ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಬಿಎಂಆರ್‌ಸಿಎಲ್‌ನಲ್ಲಿ ಗೊಂದಲ- ಆದಾಯ ಸಾಕಾಗ್ತಿಲ್ಲ

Kannadaprabha News   | Kannada Prabha
Published : Feb 11, 2026, 07:34 AM IST
bengaluru metro

ಸಾರಾಂಶ

ಮೆಟ್ರೋ ಪ್ರಯಾಣ ದರ ಶೇ.5ರಷ್ಟು ಹೆಚ್ಚಳಕ್ಕೆ ಸದ್ಯಕ್ಕೆ ತಡೆಬಿದ್ದಿದ್ದು ಜನತೆ ನಿರಾಳರಾಗಿದ್ದಾರೆ. ಆದರೆ, ದರ ಏರಿಕೆ ವಿಚಾರದಲ್ಲಿ ಆಡಳಿತಾತ್ಮಕ ದ್ವಂದ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿಲುಕಿದೆ.

ಬೆಂಗಳೂರು : ಮೆಟ್ರೋ ಪ್ರಯಾಣ ದರ ಶೇ.5ರಷ್ಟು ಹೆಚ್ಚಳಕ್ಕೆ ಸದ್ಯಕ್ಕೆ ತಡೆಬಿದ್ದಿದ್ದು ಜನತೆ ನಿರಾಳರಾಗಿದ್ದಾರೆ. ಆದರೆ, ದರ ಏರಿಕೆ ವಿಚಾರದಲ್ಲಿ ಆಡಳಿತಾತ್ಮಕ ದ್ವಂದ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿಲುಕಿದೆ.

ದರ ನಿಗದಿ ಸಮಿತಿ ನೀಡಿರುವ ಶಿಫಾರಸು ಅನ್ವಯ ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ವಿರುದ್ಧ ಆಕ್ರೋಶ ಬುಗಿಲೆದ್ದ ಹಿನ್ನೆಲೆಯಲ್ಲಿ ಕೇಂದ್ರ - ರಾಜ್ಯ ಸರ್ಕಾರಗಳ ಸೂಚನೆಯಂತೆ ಬಿಎಂಆರ್‌ಸಿಎಲ್‌ ದರ ಏರಿಕೆಯನ್ನು ನಿಲ್ಲಿಸಿದೆ. ಆದರೆ, ಈ ಕುರಿತ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಬಿಎಂಆರ್‌ಸಿಎಲ್‌ ಎದುರಿದೆ.

ಸಮಿತಿಯ ಶಿಫಾರಸ್ಸಿನಂತೆ ದರ ಏರಿಕೆ ಮಾಡಬೇಕೋ ಅಥವಾ ಹೊಸ ದರ ನಿಗದಿ ಸಮಿತಿ ರಚಿಸಿ ಅದರ ಶಿಫಾರಸ್ಸಿನ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಬೇಕೋ ಅಥವಾ ಹಾಲಿ ಸಮಿತಿಯ ವಾರ್ಷಿಕ ದರ ಏರಿಕೆಯ ಶಿಫಾರಸ್ಸನ್ನು ಮಾತ್ರ ಪುನರ್ ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕೋ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಈ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬಿಎಂಆರ್‌ಸಿಎಲ್‌ ಮಂಡಳಿ ಸಭೆ ಮಹತ್ವ ಪಡೆದಿದೆ. ಸೋಮವಾರ ನಡೆಯಬೇಕಿದ್ದ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಶೀಘ್ರದಲ್ಲೇ ಮತ್ತೊಮ್ಮೆ ಸಭೆ ನಡೆಸಲು ತಯಾರಿ ನಡೆಯುತ್ತಿದೆ.

ಹೆಚ್ಚುತ್ತಿರುವ ಖರ್ಚು-ವೆಚ್ಚ:

ಬೆಂಗಳೂರು ಮೆಟ್ರೋ ರೈಲು ನಿಗಮವು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚದ ಜೊತೆಗೆ, ಹಳೆಯ ಸ್ವತ್ತು ಬದಲಾವಣೆ, ಎಲಿವೆಟೆಡ್‌, ಪಿಲ್ಲರ್‌, ವಿದ್ಯುತ್‌ ಸಿಗ್ನಲಿಂಗ್ ದುರಸ್ತಿ ಹೊಣೆಗಾರಿಕೆ, ತಾಂತ್ರಿಕ ಉಪಕರಣಗಳ ಅವಧಿಯ ಮುಕ್ತಾಯ ಮತ್ತು ದುಬಾರಿ ಬಿಡಿಭಾಗಗಳ ಖರೀದಿ ಕಾರಣದಿಂದಾಗಿ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಎದುರಿಸುತ್ತಿದೆ.

ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಗಾಗಿ ಸುಮಾರು 15,000 ಕೇಂದ್ರ ಕೈಗಾರಿಗಾ ಭದ್ರತಾ ಪಡೆ ಸಿಐಎಸ್ಎಫ್ ಸಿಬ್ಬಂದಿ ನಿಯೋಜಿಸಲು ವಾರ್ಷಿಕವಾಗಿ ₹ 1,200 ಕೋಟಿ ವೆಚ್ಚವನ್ನು ಕೇಂದ್ರವು ಸಂಪೂರ್ಣವಾಗಿ ಭರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬೆಂಗಳೂರು ಮೆಟ್ರೋದ ಭದ್ರತಾ ವೆಚ್ಚವನ್ನು ಬಿಎಂಆರ್‌ಸಿಎಲ್ ಭರಿಸುತ್ತಿದೆ.

