ಸಿಎಎ ಗೊಂದಲ ಹುಟ್ಟಿಸಿದ್ದು ಮೋದಿ, ಅಮಿತ್ ಶಾ|ಪೌರತ್ವ ಮಸೂದೆ ಈ ಹಿಂದೆ 8 ರಿಂದ 10 ಬಾರಿ ತಿದ್ದುಪಡಿಯಾಗಿದೆ| ಯಾವ ಸಂದರ್ಭದಲ್ಲಿಯೂ ಈ ರೀತಿಯ ಗೊಂದಲ ಸೃಷ್ಟಿಯಾಗಿರಲಿಲ್ಲ| ಈ ಹಿಂದೆ ಯಾರಿಗೆ ಪೌರತ್ವ ಕೊಡಬೇಕಿತ್ತು ಅವರೆಲ್ಲರಿಗೂ ಕೊಟ್ಟಿದ್ದೇವೆ| ಕೆಲವೊಂದು ಗೊಂದಲಕಾರಿ ಅಂಶ ಹಾಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ|
ಕಲಬುರಗಿ[ಜ.22]: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿಷಯದಲ್ಲಿ ಗೊಂದಲ ಹುಟ್ಟು ಹಾಕುತ್ತಿರುವುದು ಪ್ರತಿಪಕ್ಷಗಳಲ್ಲ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ. ಆದರೆ ಅದನ್ನು ಪ್ರತಿಪಕ್ಷಗಳ ಮೇಲೆ ಹಾಕುತ್ತಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
ಕಲಬುರಗಿಯಲ್ಲಿ ಪೀಪಲ್ಸ್ ಫೋರಂ ಆಯೋಜಿಸಿದ್ದ ಸಿಎಎ ವಿರೋಧಿ ರಾಷ್ಟ್ರೀಯ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳವಾರ ಜಿಲ್ಲೆಯ ಪ್ರವಾಸದಲ್ಲಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪೌರತ್ವ ಮಸೂದೆ ಈ ಹಿಂದೆ 8 ರಿಂದ 10 ಬಾರಿ ತಿದ್ದುಪಡಿಯಾಗಿದೆ. ಆದರೆ ಯಾವ ಸಂದರ್ಭದಲ್ಲಿಯೂ ಈ ರೀತಿಯ ಗೊಂದಲ ಸೃಷ್ಟಿಯಾಗಿರಲಿಲ್ಲ. ಈ ಹಿಂದೆ ಯಾರಿಗೆ ಪೌರತ್ವ ಕೊಡಬೇಕಿತ್ತು ಅವರೆಲ್ಲರಿಗೂ ಕೊಟ್ಟಿದ್ದೇವೆ. ಆದರೆ ಕೆಲವೊಂದು ಗೊಂದಲಕಾರಿ ಅಂಶ ಹಾಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಖರ್ಗೆ ಆಕ್ಷೇಪಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ದೇಶಭಕ್ತಿಯ ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದಾರೆ. ಅವರ ಬಗ್ಗೆ ಏನು ಹೇಳಿದರೂ ಪ್ರಯೋಜನವಿಲ್ಲ. ತಾವೇ ದೇಶಭಕ್ತರು ಎಂಬಂತೆ ಧೋರಣೆ ಅವರದ್ದಾಗಿದೆ ಎಂದು ಮೋದಿ, ಅಮಿತ್ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಪತ್ತೆ ಪ್ರಕರಣ ಕುರಿತಂತೆ ಹೇಳಿಕೆ ನೀಡಿದ ಅವರು, ಈ ಕುರಿತು ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಯಲಿ. ಸರ್ಕಾರ ತಕ್ಷಣ ತನಿಖಾ ಸಂಸ್ಥೆಗೆ ಅಲರ್ಟ್ ಮಾಡಬೇಕು. ತಪ್ಪಿತಸ್ಥರು ಯಾರೇ ಇರಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ವಿಚಾರವಾಗಿಯೂ ಸ್ಪಂದಿಸಿದ ಖರ್ಗೆ ಈ ಕುರಿತು ಹೈಕಮಾಂಡ್ ಶೀಘ್ರ ನಿರ್ಧಾರ ಕೈಗೊಳ್ಳುತ್ತೆ, ಕೆಪಿಸಿಸಿ ಅಧ್ಯಕ್ಷರ ನೇಮಕ ನಮಗೇನು ಅಷ್ಟು ಅವಸರವಿಲ್ಲ. ಆದರೆ ಮಾಧ್ಯಮಗಳಿಗೆ ಮತ್ತು ಪ್ರತಿಪಕ್ಷಗಳಿಗೆ ಅವಸರವಿದ್ದಂತೆ ಕಾಣುತ್ತಿದೆ ಎಂದು ಮಾತಿನಲ್ಲೇ ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಚರ್ಚೆಗಳು ಪೂರ್ಣಗೊಂಡಿವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಕ್ತ ನಿರ್ಧಾರ ಕೈಗೊಳ್ಳಲಿ ದ್ದಾರೆಂದ ಡಾ. ಖರ್ಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕದ ಬಗ್ಗೆಯೂ ಪ್ರತಿಕ್ರಿಯೆ ಸಾಗಿದೆ. ಮಹಾರಾಷ್ಟ್ರದಲ್ಲಿ ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿತ್ತು, ಕರ್ನಾಟಕದಲ್ಲಿಯೂ ಈ ಹಿಂದೆ ಇಬ್ಬರು ಕಾರ್ಯಾಧ್ಯಕ್ಷರ ನೇಮಕ ಮಾಡಲಾಗಿತ್ತು. ಸಂದರ್ಭಕ್ಕೆ ತಕ್ಕಂತೆ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ. ಇದು ಪಕ್ಷದ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ಕೆಲವು ನಾಯಕರಲ್ಲಿ ಭಿನ್ನ ನಿಲುವುಗಳಿರಬಹುದು. ಆದರೆ ಎಲ್ಲರೂ ಪಕ್ಷದ ನಿರ್ಣಯಕ್ಕೆ ಬದ್ಧರಾಗಿರುತ್ತೇವೆಂದು ಡಾ. ಖರ್ಗೆ ಹೇಳಿದರು.