* ಕೊರೋನಾ ಸಮಯದಲ್ಲೂ ಭ್ರಷ್ಟಾಚಾರ
* ಮೋದಿ ಅವರು ರಾಜ್ಯದ ಬಿಜೆಪಿಯವರನ್ನು ತಮ್ಮ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ
* ಕೇಂದ್ರ, ರಾಜ್ಯ ಜನರ ಜೀವದ ಜೊತೆ ಚಲ್ಲಾಟ
ಕೊಪ್ಪಳ(ಮೇ.16): ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಆಕ್ಸಿಜನ್ ಪೂರೈಕೆ ಮಾಡದೆ ಜನರ ಜೀವದ ಜೊತೆಗೆ ಚಲ್ಲಾಟವಾಡುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾವು ಹೆಚ್ಚಾಗುತ್ತಿವೆ. ಈ ಬಗ್ಗೆ ಯಾವ ಕ್ರಮವಾಗುತ್ತಿಲ್ಲ. ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತಿಲ್ಲ. ವೆಂಟಿಲೇಟರ್‌ಗೆ ಹೋದ ಸೋಂಕಿತ ಮರಳಿ ಆರೋಗ್ಯ ಸ್ಥಿತಿಗೆ ಬರಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಚಿಂತಿಸಬೇಕು. ಕೂಡಲೇ ಸಿಎಚ್‌ಸಿಗಳಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಸೋಂಕಿತರ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ದಿನಗಟ್ಟಲೆ ಇಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸತ್ತವರ ಅಂತ್ಯ ಸಂಸ್ಕಾರ ಆಗುತ್ತಿಲ್ಲ. ಸಿಎಂ ಬರಿ ಸುದ್ದಿಗೋಷ್ಠಿ ನಡೆಸಿ ಹೇಳುವುದನ್ನು ಕಲಿತಿದ್ದಾರೆ. ಆದರೆ, ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೊರೋನಾ ಸಮಯದಲ್ಲೂ ಭ್ರಷ್ಟಾಚಾರ ಮುಂದುವರೆಸಿದ್ದಾರೆ. ಸೆಮಿ ಲಾಕ್‌ಡೌನ್‌ನಿಂದ ಏನೂ ಪ್ರಯೋಜವಾಗಿಲ್ಲ. ಕಾರ್ಮಿಕರಿಗೆ ಯಾವ ಪ್ಯಾಕೇಜ್‌ಗಳನ್ನೂ ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಗಂಗಾವತಿ: ಆಕ್ಸಿಜನ್ ಸಿಗದೆ ವ್ಯಕ್ತಿ ಸಾವು, ವೈದ್ಯರ ಮೇಲೆ ಹಲ್ಲೆ
ಕಾರ್ಮಿಕ ವರ್ಗಕ್ಕೆ ಪ್ಯಾಕೇಜ್ ಕೊಡಿ ಎಂದು ನಾವು ಒತ್ತಾಯಿಸಿದರೆ ಈಶ್ವರಪ್ಪ ಅವರು, ನಾವು ದುಡ್ಡು ಪ್ರಿಂಟ್ ಮಾಡುತ್ತಿಲ್ಲ ಎಂದಿದ್ದಾರೆ. ನಾವು ಈಶ್ವರಪ್ಪ ಅವರ ಮನೆ ದುಡ್ಡು ಕೇಳುತ್ತಿಲ್ಲ. ಜನರ ತೆರಿಗೆ ದುಡ್ಡು ಕೇಳುತ್ತಿದ್ದೇವೆ. ಸರ್ಕಾರಕ್ಕೆ ಆಡಳಿತ ನಡೆಸಲು ಆಗದಿದ್ದರೆ ಅಧಿಕಾರದಿಂದ ಕೆಳಗಿಳಿಯಲಿ ಎಂದರು.
ಜಿಲ್ಲೆಯಿಂದ ಅನ್ಯ ಜಿಲ್ಲೆಗೆ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಕೊರತೆಯಾಗುತ್ತಿದೆ. ಕನಕಗಿರಿ ಕ್ಷೇತ್ರದಲ್ಲಿ ಒಂದೇ ಒಂದು ಕೋವಿಡ್ ಸೆಂಟರ್ ಇಲ್ಲ. ಈ ಮಲತಾಯಿ ಧೋರಣೆ ತರವಲ್ಲ. ಸೋಂಕಿತರು ತುಂಬ ತೊಂದರೆ ಎದುರಿಸುತ್ತಿದ್ದಾರೆ. ಕೂಡಲೇ ಹೋಬಳಿಗೊಂದು 15-20 ಆಕ್ಸಿಜನ್ ಬೆಡ್‌ಗಳ ಆಸ್ಪತ್ರೆ ನಿರ್ಮಿಸಬೇಕು. ಆದರೆ ಸರ್ಕಾರ ಸುಮ್ಮನೆ ಸಭೆ ಮಾಡಿ ಸಮಯ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು ಅವರು ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ಕಾಂಗ್ರೆಸ್ ವತಿಯಿಂದ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ನಿರ್ಧರಿಸಿದ್ದೇವೆ ಎಂದರು.
ಶಾಸಕ ಅಮರೆಗೌಡ ಬಯ್ಯಾಪೂರ ಮಾತನಾಡಿ, ಲಾಕ್‌ಡೌನ್ ಪೂರ್ವದಲ್ಲಿ ಸರ್ಕಾರ ಕಾರ್ಮಿಕ ವರ್ಗಕ್ಕೆ ಪರಿಹಾರ ನೀಡಬೇಕಿತ್ತು. ಕರಕುಶಲಕರ್ಮಿಗಳಿಗೆ ಮಾಸಿಕ 5 ಸಾವಿರ ರು. ಪರಿಹಾರ ನೀಡಬೇಕು. ಇಲ್ಲದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿಯಿದೆ. ಮೋದಿ ಅವರು ರಾಜ್ಯದ ಬಿಜೆಪಿಯವರನ್ನು ತಮ್ಮ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಮೋದಿ ಬಿಎಸ್‌ವೈ ಅವರ ಹೆಸರು ಕೆಡಿಸಲು ಜನರ ಮೇಲೆ ಸಿಟ್ಟು ತೋರಿಸುತ್ತಿದ್ದು, ರಾಜ್ಯದ ಸ್ಥಿತಿ ಅಧೋಗತಿಗೆ ತಲುಪಿದೆ. 25 ಸಂಸದರಿದ್ದರೂ ಏನು ಮಾಡುತ್ತಿದ್ದಾರೆಂದು ನಮಗೆ ಗೊತ್ತಾಗುತ್ತಿಲ್ಲ. ಬೆಡ್, ರೆಮ್‌ಡಿಸಿವಿಯರ್, ಆಕ್ಸಿಜನ್ ಬಗ್ಗೆ ಮಾತನಾಡುತ್ತಿಲ್ಲ. ಜಿಲ್ಲೆಯಲ್ಲಿ 30 ಹಾಸಿಗೆಯ 5 ಆಸ್ಪತ್ರೆಗಳು ಸಿದ್ಧವಾಗಿವೆ. ಆದರೆ ಆಕ್ಸಿಜನ್ ಕೊರತೆಯಿದೆ. ನಮಗೆ ಬೇಕಾದ ಆಕ್ಸಿಜನ್ ನೀಡಿ ಜೀವ ಉಳಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೃಷ್ಣಾ ಇಟ್ಟಂಗಿ, ಅಕ್ಬರ್ ಪಾಷಾ, ಅಜೀಮ್ ಅತ್ತಾರ, ಗವಿಸದ್ದಪ್ಪ ಚಿನ್ನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona