
ಮಂಡ್ಯ: ಬಿಜೆಪಿ ಶಾಸಕ ಸುರೇಶಗೌಡ ಅವರ ಪುತ್ರಿ ಅವರ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಮಹತ್ವದ ಬೆಳಕಿಗೆ ನಡೆದಿದೆ. ನಿನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶಗೌಡ ಪುತ್ರಿ ಐಶ್ವರ್ಯ ಅವರು, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಶಾಸಕರ ಪುತ್ರಿಯ ನಡೆಗೆ ಬೇಸರ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿತ್ತು. ಮೊದಲು ನೀವು ಕ್ಷಮೆ ಕೇಳಿ, ಆ ಬಳಿಕವೇ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಕೋರ್ಟ್ ಹೇಳಿತ್ತು.
ಸದ್ಯ ಹೈಕೋರ್ಟ್ ಸೂಚನೆಯ ಬೆನ್ನಲ್ಲೇ, ವಿಡಿಯೋ ಬಿಡುಗಡೆ ಮಾಡಿರುವ ಐಶ್ವರ್ಯ, ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ ಭೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಆಗಸ್ಟ್ 12ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದಲ್ಲಿ ಘಟನೆ ನಡೆದಿತ್ತು. ದೇವರ ದರ್ಶನಕ್ಕೆ ಬಂದ ಸಂದರ್ಭದಲ್ಲಿ ಗರ್ಭಗುಡಿಗೆ ಬಿಡುವ ವಿಚಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಅವರೊಂದಿಗೆ ಐಶ್ವರ್ಯ ವಾಗ್ವಾದ ನಡೆಸಿದ್ದರು. ಅಲ್ಲದೇ, ತಾಳ್ಮೆ ಕಳೆದುಕೊಂಡು ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದರು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ನಿರೀಕ್ಷಣಾ ಜಾಮೀನು ಸಲ್ಲಿಕೆ ಮಾಡಿರುವ ಐಶ್ವರ್ಯಾ ಪರ ವಕೀಲರು, ಹೈಕೋರ್ಟ್ ಸೂಚನೆಯ ಬಳಿಕ ಎರಡು ದಿನ ಸಮಯ ನೀಡುವಂತೆ ಮನವಿ ಮಾಡಿದ್ದರು. ಇದರಂತೆ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು.
ಹೈಕೋರ್ಟ್ ಸೂಚನೆ ಬೆನ್ನಲ್ಲೇ ವಿಡಿಯೋ ಮಾಡಿರುವ ಶಾಸಕರ ಪುತ್ರಿ ಐಶ್ವರ್ಯ, ಪಿಎಸ್ಐ ಸವಿತಾ ಪಾಟೀಲ್ ಗೆ ಕ್ಷಮೆ ಕೋರಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಐಶ್ವರ್ಯ, ಆಗಸ್ಟ್ 12 ರಂದು ಆರತಿ ಉಕ್ಕಡದಲ್ಲಿ ದೇವರ ದರ್ಶನಕ್ಕೆ ಮಕ್ಕಳೊಂದಿಗೆ ಬಂದಿದ್ದೆ. ಈ ವೇಳೆ ಉದ್ವೇಗದಲ್ಲಿ ನಡೆಯಬಾರದ ಅಹಿತಕರ ಘಟನೆ ನಡೆದು ಹೋಗಿದೆ. ಘಟನೆಗೆ ವಿಷಾಧ ವ್ಯಕ್ತಪಡಿಸುತ್ತೇನೆ, ಪಿಎಸ್ಐ ಸವಿತಾ ಪಾಟೀಲ್ ಗೆ ನೋವಾಗಿದ್ದರೆ ಭೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.