ಬಿ ಎಸ್ ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಶಿವಮೊಗ್ಗದ ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದಾರೆ
ಶಿವಮೊಗ್ಗ(ಅ.06) : ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರವಿದ್ದರೂ ಸೂಕ್ತ ಪರಿಹಾರ ತರುವಲ್ಲಿ ಯಡಿಯೂರಪ್ಪ ವಿಫರಾಗಿದ್ದಾರೆ. ಕೇಂದ್ರದ ನಾಯಕರನ್ನು ಭೇಟಿ ಮಾಡುವುದಕ್ಕೂ ಅವಕಾಶ ದೊರಕಿಲ್ಲ. ಜತೆಗೆ ಅವರದೆ ಪಕ್ಷದ ನಾಯಕರು ಸಿಎಂ ಸಹಾಯಕ್ಕೆ ಬರುತ್ತಿಲ್ಲ. ಎಲ್ಲ ಕಡೆಯಿಂದ ಟೀಕೆ ಬಂದ ಬಳಿಕವಷ್ಟೇ ಕೇಂದ್ರ ಸ್ವಲ್ಪ ಪರಿಹಾರ ಬಿಡುಗಡೆ ಮಾಡಿದೆ. ಇದೆಲ್ಲವನ್ನು ನೋಡಿದರೆ ಬಿಎಸ್‌ವೈ ಏಕಾಂಗಿಯಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಅತಿವೃಷ್ಟಿಸಂತ್ರಸ್ತರ ಕಷ್ಟಆಲಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಪ್ರವಾಹ ಉಂಟಾಗಿ 60 ದಿನ ಕಳೆದರೂ ಪರಿಹಾರ ನೀಡದ ಕೇಂದ್ರ ಸರ್ಕಾರ ಇದೀಗ ಕೇವಲ 1200 ಕೋಟಿ ರು. ಬಿಡುಗಡೆ ಮಾಡಿದೆ. ಇಷ್ಟುಹಣ ಕೊಡುವುದಕ್ಕೆ 60 ದಿನ ಬೇಕಿತ್ತೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೇಂದ್ರದ ಪರಿಹಾರ ಏತಕ್ಕೂ ಸಾಲದು. ಇನ್ನಷ್ಟುಹಣ ಕೇಳುವ ಧೈರ್ಯ ಮುಖ್ಯಮಂತ್ರಿಗೆ ಇಲ್ಲ. ಮಳೆಯಿಂದ ರಾಜ್ಯದಲ್ಲಿ 2.5 ಲಕ್ಷ ಮನೆ ಸಂಪೂರ್ಣ ನಾಶವಾಗಿವೆ. 1.60 ಲಕ್ಷ ಮನೆ ಭಾಗಶಃ ಹಾಳಾಗಿವೆ. 6,600ಕ್ಕೂ ಹೆಚ್ಚು ಶಾಲೆ, 3600 ಅಂಗನವಾಡಿ ಹಾನಿಗೀಡಾಗಿವೆ. ಸಾವಿರಾರು ಎಕರೆ ಬೆಳೆ ಹಾಳಾಗಿದೆ. ಸಂತ್ರಸ್ತರ ಸಂಕಟ ಆಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದರು.
ಸಂಸದ ಪ್ರತಾಪ್‌ಸಿಂಹ ಕೇಂದ್ರದಿಂದ ಹಣಕಾಸಿನ ನೆರವು ಬೇಡ, ರಾಜ್ಯ ಸರ್ಕಾರವೇ ಪರಿಸ್ಥಿತಿ ನಿಭಾಯಿಸುತ್ತದೆ ಎನ್ನುವ ತೇಜಸ್ವಿ ಸೂರ್ಯ ಇವರೆಲ್ಲ ನಮ್ಮ ಸಂಸದರು, ಬೇಕಾಬಿಟ್ಟಿಹೇಳಿಕೆ ನೀಡುವ ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣರಂತವರು ಉಪಮುಖ್ಯಮಂತ್ರಿಗಳು, ಅಮೇರಿಕದಲ್ಲಿ ಭಾರತದ ಗೌರವ ಹೆಚ್ಚು ಮಾಡಿದ್ದು ಮೋದಿ ಸಾಧನೆ ಎನ್ನುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೊಗಳೆ ಬಿಡುವ ಸಿ.ಟಿ.ರವಿ ಇವರೆಲ್ಲ ನಮ್ಮ ಜನಪ್ರತಿನಿಧಿಗಳು ಎಂದು ಲೇವಡಿ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೋದಿಗೆ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಿಂಚಿತ್ತು ಅರಿವಿಲ್ಲ. ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಾ ಅಮೇರಿಕಕ್ಕೆ ಹೋಗಿ ಭಾರತದ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಆಪಾದಿಸಿದ ಅವರು, ಜನರ ಸಂಕಷ್ಟಆಲಿಸದ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಪಿ.ವಿ. ವಿಶ್ವನಾಥ್, ರಾಮೇಗೌಡ, ಚಂದ್ರಭೂಪಾಲ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.