ಇನ್ನು, ತುರ್ತು ಅಗತ್ಯ ಎದುರಿಸಲು ಬಿಎಂಆರ್‌ಸಿಎಲ್‌ ತನ್ನದೇ ಆದ ಆಂತರಿಕ ಚಾಲ್ತಿ ಖಾತೆ ಉಳಿತಾಯವನ್ನು (Current Account Surplus - CAS) ಹೊಂದಿಲ್ಲ.

ಇದಕ್ಕಾಗಿ ಸರ್ಕಾರದ ಮೇಲೆ ಅವಲಂಬಿತವಾಗಿದೆ.

ಖರ್ಚು/ವೆಚ್ಚ, ನಷ್ಟ:

2023–24ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ₹307.67 ಕೋಟಿ ಲಾಭ ದಾಖಲಿಸಿತ್ತು. ಆದರೆ, 2024–25ರ ಆರ್ಥಿಕ ವರ್ಷದಲ್ಲಿ ₹652.11 ಕೋಟಿಗಳ ಹೆಚ್ಚಿನ ಹಣಕಾಸು ವೆಚ್ಚದ ಕಾರಣದಿಂದಾಗಿ ಪುನಃ ₹167.41 ಕೋಟಿ ನಷ್ಟಕ್ಕೆ ತಿರುಗಿದೆ.

ವಾರ್ಷಿಕ ದರ ಪರಿಷ್ಕರಣೆ ಮಾಡದಿದ್ದರೆ, 2029–30ರ ವೇಳೆಗೆ ಬಿಎಂಆರ್‌ಸಿಎಲ್‌ ನಿವ್ವಳ ನಷ್ಟವು ₹577 ಕೋಟಿ ತಲುಪಬಹುದು ಎಂದು ದರ ಪರಿಷ್ಕರಣ ಸಮಿತಿ ಹೇಳಿತ್ತು. 2024-25ರಲ್ಲಿ ಬಿಎಂಆರ್‌ಸಿಎಲ್‌ನ ಸಾಲವು ₹17,071.1 ಕೋಟಿ ಆಗಿದ್ದು, ಹೊಣೆಗಾರಿಕೆ ₹8,855.05 ಕೋಟಿ ಇವೆ. 2025 - 26 ಮತ್ತು 2029-30ರ ನಡುವೆ, ಬಿಎಂಆರ್‌ಸಿಎಲ್ ₹9,651.6 ಕೋಟಿ ಸಾಲ ಮರುಪಾವತಿ ಮತ್ತು ₹5,721.6 ಕೋಟಿ ಸವಕಳಿ ವೆಚ್ಚಗಳನ್ನು ಎದುರಿಸಲಿದೆ ಎಂದು ಹೇಳಿದೆ.

ಇತರೆ ಆದಾಯ ಸಾಕಾಗಲ್ಲ..

ಸಂಸ್ಥೆಯು ಮೆಟ್ರೋ ಟಿಕೆಟ್‌ ದರ ಹೊರತಾಗಿ ಬಾಡಿಗೆ, ಪಾರ್ಕಿಂಗ್‌, ಜಾಹೀರಾತು, ಮೆಟ್ರೋ ನಿಲ್ದಾಣಗಳಿಗೆ ನಾಮಕರಣ ಒಪ್ಪಂದ ಸೇರಿ ಇತರೆ ಆದಾಯ ಮೂಲಗಳನ್ನು ಹೊಂದಿದೆ. ಆದರೆ, ಇಷ್ಟಾದರೂ ಪ್ರಯಾಣಿಕರ ಟಿಕೆಟ್‌ ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಾರೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು. ಮುಂದಿನ ಬಿಎಂಆರ್‌ಸಿಎಲ್‌ ಮೆಟ್ರೋ ಯೋಜನೆಗಳು, ಭೂಸ್ವಾದೀನ, ಸಿವಿಲ್‌ ಕೆಲಸ, ಅವುಗಳಿಗಾಗಿ ಸಾಲ, ಭಾದ್ಯತೆ ಇವೆಲ್ಲವೂ ಸೇರಿದೆ. ಹೀಗಾಗಿ ಮುಂದೇನು ಮಾಡಬೇಕು ಎಂಬ ಸವಾಲು, ದ್ವಂದ್ವ ಬಿಎಂಆರ್‌ಸಿಎಲ್‌ ಸಂಸ್ಥೆಯ ಎದುರಿದೆ. ಸರ್ಕಾರ ಮಧ್ಯಪ್ರವೇಶಿಸಿ ದರ ಏರಿಕೆ ನಿಲ್ಲಿಸಿರುವುದರಿಂದ ಅವರೆ ಇದಕ್ಕೆ ಪರಿಹಾರವನ್ನೂ ಸೂಚಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

PREV
Read more Articles on
click me!

Recommended Stories

ಗ್ರಾಪಂ ಸದಸ್ಯರ ಆರಂಭದ 15 ತಿಂಗಳು ಅವಿಶ್ವಾಸಕ್ಕಿಲ್ಲ ಅವಕಾಶ: ಹೈಕೋರ್ಟ್ ಹೇಳಿದ್ದೇನು?
ಸತ್ತವರ ಖಾತೆಗೆ ಹೋಗಿದೆ ಬರೋಬ್ಬರಿ 2.20 ಕೋಟಿ ಗೃಹಲಕ್ಷ್ಮೀ ಹಣ: ವಾಪಾಸ್‌ಗೆ ಸೂಚನೆ