
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಡಿಕೇರಿ: ಮೈಸೂರು ದಸರಾದಷ್ಟೇ ಮಡಿಕೇರಿ ದಸರಾ ಜನೋತ್ಸವವು ಪ್ರಖ್ಯಾತಿ ಹೊಂದಿದೆ. ಹಗಲು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಕಣ್ತುಂಬಿಕೊಳ್ಳುವ ಜನರು, ಅದೇ ದಿನ ರಾತ್ರಿ ಬೆಳಕಿನ ಚಿತ್ತಾರದೋಕುಳಿಯಲಿ ಮಿಂದೇಳುವ ಮಡಿಕೇರಿ ದಸರಾ ಜನೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಈ ಬಾರಿ ಮಡಿಕೇರಿ ದಸರಾ ಜನೋತ್ಸವಕ್ಕೆ ಇಂದಿಗೂ ದಿನವೇ ನಿಗಧಿಯಾಗಿಲ್ಲ. ಇದು ಈಗ ದಸರಾ ಸಿದ್ಧತಾ ಕೆಲಸ ಕಾರ್ಯಗಳಿಗೆ ಚಾಲನೆ ನೀಡುವುದಕ್ಕೂ ಸಾಧ್ಯವಾಗದ ಸ್ಥಿತಿ ಬಂದೊದಗಿದೆ.
ಹೌದು ಮಡಿಕೇರಿ ದಸರಾ ಜನೋತ್ಸವಕ್ಕೆ ಮಹಾಲಯ ಅಮಾವಾಸ್ಯೆಯ ಮಾರನೇ ದಿನದಿಂದಲೇ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಚಾಲನೆ ದೊರೆಯುತ್ತದೆ. ಅಂದರೆ ಅಂದಿನಿಂದ ನವರಾತ್ರಿಗೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಆ ಬಳಿಕ 9 ದಿನಗಳ ಕಾಲ ಮಡಿಕೇರಿ ನಗರ ಪ್ರದಕ್ಷಿಣೆ ಹಾಕುವ ನಾಲ್ಕು ಶಕ್ತಿ ದೇವತೆಗಳು 10 ನೇ ದಿನದಂದು, ಮುಂಜಾನೆ ಐದು ಗಂಟೆಯ ಒಳಗೆ ಬನ್ನಿ ಕಡಿಯುವ ಮೂಲಕ ಸಮಾಪ್ತಿಯಾಗುತ್ತದೆ. ಆದರೆ ಈ ಬಾರಿ ಹತ್ತು ದಿನಗಳ ಕಾಲ ದಸರಾ ನಡೆಯುತ್ತಿದೆ. ಅಂದರೆ ಅಕ್ಟೋಬರ್ ಹನ್ನೊಂದನೇ ತಾರೀಖಿನಿಂದ ನವರಾತ್ರಿ ಶುರುವಾದರೆ, 21ನೇ ತಾರೀಖಿನಂದು ವಿಜಯದಶಮಿ ನಡೆಯಲಿದೆ. ಇದೇ ಮಡಿಕೇರಿ ದಸರಾ ನಿಗಧಿಯಾಗುವುದಕ್ಕೆ ಸಮಸ್ಯೆಯಾಗಿ ತಲೆದೋರಿದೆ.
ಮಡಿಕೇರಿ ದಸರಾ ಜನೋತ್ಸವ ರಾತ್ರಿ ಶುರುವಾಗುವುದರಿಂದ 21 ರ ರಾತ್ರಿ 12 ಗಂಟೆಗೆ ಕರಗ ಉತ್ಸವ ಹೊರಡಲಿದೆ. ನಗರದಲ್ಲಿ ಮೆರವಣಿಗೆ ತೆರಳಿ ಬನ್ನಿ ಕಡಿಯುವಷ್ಟರಲ್ಲಿ 22 ನೇ ತಾರೀಖು ಮುಂಜಾನೆ 5 ಗಂಟೆಯಾಗಿರುತ್ತದೆ. ಅಂದರೆ ಆ ವೇಳೆಗೆ ವಿಜಯ ದಶಮಿ ಮುಗಿದು, ಏಕಾದಶಿ ಆರಂಭವಾಗಿರುತ್ತದೆ. ಇದೇ ವಿಷಯ ಈಗ ಕರಗ ಸಮಿತಿಗಳು ಹಾಗೂ ಕರಗ ಹೊರುವವರ ನಡುವೆ ಗೊಂದಲಕ್ಕೆ ಕಾರಣವಾಗಿದ್ದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹೀಗಾಗಿಯೇ ಮಡಿಕೇರಿ ದಸರಾ ಜನೋತ್ಸವದ ದಿನಾಂಕವೇ ನಿಗದಿಯಾಗದೆ ಜನೋತ್ಸವದ ಕೆಲಸ ಕಾರ್ಯಗಳಿಗೆ ಚಾಲನೆಯನ್ನೇ ನೀಡಲು ಆಗಿಲ್ಲ. ಹೀಗಾಗಿ ಮಡಿಕೇರಿ ದಸರಾ ಸಮಿತಿ, ದಶಮಂಟಪ ಸಮಿತಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗ ಹೊರುವ ಪೂಜಾರಿ ಅನೀಶ್ ಅವರು ವಿಜಯ ದಶಮಿಯ ಸುಮುಹೂರ್ತದಲ್ಲೇ ಬನ್ನಿ ಕಡಿಯಬೇಕು. ಆದರೆ ಮೈಸೂರು ದಸರಾ ಮುಗಿದ ಬಳಿಕ ಅಂದರೆ 21 ರಂದು ರಾತ್ರಿ ಕರಗ ಉತ್ಸವ ಹೊರಟು 22 ರ ಮುಂಜಾನೆ ಬನ್ನಿ ಕಡಿದರೆ ವಿಜಯ ದಶಮಿಯೇ ಮುಗಿದು ಹೋಗಿರುತ್ತದೆ. ಆಗ ಯಾವುದೇ ಸುಮುಹೂರ್ತವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬನ್ನಿ ಕಡಿದರೆ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ನಾಡಿನ ಜನರ ಒಳಿತಿಗಾಗಿ ಬನ್ನಿ ಕಡಿಯಬೇಕೇ ವಿನಃ, ಯಾರದೋ ಪ್ರತಿಷ್ಠೆಗಾಗಿ ಅಲ್ಲ. 21ರಂದು ಕರಗ ಉತ್ಸವ ಮಾಡುವುದಕ್ಕೆ ಬೇಸರವಿದೆ. ಹೀಗಾಗಿ ದಸರಾ ಸಮಿತಿ ಹಾಗೂ ದಶ ಮಂಟಪ ಸಮಿತಿಗೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಕರಗ ಹೊರುವವರು ಮತ್ತು ಕರಗ ಸಮಿತಿಯವರು ಹೊಂದಾಣಿಕೆಯಿಂದ ಒಂದು ದಿನಾಂಕವನ್ನು ಕೂಡಲೇ ನಗದಿ ಮಾಡಲಿ. ಯಾವುದೇ ದಿನ ನಿಗಧಿ ಮಾಡಿದರೂ ನಾವು ಅದೇ ದಿನ ದಸರಾ ಜನೋತ್ಸವಕ್ಕೆ ಸಿದ್ಧರಿದ್ದೇವೆ. ಆದರೆ ಕರಗ ಸಮಿತಿ ಹಾಗೂ ಕರಗ ಹೊರುವವರು ಕೂಡಲೇ ಒಂದು ದಿನ ನಿಗಧಿ ಮಾಡಲಿ. ದಸರಾ ಅನುದಾನಕ್ಕಾಗಿ ಸಿಎಂ ಅವರನ್ನು ಭೇಟಿಯಾಗಬೇಕಾಗಿದೆ. ಸಂಬಂಧಿಸಿದ ಇಲಾಖೆ ಸಚಿವರನ್ನು ಭೇಟಿಯಾಗಬೇಕಾಗಿದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಕರಗ ಸಮಿತಿ ಹಾಗೂ ಕರಗ ಹೊರುವವರ ನಡುವಿನ ಗೊಂದಲದಿಂದಾಗಿ ಮಡಿಕೇರಿ ದಸರಾ ಜನೋತ್ಸವದ ಮೇಲೆ ಕರಿನೆರಳು ಬಿದ್ದಿರುವುದಂತು ಸತ್ಯ.