ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ತುಮಕೂರು : ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ರೈತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳುಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಯಾವುದೇ ಷರತ್ತಿಲ್ಲದ ಐದು ಗ್ಯಾರಂಟಿ ಈಡೇರಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಒಂದೊಂದೇ ಷರತ್ತುಗಳನ್ನು ಹಾಕುವ ಮೂಲಕ ಮತ ನೀಡಿದ ಜನರಿಗೆ ದ್ರೋಹ ಬಗೆದಿದೆ ಎಂದರು.
ರೈತರಿಗೆ ನೆರವಾಗುವ ಕೃಷಿ ಸನ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ನಾಲ್ಕು ಸಾವಿರ ರು. ಗಳನ್ನು ರದ್ದುಪಡಿಸುವ ಮೂಲಕ ತಾನು ರೈತವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ಅನ್ನಭಾಗ್ಯದಲ್ಲಿಯೂ ಕೇಂದ್ರ ನೀಡುತ್ತಿದ್ದ ಐದು ಕೆ.ಜಿ.ಯಲ್ಲಿಯೂ 3 ಕೆ.ಜಿ.ಅಕ್ಕಿ, ಎರಡು ಕೆ.ಜಿ.ರಾಗಿ ನೀಡುವ ಮೂಲಕ ದ್ರೋಹವೆಸಗಿದೆ. ವಿಧಾನಸಭೆಯಲ್ಲಿ ನಮ್ಮ 10 ಜನ ಶಾಸಕರನ್ನು ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸದನದಿಂದ ಹೊರ ಹಾಕುವ ಮೂಲಕ ಅತ್ಯಂತ ಹೀನ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ಆಕೋಶ್ರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಸರ್ಕಾರದ ತಪ್ಪು ಧೋರಣೆಗಳ ವಿರುದ್ಧ ಪ್ರತಿಭಟಿಸಿದ ನಮ್ಮ 10 ಜನ ಶಾಸಕರನ್ನು ಮಾರ್ಷಲ್‌ಗಳನ್ನು ಬಳಸಿ ಹೊರಹಾಕಿ, ನಿಷೇಧಿಸಿರುವ ಸ್ಪೀಕರ್ ಕ್ರಮ ಅಸಂವಿಧಾನಿಕವಾಗಿದ್ದು, ಇದರಿಂದ ರಾಜ್ಯದ ಜನತೆ ಭಯಭೀತರಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಶೇ.65 ಸರಕಾರವಾಗಿದ್ದು, ವರ್ಗಾವಣೆ ದಂಧೆಯಲ್ಲಿ ದರೋಡೆಗೆ ಇಳಿದಿದೆ ಎಂದು ಆರೋಪಿಸಿದರು.
ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಕೊಲೆ, ಸುಲಿಗೆ ನಡೆಯುತ್ತಿವೆ. ಐಎಎಸ್ ಅಧಿಕಾರಿಗಳಿಗೆ ಗೌರವವಿಲ್ಲದಂತೆ ನಡೆಸಿಕೊಂಡಿದೆ. ಸ್ವೀಕರ್ ಅವರ ರಾಜಕೀಯ ಪ್ರೇರಿತ ನಡೆ ಒಳ್ಳೆಯದಲ್ಲ. ನಿಮ್ಮ ಈ ದುರಾಡಳಿತವನ್ನು ಕಟ್ಟಿಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ನಮ್ಮ ಪಕ್ಷದ ಶಾಸಕರನ್ನು ಶಾಸನ ಸಭೆಯಿಂದ ಹೊರ ಹಾಕುವ ಮೂಲಕ ವಿರೋಧಪಕ್ಷಗಳ ದನಿಯನ್ನು ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲು ಹೊರಟಿದೆ. ಐದು ಗ್ಯಾರಂಟಿ ಜಾರಿಯಲ್ಲಿ ಸಾಕಷ್ಟುವೈಫಲ್ಯವನ್ನು ಕಂಡಿರುವ ಸರ್ಕಾರ, ಜನರಲ್ಲಿ ಗೊಂದಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಹಿಟ್ಲರ್ ಧೋರಣೆಗೆ ಕೊನೆ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಕೊಬ್ಬರಿ ಬೆಲೆ ಕುಸಿತ, ರೈತರ ಆತ್ಮಹತ್ಯೆ, ಗ್ಯಾರಂಟಿಗಳ ಗೊಂದಲ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿವೆ. ಭಯೋತ್ಪಾದಕರು, ಉಗ್ರಗಾಮಿಗಳ ಪರವಾಗಿ ಸರ್ಕಾರಕ್ಕೆ ಸದಾ ಎಚ್ಚರಿಕೆಯ ಗಂಟೆಯಾಗಿ ಬಿಜೆಪಿ ಕೆಲಸ ಮಾಡಲಿದೆ. ಇದು ಸಾಂಕೇತಿಕ ಹೋರಾಟವಷ್ಟೇ, ಮುಂದಿನ ದಿನಗಳಲ್ಲಿ ಮತ್ತಷ್ಟುಉಗ್ರ ಹೋರಾಟ ನಡೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ಮುಖಂಡರಾದ ಹನುಮಂತರಾಜು, ಪ್ರೇಮ ಹೆಗಡೆ, ಯಶಸ್, ವಿಜಯಕುಮಾರ್, ಗಂಗಾಧರ್, ರುದ್ರೇಶ್, ಶಂಕರಣ್ಣ, ಮಾಧ್ಯಮ ಸಹ ಪ್ರಮುಖ ಜೆ.ಜಗದೀಶ್, ರಾಜಶೇಖರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಇಷ್ಟುಬೇಗ ಆಡಳಿತ ಪಕ್ಷವಾದ ಕಾಂಗ್ರೆಸ್ ಪ್ರತಿಭಟನೆಯನ್ನು ನಿರೀಕ್ಷಿಸಿರಲಿಲ್ಲ. ಸರ್ಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಸಹ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕೈಜೋಡಿಸಲಿದ್ದಾರೆ. ದೇಶದ್ರೋಹಿಗಳಿಗೂ ಕಾಂಗ್ರೆಸ್ ಸರ್ಕಾರಕ್ಕೂ ನಂಟಿದ್ದಂತೆ ಕಂಡು ಬರುತ್ತಿದೆ. ನಮ್ಮ ಸರ್ಕಾರವಿದ್ದಾಗ ಬಾಲ ಮುದರಿಕೊಂಡಿದ್ದ ಭಯೋತ್ಪಾದಕರು, ವಿಚಿದ್ರಕಾರಿ ಶಕ್ತಿಗಳು, ಕಾಂಗ್ರೆಸ್ ಸರ್ಕಾರದಲ್ಲಿ ಹೆಡೆಬಿಚ್ಚಿದ ನಾಗರಹಾವಿನಂತೆ ಬುಸುಗುಟ್ಟುತ್ತಿವೆ. ಗೃಹ ಸಚಿವರ ಹೇಳಿಕೆ ನಿಜಕ್ಕೂ ನಾಚಿಕೆಗೇಡಿನದ್ದಾಗಿದೆ. ಸರ್ಕಾರ ಇದನ್ನು ತಿದ್ದುಕೊಳ್ಳದಿದ್ದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.
ಎಂ.ಬಿ.ನಂದೀಶ್ ಬಿಜೆಪಿ ರಾಜ್ಯ ಉಪಾಧ್ಯಕ್ಷ