
ಶಿರಾ : ದೇಶದಲ್ಲಿ ಬಡವರ ಕಷ್ಟಗಳನ್ನು ಅರಿತು, ಬಡವರ ಏಳಿಗೆಗಾಗಿ, ಅವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ಗೃಹಲಕ್ಷ್ಮಿ ಯೋಜನೆಯಡಿ ಶಿರಾ ತಾಲೂಕಿನಲ್ಲಿ 68512 ಮಹಿಳೆಯರಿಗೆ ಪ್ರತಿ ಮಹಿಳೆಯರಿಗೂ 2000 ರು. ನಂತೆ 13.70 ಕೋಟಿ ರು. ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ. ಇದು ದೇಶದಲ್ಲಿಯೇ ಪ್ರಥಮ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಬುಧವಾರ ನಗರದ ಶ್ರೀ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ವಚನ ಕೊಟ್ಟಿತ್ತು. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದಿದ್ದರು. ಇಂದು ಅವರ ಮಾತುಗಳನ್ನು ಸುಳ್ಳು ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ 10 ಕೇಜಿ ಅಕ್ಕಿ ಕೊಡುವ ಕಾರ್ಯಕ್ರಮದಡಿ 5 ಕೇಜಿ ನೀಡಲಾಗುತ್ತಿದೆ. ಉಳಿದ 5 ಕೇಜಿಗೆ ಹಣವನ್ನು ವರ್ಗಾವಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರು. ನೀಡುವ ಗೃಹಲಕ್ಷ್ಮಿ ಯೋಜನೆ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಯಾವ ರಾಜ್ಯದಲ್ಲೂ ನಡೆದಿಲ್ಲ. ಇದನ್ನು ಮಾಡಿ ತೋರಿಸಿರುವುದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಯಾರೂ ಮರೆಯಬಾರದು. ವಿರೋಧ ಪಕ್ಷದವರಿಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಕಾರ್ಯಕ್ರಮಗಳನ್ನು ನೋಡಿ ಹೊಟ್ಟೆಕಿಚ್ಚು ಉಂಟಾಗಿದೆ. ಆದ್ದರಿಂದ ಟೀಕೆ ಮಾಡುತ್ತಿದ್ದಾರೆ. ಒಟ್ಟಾರೆ ನಾಲ್ಕು ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳಿಗೆ 5 ರಿಂದ 6 ಸಾವಿರ ಉಳಿತಾಯವಾಗುತ್ತಿದೆ. ಇಷ್ಟುದೊಡ್ಡ ಕಾರ್ಯಕ್ರಮ ನೀಡಿದ್ದು, ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಲ್.ಮುರಳೀಧರ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಲ್.ರಂಗನಾಥ್, ತಾ.ಪಂ. ಇಒ ಅನಂತರಾಜು, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವೆಂಕಟೇಶ್, ಪ್ರಭಾರಿ ಪೌರಾಯುಕ್ತೆ ಪಲ್ಲವಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾ ನಾಯ್‌್ಕ, ಬಿಇಒ ಕೃಷ್ಣಪ್ಪ, ನಗರಸಭೆ ಸದಸ್ಯೆ ತೇಜು ಎಲ್ ಭಾನುಪ್ರಕಾಶ್, ಮುಖಂಡರಾದ ನಸ್ರುಲ್ಲಾ ಖಾನ್, ಕೆಪಿಸಿಸಿ ಸದಸ್ಯ ಟಿ.ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.