ಕಾಂಗ್ರೆಸ್ ನಾಯಕಿ ಕೊಲೆ ಪ್ರಕರಣ : ತನಿಖಾಧಿಕಾರಿ ಬದಲು

By Web DeskFirst Published Aug 24, 2019, 10:52 AM IST
Highlights

ಕಾಂಗ್ರೆಸ್ ನಾಯಕಿ ರೇಷ್ಮಾ ಪಡೆಕನೂರು ಕೊಲೆ ಪ್ರಕರಣದ ತನಿಖಾಧಿಕಾರಿ ಲಂಚ ಪಡೆದು ಸಿಕ್ಕಿ ಬಿದ್ದ ಪರಿಣಾಮ ಇದೀಗ ಹೊಸ ತನಿಖಾಧಿಕಾರಿ ನೇಮಿಸಲಾಗಿದೆ.

ವಿಜಯಪುರ [ಆ.24]:  ಸ್ಥಳೀಯ ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪರ ವಿಜಯಪುರ ಪೊಲೀಸರು ಸೊಲ್ಲಾಪುರದಲ್ಲಿ ಲಂಚ ಪಡೆಯುವಾಗ ಅಲ್ಲಿನ ಎಸಿಬಿ ಬಲೆಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖಾಧಿಕಾರಿಯಾಗಿ ಹೊಸದಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. 

ಏತನ್ಮಧ್ಯೆ, ಪತ್ನಿಯ ಕೊಲೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ಸಿಬಿಐಗೆ ವಹಿಸುವಂತೆ ರೇಷ್ಮಾ ಪತಿ ಖಾಜಾ ಬಂದೇನವಾಜ್‌, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಕರ್ನಾಟಕ ಪೊಲೀಸ್‌!

ರೇಷ್ಮಾ ಹತ್ಯೆ ಪ್ರಕರಣದ ಆರೋಪಿಗಳನ್ನು ಪಾರು ಮಾಡುವುದಕ್ಕೋಸ್ಕರವಾಗಿ ಲಂಚ ಪಡೆಯುತ್ತಿದ್ದ ಬಸವನಬಾಗೇವಾಡಿ ಪೇದೆ ಮಲ್ಲಿಕಾರ್ಜುನ ಪೂಜಾರಿ ಮತ್ತು ಮಧ್ಯವರ್ತಿ ರಿಯಾಜ್‌ ಕೊಕಟನೂರನನ್ನು ಮಹಾರಾಷ್ಟ್ರ ಎಸಿಬಿ ಪೊಲೀಸರು ಗುರುವಾರ ಸೊಲ್ಲಾಪುರದಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಡಿವೈಎಸ್‌ಪಿ ಮಹೇಶ್ವರಗೌಡ ಪಾಟೀಲ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಡಿವೈಎಸ್‌ಪಿ ಮಹೇಶ್ವರಗೌಡ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

click me!