ಈಗ ಬಂದು ರಾಜೀನಾಮೆ ಕೇಳ್ತಾರೆ ಎಂದರೆ ಏನರ್ಥ, ಮೇಲಿನಿಂದಲೇ ನಾಯಕರನ್ನು ಬದಲಾಯಿಸಿಕೊಂಡು ಬರಲಿ ಎಂದು ಉಪ ಚುನಾವಣೆಯಲ್ಲಿ ಸೋತ ಕೈ ಅಭ್ಯರ್ಥಿಯೋರ್ವರು ಹೇಳಿದ್ದಾರೆ. ಅವರು ಹೀಗೆ ಹೇಳಿದ್ಯಾಕೆ..?
ಕಾರವಾರ [ಡಿ.17]: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲು ಮಾರ್ಗರೆಟ್ ಆಳ್ವ ಯಾರು? ಅಗತ್ಯ ಇದ್ದರೆ ಕೆಪಿಸಿಸಿಯಿಂದಲೇ ಜಿಲ್ಲಾಧ್ಯಕ್ಷರನ್ನು ಬದಲಿಸಿಕೊಂಡು ಬರಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸವಾಲು ಹಾಕಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನ ರಾಜೀನಾಮೆ ಕೇಳುವ ಮಾರ್ಗರೆಟ್ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ಎಲ್ಲಿದೆ ಎಂಬುದನ್ನು ಮೊದಲು ಹೇಳಲಿ ಎಂದರು.
undefined
ಆಳ್ವ ಅವರು ನಮ್ಮ ಕಾಂಗ್ರೆಸ್ ನಾಯಕಿ. ಅವರು ಸಂಸದರಾಗಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಅವರೂ ಸೋತಿದ್ದಾರೆ. ಈಗ ಬಂದು ರಾಜೀನಾಮೆ ಕೇಳುತ್ತಾರೆ ಎಂದರೆ ಏನರ್ಥ ? ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸುವ ಕಾರ್ಯಕರ್ತ ನಾನು. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಹಿಂದಿನ ಅಧ್ಯಕ್ಷ ಡಾ. ಪರಮೇಶ್ವರ, ದಿನೇಶ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಪಕ್ಷದ ಸೂಚನೆ ಏನಿದೆ ಅದನ್ನು ಕಡ್ಡಾಯವಾಗಿ ಪಾಲಿಸಿದ್ದೇನೆ. ಹತ್ತು ವರ್ಷಗಳ ಕಾಲ ಪಕ್ಷದ ಸಂಘಟನೆಗೆ ಬಾರದೇ, ಕೆಲಸ ಮಾಡದೇ ಈಗ ಬಂದು ರಾಜೀನಾಮೆ ಕೇಳಿದ್ದು ಯಾಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸಿನಲ್ಲಿ ಭಾರೀ ಬಿರುಗಾಳಿ : ಸೋತ ಭೀಮಣ್ಣ ನಾಯ್ಕ ರಾಜೀನಾಮೆಗೆ ಆಗ್ರಹ...
ಇವರಿಗೆ ನಾನು ಅಧ್ಯಕ್ಷನಿರುವುದು ಬೇಡ ಎಂದರೆ ಕೆಪಿಸಿಸಿ ಹಂತದಲ್ಲಿ ಬದಲಾವಣೆ ಮಾಡಿಕೊಂಡು ಬರಲಿ, ನಾವೂ ಕಾಯುತ್ತಿದ್ದೇವೆ. ಕಳೆದ ಶಿರಸಿ ಸಿದ್ದಾಪುರ ಮತಕ್ಷೇತ್ರದಲ್ಲಿ ಸೋತಾಗಲೇ ರಾಜೀನಾಮೆ ನೀಡಿದ್ದೆ ಎಂದೂ ನೆನಪಿಸಿದರು. ನಾನು ಪಕ್ಷದ್ರೋಹ ಮಾಡಿದ್ದರೆ, ಸೋತೆ ಎಂದು ಮನೆಯಲ್ಲೇ ಕುಳಿತಿದ್ದು, ಸಂಘಟನೆಯಿಂದ ದೂರ ಇದ್ದರೆ ರಾಜೀನಾಮೆ ಯಾವ ಕಾರ್ಯಕರ್ತರೂ ಕೇಳಬಹುದು. ಆದರೆ, ಅದು ಯಾವುದೂ ಇಲ್ಲದೇ, ಪಕ್ಷದೊಳಗಿನ ಸಂಗತಿಯನ್ನು ಪಕ್ಷದ ವೆದಿಕೆಯಲ್ಲಿ ಚರ್ಚಿಸದೆ, ಕಾಂಗ್ರೆಸ್ ಕಚೇರಿಗೆ ಬಂದು ತಮ್ಮ ನೋವು ತೋಡಿಕೊಳ್ಳದೇ ಏಕಾಏಕಿ ಎಲ್ಲೋ ಕುಳಿತು ಪ್ರಶ್ನಿಸುತ್ತಾರೆ ಎಂದರೆ ಅದರರ್ಥ ಎಂದು ಕೇಳಬೇಕಾಗುತ್ತದೆ. ಅಂಥ ಹಿರಿಯ ನಾಯಕರಿಗೆ ಗೊಂದಲ ಸೃಷ್ಟಿಸುವದು ಸರಿಯಲ್ಲ, ಭೂಷಣವೂ ಅಲ್ಲ. ಪಕ್ಷವನ್ನು ಕಟ್ಟಬೇಕೇ ಹೊರತು ಕೆಡವಬಾರದು ಎಂದು ಹೇಳಿದ ಭೀಮಣ್ಣ, ಹಿಂದೆ ಶಿವರಾಮ ಹೆಬ್ಬಾರರನ್ನು ಪಕ್ಷಕ್ಕೆ ಕರೆತಂದೆ ಎನ್ನುವವರು, ಈಗ ಹೋಗುವಾಗ ಬುದ್ಧಿ ಹೇಳಲು ಆಗಲಿಲ್ಲವಾ ಎಂದೂ ಕೇಳಿದರು.