ಅಧಿಕಾರ ನೀಡಿದ ಜನರಿಗೆ ಬಿಜೆಪಿ ಶಾಸಕ ದಢೇಸ್ಗೂರು ಸಾವಿನ ಕಾಣಿಕೆ: ತಂಗಡಗಿ

By Kannadaprabha News  |  First Published Jun 7, 2021, 11:06 AM IST

* ಕೋವಿಡ್‌ ಆಸ್ಪತ್ರೆ ರದ್ದು ಮಾಡಿದ್ದಕ್ಕೆ ಮಾಜಿ ಸಚಿವ ಶಿವರಾಜ ತಂಗಡಗಿ ಅಕ್ರೋಶ
* ಕ್ವಾರಂಟೈನ್‌ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ ಇಲ್ಲ
* ಕುರಿಗಳು, ಬತ್ತ ಮತ್ತು ಹಣ ನೀಡಿ ಬಸವರಾಜ ಅವರನ್ನ ಗೆಲ್ಲಿಸಿದ ಕ್ಷೇತ್ರದ ಜನತೆ


ಗಂಗಾವತಿ(ಜೂ.07): ಕುರಿಮರಿ, ಬತ್ತ ಹಾಗೂ ಹಣದ ಕಾಣಿಕೆ ನೀಡಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಶಾಸಕ ಬಸವರಾಜ ದಢೇಸ್ಗೂರು ಸಾವಿನ ಕಾಣಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕನಕಗಿರಿ ಕ್ಷೇತ್ರದ ವ್ಯಾಪ್ತಿ ಬರುವ ಕನಕಗಿರಿ, ಕಾರಟಗಿ ತಾಲೂಕುಗಳಲ್ಲಿ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಮತ್ತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರಿಗೆ ಎರಡೂ ತಾಲೂಕುಗಳಲ್ಲಿ ಆಸ್ಪತ್ರೆಗಳು ಇಲ್ಲ. ಅಲ್ಲದೆ ಶ್ರೀರಾಮನಗರದ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸಿ ರದ್ದು ಮಾಡಿರುವುದನ್ನು ಗಮನಿಸಿದರೆ ಸ್ಥಳೀಯ ಶಾಸಕ ದಢೇಸ್ಗೂರ ಅವರಿಗೆ ಜನರ ಆರೋಗ್ಯಕ್ಕಿಂತ ಅವರ ಸಾವೇ ಹೆಚ್ಚು ಮುದ ನೀಡುತ್ತದೆ ಎನಿಸುತ್ತಿದೆ.

Latest Videos

undefined

ಕ್ಷೇತ್ರದ ಜನತೆ ಬಸವರಾಜ ಅವರಿಗೆ ಕುರಿಗಳು, ಬತ್ತ ಮತ್ತು ಹಣ ನೀಡಿ ಗೆಲ್ಲಿಸಿದ್ದಾರೆ. ಅವರಿಗೆ ಉಪಕಾರ ಮಾಡುವ ಸ್ಥಿತಿಯಲ್ಲಿ ಇಲ್ಲ. ಕ್ಷೇತ್ರದಲ್ಲಿ ಕೊರೋನಾದಿಂದ ದಿನದಿಂದ ದಿನಕ್ಕೆ ಸಾವುಗಳು ಹೆಚ್ಚಾಗುತ್ತಿದ್ದರೂ ಶಾಸಕರಿಗೆ ಕಾಳಜಿ ಇಲ್ಲ ಎಂದರು.

2023ರವರೆಗೂ ಯಡಿಯೂರಪ್ಪ ಸಿಎಂ: ಶಾಸಕ ದಢೇಸ್ಗೂರು

ಜನರಿಗೆ ಸಾವಿನ ಕಾಣಿಕೆ:

ಕ್ಷೇತ್ರದಲ್ಲಿ ಕೊರೋನಾ ಸೋಂಕಿನಿಂದ ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಶ್ರೀರಾಮನಗರದಲ್ಲಿ ಕೋವಿಡ್‌ ಆಸ್ಪತ್ರೆ ಪ್ರಾರಂಭ ಮಾಡಿದಂತೆ ನಾಟಕವಾಡಿ ನಂತರ ಅಲ್ಲಿರುವ ಆಕ್ಸಿಜನ್‌ ಮತ್ತು ಸಿಬ್ಬಂದಿ ರದ್ದುಮಾಡಿ ಗಂಗಾವತಿಗೆ ಸ್ಥಳಾಂತರಿಸಿದ್ದಾರೆ. ಅವರಿಗೆ ಜನರ ಆರೋಗ್ಯದ ಕಡೆಗೆ ಗಮನ ಹರಿಸದೆ ಸಾವುಗಳ ಕಾಣಿಕೆಗೆ ಮುಂದಾಗಿದ್ದಾರೆ ಎಂದರು. ಶಾಸಕರು ಮತ್ತು ಸರ್ಕಾರ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದರೆ ತಾವು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟಾಗಿ ಜನರ ಬಳಿ ಭಿಕ್ಷೆ ಬೇಡಿ ಆಕ್ಸಿಜನ್‌ ಸೇರಿದಂತೆ ಸೌಲಭ್ಯಗಳನ್ನು ಒದಗಿಸಿ ಆಸ್ಪತ್ರೆ ಪ್ರಾರಂಭಿಸುತ್ತೇವೆ ಎಂದು ಸವಾಲು ಹಾಕಿದರು.

ಶ್ರೀರಾಮನಗರ ಕೋವಿಡ್‌ ಆಸ್ಪತ್ರೆಯಲ್ಲಿದ್ದ ಸೋಂಕಿತರನ್ನು ಕುರಿಗಳಂತೆ ವಾಹನದಲ್ಲಿ ತುಂಬಿ ಗಂಗಾವತಿಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ತಿಳಿಸಬೇಕೆಂದು ಒತ್ತಾಯಿಸಿದರು. ಕನಕಗಿರಿ ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಕ್ವಾರಂಟೈನ್‌ ಮಾಡಿದ್ದಾರೆ. ಇಲ್ಲಿ ಊಟದ ವ್ಯವಸ್ಥೆ ಇಲ್ಲ. ಸೌಲಭ್ಯಗಳು ಇಲ್ಲ. ಸ್ವತಃ ಸೋಂಕಿತರೇ ಅರೋಪ ಮಾಡುತ್ತಿದ್ದಾರೆ ಎಂದು ಅರೋಪಿಸಿದರು. ನವಲಿ ಗ್ರಾಮದಲ್ಲಿ ವೈದ್ಯರು ಇಲ್ಲ. ಅಲ್ಲಿರುವ ಕ್ವಾರಂಟೈನ್‌ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ ಇಲ್ಲದ ಕಾರಣ ಸೋಂಕಿತರು ಹೋಗಲು ಹಿಂಜರಿಯುತ್ತಿದ್ದಾರೆ ಎಂದು ದೂರಿದರು.

ಕಳೆದ ಎರಡು ದಿನಗಳಿಂದ ಶಾಸಕರು ಕ್ಷೇತ್ರದಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಳ್ಳುವಂತೆ ಅಭಿಯಾನ ನಡೆಸಿದ್ದಾರೆ. ಬಂದವರಿಗೆ ವ್ಯಾಕ್ಸಿನ್‌ ಹಾಕಿದರೆ ಸಾಕು. ಅದು ಹೇಳುವುದು ಬಿಟ್ಟು ಅಭಿಯಾನಕ್ಕೆ ಮುಂದಾಗಿರುವುದು ನಾಚಿಗೇಡಿತನವಾಗಿದೆ ಎಂದರು. ಎಷ್ಟೋ ಜನರು ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದರೆ ವ್ಯಾಕ್ಸಿನ್‌ ಲಭ್ಯವಿಲ್ಲದೆ ವಾಪಸ್‌ ಆಗಿದ್ದಾರೆ. ವ್ಯಾಕ್ಸಿನ್‌ ಬಗ್ಗೆ ಜನರೇ ಆಸ್ಪತ್ರೆಗೆ ಹೋಗುತ್ತಾರೆ. ಅದರ ಬಗ್ಗೆ ಅಭಿಯಾನ ಬೇಕಾಗಿಲ್ಲ. ಅದರ ಬದಲು ಕೋವಿಡ್‌ ಆಸ್ಪತ್ರೆ ಪ್ರಾರಂಭಿಸಿ ಎಂದು ಶಾಸಕರಿಗೆ ಸಲಹೆ ನೀಡಿದರು.

ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಸದಸ್ಯ ಅಮರೇಶ ಗೋನಾಳ್‌, ಪ್ರಭಾಕರ, ಫಕ್ಕೀರಯ್ಯ, ಮಹ್ಮದ್‌ ರಫಿ, ಬಾಲನಗೌಡ, ಸಿದ್ಧನಗೌಡ ಗೂಡೂರು, ರೇಣುಕಾ, ವೆಂಕನಗೌಡ, ಯಮನೂರಪ್ಪ ಉಪಸ್ಥಿತರಿದ್ದರು.
 

click me!