* ಯಾರೋ ಹೆತ್ತ ಮಗುವಿಗೆ ಬಿಜೆಪಿಯವರು ಹೆಸರಿಡುವುದು ಎಷ್ಟು ಸರಿ
* ಬಿಜೆಪಿಯವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ
* ಉತ್ತರ ಕರ್ನಾಟಕದ ನೀರಾವರಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ
ಯಲಬುರ್ಗಾ(ಅ.03): ಪ್ರಧಾನಮಂತ್ರಿ ನರೇಂದ್ರ ಮೋದಿಯವರು(Narendra Modi) 7ವರ್ಷ ಅಧಿಕಾರವಧಿಯಲ್ಲಿ ದೇಶ ಯಾವ ಅಭಿವೃದ್ದಿಯನ್ನು ಕಂಡಿಲ್ಲ ಇದರಿಂದ ಜನಸಾಮಾನ್ಯರು ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಹೇಳಿದ್ದಾರೆ.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಶನಿವಾರ ಮಹಾತ್ಮ ಗಾಂಧೀಜಿ, ಲಾಲಬಹುದ್ದೂರ್ ಶಾಸ್ತ್ರಿ ಜಯಂತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಅಭಿಯಾನ ಹಾಗೂ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿಚಾರ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಯಾರೋ ಹೆತ್ತ ಮಗುವಿಗೆ ಬಿಜೆಪಿಯವರು ಹೆಸರಿಡುವುದು ಎಷ್ಟು ಸರಿ. ನೀವು ತಂದ ಯೋಜನೆಗಳಿಗೆ ಹೆಸರಿಡುವುದನ್ನು ಬಿಟ್ಟು ಕಾಂಗ್ರೆಸ್‌ನವರ(Congress) ಯೋಜನೆಗಳನ್ನು ನಾವೇ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ.
ರಾಜಕೀಯಕ್ಕೆ ಮಾತ್ರ ಕಾಂಗ್ರೆಸ್‌ನಿಂದ ಗಾಂಧಿ ಹೆಸರು ಬಳಕೆ: ಸಂಸದ ಕರಡಿ
ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ ಗಾಂಧಿ, ಮನಮೋಹನ ಸಿಂಗ್ ಆಡಳಿತದ ಕಾಂಗ್ರೇಸ್ ಆಡಳಿತದಲ್ಲಿ ಬಡದಿನ ದಲಿತರ ಏಳ್ಗೆಗಾಗಿ ಸಾಕಷ್ಟು ಯೋಜನೆಗಳನ್ನು ನೀಡಿರುವುದನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15ಲಕ್ಷ ಗಳನ್ನು ಹಾಕುವುದು, ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ ಎನ್ನುವ ಅನೇಕ ಭರವಸೆಗಳನ್ನು ನೀಡಿದ್ದ ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗಬೇಕು. ಬರುವ ಚುನಾವಣೆಯಲ್ಲಿ ಬಿಜೆಪಿ(BJP) ಪಕ್ಷವನ್ನು ಮನೆಗೆ ಕಳುಹಿಸಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಜನರು ಸಿದ್ಧರಾಗಿದ್ದಾರೆ ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ 290 ಕೋಟಿ ಅನುದಾನ ನೀಡಿರುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ಆದರೆ, ಬಿಜೆಪಿಯವರು ನಮ್ಮ ಯೋಜನೆ ಎಂದು ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಬರುವ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗೆ ಅಡ್ಡಿರುವ ಕಾನೂನು ತಡೆಯಾಜ್ಞೆಯನ್ನು ರಾಜೀ ಸಂದಾನದ ಮೂಲಕ ಬಗೆಹರಿಸಿಕೊಂಡು ಇಡೀ ಉತ್ತರ ಕರ್ನಾಟಕದ ನೀರಾವರಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ಯಂಕಣ್ಣ ಯರಾಶಿ, ಅಡಿವೆಪ್ಪ ಭಾವಿಮನಿ, ರಾಮಣ್ಣ ಸಾಲಭಾವಿ, ಬಿ.ಎಂ. ಶಿರೂರು, ರೇವಣೆಪ್ಪ ಸಂಗಟಿ, ಡಾ. ಶಿವನಗೌಡ ದಾನರಡ್ಡಿ, ಎಂ.ಎಫ್. ನದಾಫ, ಮಂಜುನಾಥ ಕಡೇಮನಿ, ಡಾ. ಶರಣಪ್ಪ ಕೊಪ್ಪಳ, ಶರಣಪ್ಪ ಗಾಂಜಿ, ಬಸವರಾಜ ಕುಡಗುಂಟಿ, ಬಸವರಾಜ ಪೂಜಾರ, ಈಶ್ವರ ಅಟಮಾಳಗಿ, ಅಶೋಕ ತೋಟದ, ಸಾವಿತ್ರಿ ಗೊಲ್ಲರ್ ಸೇರಿದಂತೆ ನಾನಾ ಘಟಕಗಳ ಪದಾಧಿಕಾರಿಗಳು ಇದ್ದರು.