕಾರ್ಯಕರ್ತರು ಎರಡು ಸಾಲುಗಳಲ್ಲಿ ಶಿಸ್ತಿನಿಂದ ಪಕ್ಷದ ಧ್ವಜ ಹಿಡಿದು ಮೆರವಣಿಗೆ ಹೊರಟರು. ಮುಂಚೂಣಿಯಲ್ಲಿದ್ದ ನಾಯಕರು ಉರಿಯುತ್ತಿದ್ದ ಪಂಜು ಹಿಡಿದಿದ್ದರು. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯ ಸಾಲು ಅರ್ಧ ಕಿ.ಮೀ.ಗೂ ಉದ್ದವಿತ್ತು.
ಅದಾನಿ ಹೆಸರು ತೆಗೆಯೋವರೆಗೆ ಹೋರಾಟ: ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯದ 2ನೇ ಆರ್ಥಿಕ ಕೇಂದ್ರವಾಗಿರುವ ಮಂಗಳೂರಿನ ಅಭಿವೃದ್ಧಿಯಲ್ಲಿ ಶ್ರೀನಿವಾಸ ಮಲ್ಯದ ಪಾತ್ರ ದೊಡ್ಡದು. ಜವಾಹರಲಾಲ್ ನೆಹರೂ ಕೃಪಾಕಟಾಕ್ಷದಿಂದ ಮಂಗಳೂರು ವಿಮಾನ ನಿಲ್ದಾಣ ಕನಸು ಸಾಕಾರವಾಗಿದೆ. ಆದರೆ ಇಂದು ಬಿಜೆಪಿ ಸರ್ಕಾರ ಸರ್ಕಾರಿ ಸಂಸ್ಥೆಯನ್ನು ಖಾಸಗಿಗೆ ಒಪ್ಪಿಸಿದ್ದಲ್ಲದೆ, ವಿಮಾನ ನಿಲ್ದಾಣ ನಾಮಫಲಕದಲ್ಲಿ ‘ಅದಾನಿ ಏರ್‌ಪೋರ್ಟ್’ ಹೆಸರು ಹಾಕಿದರೂ ಸುಮ್ಮನಿರುವುದು ಖಂಡನೀಯ. ಅದಾನಿ ಹೆಸರು ತೆಗೆಯುವವರೆಗೆ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
'ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು'
ಉಗ್ರ ಸ್ವರೂಪದ ಹೋರಾಟ: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿದೆ. ಅವರನ್ನು ಎಚ್ಚರಿಸುವುದಕ್ಕಾಗಿ ಕೈಗೊಂಡ ಹೋರಾಟ ಇದು. ಇದು ಆರಂಭ ಮಾತ್ರ. ಕೋಟಿ ಚೆನ್ನಯರ ಹೆಸರಿಡುವವರೆಗೂ ಹೋರಾಟ ನಿಲ್ಲಲ್ಲ. ಮುಂದೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಕಾರ್ಪೊರೇಟರ್‌ಗಳಾದ ಎ.ಸಿ. ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಮುಖಂಡರಾದ ನೀರಜ್‌ಪಾಲ್, ನಜೀರ್ ಬಜಾಲ್ ಮತ್ತಿತರರಿದ್ದರು.