' ಬಿಜೆಪಿ, ಕಾಂಗ್ರೆಸ್‌ ಮೈತ್ರಿ : ಅಭ್ಯರ್ಥಿಗಳ ಹರಾಜು'

By Kannadaprabha NewsFirst Published Dec 5, 2020, 11:43 AM IST
Highlights

'ಅನೇಕ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ. ಅದನ್ನು ಮರೆಮಾಚಿ ಅಲ್ಪಸಂಖ್ಯಾತರನ್ನು ಓಲೈಸಲು ಜೆಡಿಎಸ್‌- ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಬಿಂಬಿಸಲಾಗುತ್ತಿದೆ'

  ಮಂಡ್ಯ (05) :  ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಅನೇಕ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ. ಅದನ್ನು ಮರೆಮಾಚಿ ಅಲ್ಪಸಂಖ್ಯಾತರನ್ನು ಓಲೈಸಲು ಜೆಡಿಎಸ್‌- ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಬಿಂಬಿಸಲಾಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

ರಾಜಕಾರಣದಲ್ಲಿ ಎಲ್ಲರ ಹಣೆಬರಹವೂ ಅಷ್ಟೇ. ಯಾರೂ ಸಚ್ಛಾರಿತ್ರ್ಯ ಉಳಿಸಿಕೊಂಡಿಲ್ಲ. ಮುಸ್ಲಿಂ ಮತಗಳ ಓಲೈಕೆಗಾಗಿ ಜೆಡಿಎಸ್‌ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿ ಜೊತೆ ಹೋಗ್ತಾರೆ ಎಂದು ಟೀಕಿಸುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲದಿರುವುದು ಜನರಿಗೆ ಗೊತ್ತಿಲ್ಲವೇನು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲೂ ಬಿಜೆಪಿ ಜೊತೆ ಜೆಡಿಎಸ್‌ ಒಳಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡಿತು. ಪರಿಣಾಮ 70 ರಿಂದ 80 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲ್ಲಿಸೋದನ್ನು ತಪ್ಪಿಸಿತು ಎಂದು ದೂಷಿಸಿದರು.

ಅಭ್ಯರ್ಥಿಗಳ ಹರಾಜು:

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯವರು ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳನ್ನೇ ಹರಾಜು ಹಾಕುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ನೇರವಾಗಿ ಆರೋಪಿಸಿದರು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಪಂಚಾಯ್ತಿ ವ್ಯಾಪ್ತಿಯೊಳಗೆ ಇಬ್ಬರು ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡಿದರೆ ದೇವಸ್ಥಾನ, ಸಮುದಾಯ ಭವನ ಕಟ್ಟಿಸಿಕೊಡುವ ಆಮಿಷವೊಡ್ಡಲಾಗುತ್ತಿದೆ. ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ವಾಮಮಾರ್ಗದಲ್ಲಿ ಬಿಜೆಪಿಯವರು ಈ ತಂತ್ರ ರೂಪಿಸಿದ್ದಾರೆ ಎಂದು ಟೀಕಿಸಿದರು.

ಪ್ರಸ್ತುತ ನಡೆಯಲಿರುವ ಗ್ರಾಪಂ ಚುನಾವಣಾ ಫಲಿತಾಂಶದಿಂದ ಪಕ್ಷಗಳ ಬಲಾಬಲ ಗುರುತಿಸಲಾಗದು. ಮುಂಬರುವ ಜಿಪಂ, ತಾಪಂ ಚುನಾವಣೆಗಳಲಿ ನಿಜವಾದ ಪಕ್ಷಗಳ ಬಲಾಬಲ ನಿರ್ಧಾರವಾಗಲಿದೆ. ಆಗ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಗುಡುಗಿದರು.

click me!