NRC, ಮೋದಿ ವಿರುದ್ಧ ಕವನ ವಾಚನ: ಪತ್ರಕರ್ತರಿಗೆ ಷರತ್ತು ಬದ್ಧ ಜಾಮೀನು

By Kannadaprabha NewsFirst Published Feb 20, 2020, 7:35 AM IST
Highlights

ಎನ್‌ಆರ್‌ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕವನ ವಾಚನ| ಆನೆಗೊಂದಿ ಉತ್ಸವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದ ಪತ್ರಕರ್ತರು| ಇಬ್ಬರು ಪತ್ರಕರ್ತರಿಗೆ ನ್ಯಾಯಾಲಯ 50 ಸಾವಿರ ವೈಯಕ್ತಿಕ ಬಾಂಡ್‌ ನೀಡಬೇಕೆಂಬ ಷರತ್ತಿನ ಮೇಲೆ ಜಾಮೀನು|

ಗಂಗಾವತಿ(ಫೆ.20):ಆನೆಗೊಂದಿ ಉತ್ಸವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಎನ್‌ಆರ್‌ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕವನ ವಾಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರ ವಶಕ್ಕೆ ನೀಡಲಾಗಿದ್ದ ಇಬ್ಬರು ಪತ್ರಕರ್ತರಿಗೆ ಬುಧವಾರ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ.

ಜನವರಿ 9 ಮತ್ತು 10ರಂದು ನಡೆದ ಆನೆಗೊಂದಿ ಉತ್ಸವದಲ್ಲಿ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದ ಕೊಪ್ಪಳದ ಪತ್ರಕರ್ತ ಸಿರಾಜ್‌ ಬಿಸರಹಳ್ಳಿ ಮತ್ತು ಅದನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರ ಮಾಡಿದ್ದ ರಾಜಭಕ್ಷಿ ಎಂಬವರ ವಿರುದ್ಧ ಶಿವಕುಮಾರ್‌ ಅರಿಕೇರಿ ಎಂಬವರು ಕಾಯ್ದೆ 504, 505, 505(2)ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದೂರು ಸಲ್ಲಿಸಿದ್ದರು. ಶಾಂತಿ ಕದಡುವ ಉದ್ದೇಶದಿಂದ ವೈಯಕ್ತಿಕ ನಿಂದನೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಇಬ್ಬರು ಪತ್ರಕರ್ತರೂ ಸ್ವಯಂಪ್ರೇರಣೆಯಿಂದ ಜೆಎಂಎಫ್‌ಸಿ ನ್ಯಾಯಲಯಕ್ಕೆ ಹಾಜರಾಗಿ ಜಾಮೀನು ಪಡೆಯಲು ಆಗಮಿಸಿದ್ದರು. ಆದರೆ ಗ್ರಾಮೀಣ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರಿಂದ ಜಾಮೀನು ನಿರಾಕರಿಸಿ ಬುಧವಾರದವರೆಗೂ ಪೊಲೀಸರ ವಶಕ್ಕೆ ನೀಡಲಾಗಿತ್ತು.

ಈ ಇಬ್ಬರು ಪತ್ರಕರ್ತರಿಗೆ ಜಾಮೀನು ನೀಡುವಂತೆ 40ಕ್ಕೂ ಹೆಚ್ಚು ವಕೀಲರು ನ್ಯಾಯಲಯಕ್ಕೆ ಕೋರಿದ್ದರು. ಪುನಃ ಬುಧವಾರ ನಡೆದ ವಿಚಾರಣೆಯಲ್ಲಿ ಇಬ್ಬರು ಪತ್ರಕರ್ತರಿಗೆ ನ್ಯಾಯಾಲಯ 50 ಸಾವಿರ ವೈಯಕ್ತಿಕ ಬಾಂಡ್‌ ನೀಡಬೇಕೆಂಬ ಷರತ್ತಿನ ಮೇಲೆ ಜಾಮೀನು ನೀಡಿದೆ.

ಪತ್ರಕರ್ತರ ಪರವಾಗಿ ಟಿ.ಎನ್‌.ವಿಠಲ್ ಶ್ರೀನಿವಾಸ ಕುಮಾರ, ಮಲ್ಲಿಕಾರ್ಜುನ ರಡ್ಡಿ, ಆರ್‌.ಕೆ. ದೇಸಾಯಿ, ದಾವಣಗೆರೆಯ ಅನೀಫ್‌ ಪಾಷಾ, ಮಂಡ್ಯದ ಅನ್ಸದ್‌ ಪಾಳ್ಯ, ಕೊಪ್ಪಳದ ಅಸೀಫ್‌ ಅಲಿ, ಬಳ್ಳಾರಿಯ ಕೋಟೇಶ್ವರ ರಾವ್‌, ಹಷಮೂದ್ದೀನ್‌, ಸೈಯದ್‌ ಬಾನು, ವಿಜಯಲಕ್ಷ್ಮೀ, ಹುಸೇನಪ್ಪ ಹಂಚಿನಾಳ ವಾದ ಮಂಡಿಸಿದ್ದರು.

ಸದನದಲ್ಲಿ ಎಚ್‌ಡಿಕೆ ಪ್ರಸ್ತಾಪ:

ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆದಿದ್ದ ವಿಚಾರ ಬುಧವಾರ ವಿಧಾನಸಭೆಯ ಕಲಾಪದಲ್ಲೂ ಪ್ರತಿಧ್ವನಿಸಿತು. ಈ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿ, ಪತ್ರಕರ್ತ ಸಿರಾಜ್‌ ಬಿಸರಹಳ್ಳಿ ಅವರು ಆನೆಗೊಂದಿ ಉತ್ಸವದಲ್ಲಿ ವಾಚಿಸಿದ್ದ ಕವನವನ್ನು ಸಂಪೂರ್ಣ ಓದಿದರು. ಈ ಕವನವನ್ನು ವಾಚಿಸಿದ್ದಕ್ಕೆ ಬಂಧಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
 

click me!