
ರಾಯಚೂರು(ಅ.04): ಮಸ್ಕಿ ವಿಧಾನಸಭೆ ಉಪಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನವೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯವನ್ನ ಶುರು ಮಾಡಿಕೊಂಡಿದ್ದಾರೆ. ಹೌದು, ಕಾಂಗ್ರೆಸ್‌ನಿಂದ ಬಸನಗೌಡ ತುರವಿಹಾಳ ಸ್ಪರ್ಧಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಪ್ರತಾಪ್ ಗೌಡ ಪಾಟೀಲ್ ಪರ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಬಸನಗೌಡ ತುರವಿಹಾಳ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಕಾಂಗ್ರೆಸ್ ಪಕ್ಷ ಯಾವುದೇ ಅಧಿಕೃತವಾದ ಹೇಳಿಕೆಯನ್ನ ನೀಡಿಲ್ಲ.
ಕೋರ್ಟ್‌ನಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡಗೆ ಜಯ: ಮಸ್ಕಿ ಬೈ ಎಲೆಕ್ಷನ್ ಹಾದಿ ಸುಗಮ
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ತುರವಿಹಾಳ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಅಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಜಯಭೇರಿ ಬಾರಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರಿಕೊಂಡಿದ್ದಾರೆ.
ಹೀಗಾಗಿ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಆದರೆ, ಚುನಾವಣೆಯ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಅಷ್ಟರಲ್ಲೇ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಈಗಾಗಲೇ ಬಸನಗೌಡ ತುರವಿಹಾಳ ಉಪ ಚುನಾವಣೆಯಲ್ಲಿ ಸ್ಪರ್ಧೆಯ ಪೋಸ್ಟರ್ ಕ್ಷೇತ್ರದಲ್ಲಿ ಹರಿದಾಡುತ್ತಿವೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.