ತಿಂಗಳಾಂತ್ಯಕ್ಕೆ BBMP ಚುನಾವಣೆ ಫಿಕ್ಸ್ : ಮುಂದೂಡಲು ಒತ್ತಾಯ

By Kannadaprabha NewsFirst Published Sep 10, 2019, 8:35 AM IST
Highlights

ಇದೇ ತಿಂಗಳಾಂತ್ಯಕ್ಕೆ ನಿಗದಿಯಾದ ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮನವಿ ಮಾಡಿದ್ದಾರೆ. BBMP ಮೇಯರ್, ಉಪ ಮೇಯರ್ ಚುನಾವಣೆ ಜೊತೆಯಲ್ಲಿಯೇ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸಲು ಕೇಳಿಕೊಂಡಿದ್ದಾರೆ. 

ಬೆಂಗಳೂರು [ಸೆ.10]:  ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳುವವರೆಗೆ ಚುನಾವಣೆ ನಡೆಸದಂತೆ ಪಾಲಿಕೆ ಆಡಳಿತರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಬಿಬಿಎಂಪಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಕೆಎಂಸಿ ಕಾಯ್ದೆಯ ನಿಯಮದಂತೆ 2019-20ನೇ ಸಾಲಿನ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ವೇಳೆಯಲ್ಲಿಯೇ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸೋಮವಾರ ಪಾಲಿಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸ್ಥಾಯಿ ಸಮಿತಿ ಅಧಿಕಾರವಧಿ ಒಂದು ವರ್ಷವಾಗಿದೆ. ಅದರಂತೆ ಸ್ಥಾಯಿ ಸಮಿತಿಗಳ ಅಧಿಕಾರವಧಿ ಡಿ.4ಕ್ಕೆ ಮುಕ್ತಾಯವಾಗಲಿದೆ. ಅಲ್ಲಿಯವರೆಗೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸದಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಾದೇಶಿಕ ಚುನಾವಣಾ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ನಾಲ್ಕು ವರ್ಷ ವಿಳಂಬವೇ ಗೊಂದಲಕ್ಕೆ ಕಾರಣ:

ಕೆಎಂಸಿ ಕಾಯ್ದೆ ಪ್ರಕಾರ ಮೇಯರ್‌ ಹಾಗೂ ಉಪಮೇಯರ್‌ ಹುದ್ದೆಗೆ ಚುನಾವಣೆ ನಡೆಯುವ ದಿನವೇ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕು. ಈ ಹಿಂದಿನ ಅವಧಿಯಲ್ಲಿಯೂ ಮೇಯರ್‌ ಚುನಾವಣೆ ದಿನವೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆಯುತ್ತಿತ್ತು. ಆದರೆ, 2015-16ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳು ಒಂದಾಗಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿದ ನಂತರ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಪ್ರತ್ಯೇಕವಾಗಿ ನಡೆಯಲು ಆರಂಭವಾಯಿತು. ಇದು ವರ್ಷದಿಂದ ವರ್ಷಕ್ಕೆ ವಿಳಂಬವಾಗುತ್ತಾ ಹೋಯಿತು. ಕಳೆದ 2018ರಲ್ಲಿ ಸೆ.28ರಂದು ಮೇಯರ್‌ ಹಾಗೂ ಉಪಮೇಯರ್‌ ಹುದ್ದೆಗೆ ಚುನಾವಣೆ ನಡೆದರೆ, ಡಿ.4ರಂದು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಿತು. ಹಾಗಾಗಿ, ಮೇಯರ್‌ ಅಧಿಕಾರವಧಿ ಪೂರ್ಣಗೊಂಡ ಎರಡು ತಿಂಗಳ ಬಳಿಕ ಸ್ಥಾಯಿ ಸಮಿತಿ ಅಧಿಕಾರವಧಿ ಪೂರ್ಣಗೊಳ್ಳುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2019-20ರ ಅವಧಿ ಪ್ರಸಕ್ತ ಸಾಲಿನ ಕೊನೆ ವರ್ಷ ಆಗಿರುವುದರಿಂದ ಮೇಯರ್‌ ಚುನಾವಣೆ ವೇಳೆ ಸ್ಥಾಯಿ ಸಮಿತಿ ಚುನಾವಣೆ ನಡೆಯದಿದ್ದರೆ, ಕೊನೆ ವರ್ಷ ಸ್ಥಾಯಿ ಸಮಿತಿಗಳಿಗೆ ಕೇವಲ ಹತ್ತು ತಿಂಗಳು ಮಾತ್ರ ಅಧಿಕಾರ ಸಿಗಲಿದೆ. ಹೀಗಾಗಿ, ಬಿಜೆಪಿ ಸದಸ್ಯರು ಮೇಯರ್‌ ಚುನಾವಣೆ ಜತೆಗೆ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದೆ.

ಒಂದು ವೇಳೆ ಮೇಯರ್‌ ಚುನಾವಣೆ ಜತೆಗೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸಿದರೆ, 2018-19ನೇ (ಪ್ರಸ್ತುತ) ಸಾಲಿನಲ್ಲಿ ಸ್ಥಾಯಿ ಸಮಿತಿಯ ಸದಸ್ಯರಾದವರೆಗೆ ಕೇವಲ 10 ತಿಂಗಳು ಅಧಿಕಾರ ಪ್ರಾಪ್ತವಾಗಲಿದೆ.

ಕಾನೂನು ಸಲಹೆ:

ಪಾಲಿಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ನಗರಾಭಿವೃದ್ಧಿ ಇಲಾಖೆಗೆ ಸ್ಥಾಯಿ ಸಮಿತಿ ಚುನಾವಣೆ ಸಂಬಂಧ ಮಾಡಿರುವ ಮನವಿ ಕುರಿತಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಾನೂನು ಇಲಾಖೆ ಸಲಹೆ ಪಡೆಯುವುದಕ್ಕೆ ಮುಂದಾಗಿದ್ದಾರೆ.

ನಾಳೆ ಮೇಯರ್‌ ಚುನಾವಣೆ ಅಧಿಸೂಚನೆ?

ಮೇಯರ್‌ ಗಂಗಾಂಬಿಕೆ ಹಾಗೂ ಉಪಮೇಯರ್‌ ಭದ್ರೇಗೌಡ ಅವರ ಅಧಿಕಾರಾವಧಿ ಸೆ.28ಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣೆ ನಡೆಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ. ಅದರಂತೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2019-20 ಸಾಲಿನ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಗೆ ಸೆ.11ರಂದು ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ಕಳೆದ ವರ್ಷ 2018 ಡಿ.4ರಂದು ನಡೆದ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಪ್ರಾದೇಶಿಕ ಆಯುಕ್ತರು ಸ್ಪಷ್ಟವಾಗಿ ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಒಂದು ವರ್ಷ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಈಗ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ವೇಳೆ ಸ್ಥಾಯಿ ಸಮಿತಿಗೆ ಚುನಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಈಗಿರುವ ಸ್ಥಾಯಿ ಸಮಿತಿಯ ಸದಸ್ಯರ ಅಧಿಕಾರಾವಧಿ ಮೊಟಕುಗೊಳ್ಳಲಿದೆ. ಹಾಗಾಗಿ, ಡಿ.4ಕ್ಕೆ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೇವೆ.

-ಅಬ್ದುಲ್‌ ವಾಜೀದ್‌, ಆಡಳಿತ ಪಕ್ಷದ ನಾಯಕ.

ಕೆಎಂಸಿ ಕಾಯ್ದೆಯಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಜತೆಗೆ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕೆಂದು ತಿಳಿಸಿದೆ. ಅಲ್ಲದೇ ಈ ಬಗ್ಗೆ ಹೈಕೋರ್ಟ್‌ನಲ್ಲಿ ಆದೇಶವಿದೆ. ಕಾನೂನು ಪ್ರಕಾರ ಚುನಾವಣೆ ನಡೆಸಲಿ.

-ಪದ್ಮನಾಭ ರೆಡ್ಡಿ, ಪಾಲಿಕೆ ವಿಪಕ್ಷ ನಾಯಕ.

click me!