* ವಿದೇಶಗಳಿಂದ ಆಕ್ಸಿಜನ್ ಆಮದು ಮಾಡಿಕೊಳ್ಳುವುದು ಹಾಸ್ಯಾಸ್ಪದ
* ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ಷಮಿಸಲಾರದ ತಪ್ಪು ಮಾಡಿವೆ
* ಆಕ್ಸಿಜನ್ ಉತ್ಪಾದನೆಯಲ್ಲಿ ಹಿಂದೆ ಬಿದ್ದು ಸರ್ಕಾರ ತಪ್ಪು ಮಾಡಿದೆ
ಬ್ಯಾಡಗಿ(ಮೇ.24): ಚುನಾವಣೆಗೆ ನೀಡಿದಷ್ಟು ಮಹತ್ವ ಕೋವಿಡ್ ನಿಯಂತ್ರಣಕ್ಕೆ ನೀಡಲಿಲ್ಲ. ಸೂಕ್ತ ವೇಳೆಯಲ್ಲಿ ಎಚ್ಚೆತ್ತುಕೊಂಡಿದ್ದಲ್ಲಿ ಸಾವಿನ ಸಂಖ್ಯೆ ಇಳಿಸಬಹುದಿತ್ತು. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ಷಮಿಸಲಾರದ ತಪ್ಪು ಮಾಡಿವೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ, ವಿದೇಶಗಳಿಂದ ಅವಶ್ಯವಿರುವ ಆಕ್ಸಿಜನ್ ಆಮದು ಮಾಡಿಕೊಳ್ಳುವುದಾಗಿ ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ.
undefined
ಈ ಕುರಿತು ಪ್ರಕಟಣೆ ನೀಡಿ, ಕೊರೋನಾ ವೈರಸ್ ಕಳೆದ ವರ್ಷವೇ ದೇಶಕ್ಕೆ ಒಂದು ದೊಡ್ಡ ಆಘಾತ ನೀಡಿತ್ತಲ್ಲದೇ ಮುನ್ನೆಚ್ಚರಿಕೆ ಕೊಟ್ಟಿತ್ತು. ಇದರಿಂದ ಯಾವುದೇ ಪಾಠ ಕಲಿತುಕೊಳ್ಳದ ಸರ್ಕಾರ ಕಣ್ಮುಚ್ಚಿ ಕುಳಿತಿತು. ಇದೀಗ 2ನೇ ಅಲೆ ಆರಂಭವಾಗಿ ಕಳೆದ ವರ್ಷಕ್ಕಿಂತ ಹೆಚ್ಚು ಜೀವಗಳನ್ನು ಬಲಿ ಪಡೆದುಕೊಳ್ಳುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲ: ರುದ್ರಪ್ಪ ಲಮಾಣಿ
ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್‌ಗಳನ್ನು ಹಿಂದಿನ ಅವಧಿಯಲ್ಲೇ ಆರಂಭಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಪ್ರಸ್ತುತ ಸರ್ಕಾರಕ್ಕೆ ಅದಕ್ಕೆ ಅವಶ್ಯವಿರುವ ತಜ್ಞ ವೈದ್ಯರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಸೋಂಕಿತರು ಸುಖಾಸುಮ್ಮನೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರ ಸೇರಿದಂತೆ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಇಂತಹ ಹೊಣೆಗೇಡಿತನವನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಉದಾಸಿ ಹೇಳಿಕೆ ಹಾಸ್ಯಾಸ್ಪದ:
ಆಕ್ಸಿಜನ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿರುವ ಸರ್ಕಾರ ತಪ್ಪು ಮಾಡಿದೆ. ಅದನ್ನು ಮರೆಮಾಚುವ ಅವಸರದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವುದಾಗಿ ಸಂಸದ ಉದಾಸಿ ಅವರು ನೀಡಿದ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ತರಳುಬಾಳು ಶಿವಮೂರ್ತಿ ಶಿವಾಚಾರ್ಯರಿಗೆ ಸಿಗುವಂತಹ ಆಕ್ಸಿಜನ್ ಸರ್ಕಾರಕ್ಕೆ ಸಿಗದಿರುವುದು ಆಶ್ಚರ್ಯದ ಸಂಗತಿ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona