ಕಾಂಗ್ರೆಸ್ ನಾಲ್ಕೂಟೈರ್ ಪಂಕ್ಚರ್ ಆಗಿರೋ ಬಸ್‌ನಂತೆ: ಬೊಮ್ಮಾಯಿ ವ್ಯಂಗ್ಯ

By Kannadaprabha NewsFirst Published Jan 12, 2021, 10:54 AM IST
Highlights

ನಾಲ್ಕೂ ಚಕ್ರ ಪಂಕ್ಚರ್‌ ಆಗಿರುವ ಬಸ್‌ನಂತಾಗಿರುವ ಕಾಂಗ್ರೆಸ್‌ | ಜನಸೇವಕ ಸಮಾವೇಶದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯ

ಹಾವೇರಿ(ಜ.12): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ಬಗ್ಗೆ ಕಾಂಗ್ರೆಸ್‌ ರೈತರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ನಾಲ್ಕೂ ಚಕ್ರಗಳು ಪಂಕ್ಚರ್‌ ಆಗಿರುವ ಬಸ್‌ನ ಸ್ಥಿತಿಗೆ ಕಾಂಗ್ರೆಸ್‌ನದ್ದಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜನಸೇವಕ ಸಮಾವೇಶದಲ್ಲಿ ಅವರು ಮಾತನಡಿದರು.

ಕಾಂಗ್ರೆಸ್‌ ಎಂಬ ಬಸ್ಸಿಗೆ ಡಿ.ಕೆ. ಶಿವಕುಮಾರ ಕಂಡೆಕ್ಟರ್‌ ಆಗಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಡ್ರೈವರ್‌ ಆಗಿದ್ದಾರೆ. ಕಂಡಕ್ಟರ್‌ ಸೀಟಿ ಹೊಡೆದರೆ ಡ್ರೈವರ್‌ ಬಸ್‌ ನಿಲ್ಲಿಸಬೇಕಾದ ಸ್ಥಿತಿ ಇದೆ. ಆದ್ದರಿಂದ ಆ ಬಸ್‌ ಮುಂದಕ್ಕೂ ಹೋಗದೇ, ಹಿಂದಕ್ಕೂ ಹೋಗದಂತಾಗಿದೆ ಎಂದು ಲೇವಡಿ ಮಾಡಿದರು.

 

2015ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಅಂಬಾನಿ ಒಡೆತನದ ರಿಲಯನ್ಸ್‌ಗೆ ಪರವಾನಗಿ ಕೊಟ್ಟಿದ್ದರು. ಈಗ ಅವರೇ ಕೃಷಿ ಕಾಯ್ದೆ ವಿರೋಧಿಸುತ್ತ ಅಂಬಾನಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ದ್ವಂದ್ವ ನಿಲುವಿನ ಬಗ್ಗೆ ಜನರಿಗೆ ಗೊತ್ತಾಗಿದೆ. ಸುಳ್ಳಿನ ಕಂತೆಯ ಪುಸ್ತಕ ಬಿಡುಗಡೆ ಮಾಡಿದರೆ ಯಾರೂ ನಿಮ್ಮನ್ನು ನಂಬುವುದಿಲ್ಲ. ಯಡಿಯೂರಪ್ಪನವರು ರೈತಪರ ಹೋರಾಟ ಮಾಡಿಯೇ ಸಿಎಂ ಆದವರು. ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆಗಳಲ್ಲಿ ರೈತರಿಗೆ ಅನ್ಯಾಯವಾಗಲು ಯಡಿಯೂರಪ್ಪನವರು ಬಿಡುವುದಿಲ್ಲ. ಗ್ರಾಮೀಣ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದರು.

ಗ್ರಾಮಗಳ ಆಡಳಿತ ಗ್ರಾಮಗಳಲ್ಲಿಯೇ ನಡೆಯಬೇಕು ಎಂಬ ಉದ್ದೇಶದಿಂದ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವ ಗ್ರಾಮ್‌ ಸ್ವರಾಜ್ಯ ಪರಿಕಲ್ಪನೆ ಕನಸನ್ನು ಸಾಕಾರಗೊಳಿಸುವ ಜೊತೆಗೆ ಗ್ರಾಮ್‌ ಸುರಾಜ್ಯ ನಿರ್ಮಾಣಕ್ಕೂ ಶ್ರಮಿಸಲಾಗುವುದು. ಜನರ ಸುತ್ತ ಅಭಿವೃದ್ಧಿ ಕಾಮಗಾರಿಗಳು ಸುತ್ತಬೇಕು ಹೊರತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಜನರು ಓಡಾಡಬಾರದು. ಹಿಂದೆ ಬಿಜೆಪಿ ಸರ್ಕಾರ ಸುವರ್ಣ ಗ್ರಾಮ ಯೋಜನೆ ಜಾರಿಗೊಳಿಸಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅದನ್ನು ರದ್ದುಗೊಳಿತು. ಮತ್ತೆ ಸುವರ್ಣ ಗ್ರಾಮವನ್ನು ಕಟ್ಟುವ ಕೆಲಸವನ್ನು ತಾವೆಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಜಿಪಂ, ತಾಪಂ ಚುನಾವಣೆ ಬಳಿಕ ಕಾಂಗ್ರೆಸ್‌ ಮುಕ್ತ:

ಗ್ರಾಪಂ ಚುನಾವಣೆಯಲ್ಲಿ ದೊರೆತಿರುವ ಅಭೂತಪೂರ್ವ ಬೆಂಬಲ ನೋಡಿದರೆ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಕ್ತವಾಗಲಿದೆ. ಗ್ರಾಪಂನಲ್ಲಿ ಕಾಂಗ್ರೆಸ್‌ ಬೆಂಬಲಿತರು ಹೆಚ್ಚು ಗೆದ್ದಿದ್ದಾರೆ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ. ಜಿಪಂ, ತಾಪಂ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್‌ ನಿಜ ಬಣ್ಣ ಬಯಲಾಗಲಿದೆ. ಜಿಲ್ಲೆಯ 32 ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿ ಪಕ್ಷ ಸಂಘಟಿಸುವ ಸಂಕಲ್ಪ ಮಾಡಿದ್ದೇವೆ. ಕಾಂಗ್ರೆಸ್‌ ಮುಕ್ತವಾಗಿರುವ ಹಾವೇರಿ ಜಿಲ್ಲೆಯಲ್ಲಿ ಇದೇ ಸ್ಥಿತಿ ಮುಂದುವರೆಯ ಬೇಕಾದರೆ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು. ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಜನಸೇವೆ ಮಾಡಿದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ನಮ್ಮ ರಾಷ್ಟ್ರೀಯ ನಾಯಕರು ವಿಭಿನ್ನವಾಗಿ ವಿಚಾರ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಕಳುಹಿಸಿದ್ದಾರೆ. ವಿಶಿಷ್ಟವಾಗಿ ಕೆಲಸ ಮಾಡುವ ಮೂಲಕ ರಾಜ್ಯ, ರಾಷ್ಟ್ರದ ಗಮನ ಸೆಳೆದರೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರೂ ರಾಜ್ಯಸಭೆಗೆ ಹೋಗಲು ಅವಕಾಶ ಸಿಗುತ್ತದೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಈಗ ನೂತನವಾಗಿ ಗೆದ್ದಿರುವ ಸದಸ್ಯರ ಚಿತ್ತ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯತ್ತ ನೆಟ್ಟಿದೆ. ಈ ಗ್ರಾಪಂ ಚುನಾವಣೆಯಲ್ಲಿ ಬಹಳಷ್ಟುಹಣ ಖಚು ಮಾಡಿದವರು ಗೆದ್ದಿಲ್ಲ, ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಜನ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಅಲ್ಲೂ ಕಾಂಗ್ರೆಸ್‌ ಮುಕ್ತ ಮಾಡಬೇಕಿದೆ ಎಂದರು.

 

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದೀರಿ. ಹಾವೇರಿಯಂತೆ ಕರ್ನಾಟಕವನ್ನೂ ಕಾಂಗ್ರೆಸ್‌ ಮುಕ್ತ ಮಾಡಬೇಕಿದೆ. ಹಿಂದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಗುಡುಗುತ್ತಿದ್ದರು. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವ ಸ್ಥಾನಗಳನ್ನು ನೋಡಿ ನಡುಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅವರ ಮುಖ ನೋಡಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜನ ಮತಕೊಟ್ಟಿದ್ದಾರೆ. ದೆಹಲಿಯಿಂದ ಗ್ರಾಪಂಗಳಿಗೆ ನೇರವಾಗಿ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ಸರ್ಕಾರದಲ್ಲಿ ಪರಿಶಿಷ್ಟಜಾತಿ, ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುತ್ತೇವೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಪ್ರತಿಯೊಂದು ಪಂಚಾಯಿತಿಗೆ ಜನಸಂಖ್ಯೆಗೆ ಅನುಗುಣವಾಗಿ ವರ್ಷಕ್ಕೆ ಕನಿಷ್ಠ . 1 ಕೋಟಿ ಅನುದಾನ ಕೇಂದ್ರದಿಂದ ಬರುತ್ತದೆ. 15ನೇ ಹಣಕಾಸು ಯೋಜನೆಯಲ್ಲಿ ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ . 31 ಸಾವಿರ ಕೋಟಿ ಅನುದಾನ ಬರಲಿದೆ. ಗ್ರಾಪಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇನ್ನು ಮೇಲೆ ಸರ್ಕಾರದ ಯೋಜನೆಗಳನ್ನು ಬಡವರಿಗೆ, ಅರ್ಹರಿಗೆ ತರುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಕನಸಾಗಿದೆ. ಮಂದಿರ ಕಟ್ಟಲು ಬೇಕಾದ ಹಣವನ್ನು ಟಾಟಾ, ಬಿರ್ಲಾರಂಥ ಅನೇಕರು ಕೊಡುತ್ತೇನೆ ಎನ್ನುತ್ತಾರೆ. ಆದರೆ, ಇದು ದೇಶದ ಪ್ರತಿಯೊಬ್ಬ ವ್ಯಕ್ತಿಯ ಸಂಕಲ್ಪದಿಂದ ಆಗಬೇಕಿದೆ. ಅದಕ್ಕಾಗಿ ಜ. 15ರಿಂದ ನಿಧಿ ಸಂಗ್ರಹ ಅಭಿಯಾನ ಶುರುವಾಗಲಿದೆ. ನೂತನ ಗ್ರಾಪಂ ಸದಸ್ಯರು ಪಕ್ಷ, ಸಂಘಟನೆ ಸೂಚಿಸುವ ಎಲ್ಲ ಕಾರ್ಯವನ್ನು ಚಾಚೂತಪ್ಪದೇ ಪಾಲಿಸಬೇಕು ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ನೆಹರು ಓಲೇಕಾರ, ಆರ್‌. ಶಂಕರ್‌, ಪ್ರದೀಪ ಶೆಟ್ಟರ್‌ ಮಾತನಾಡಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಯು.ಬಿ. ಬಣಕಾರ ಇತರರು ಇದ್ದರು.

click me!