ಹೊನ್ನಾಳಿಯ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ನಗರ ಕೋರಿ ಕಾಂಪ್ಲೆಕ್ಸ್ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ಮಹಿಳೆ ಭೇಟಿ ನೀಡಿದ ಮೆಡಿಕಲ್ ಸ್ಟೋರ್‌ಗೂ ಬೀಗ ಜಡಿಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೊನ್ನಾಳಿ(ಜೂ.19): ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಪಟ್ಟಣದ ಕೋರಿ ಕಾಂಪ್ಲೆಕ್ಸ್ ಹಾಗೂ ಗಾಯತ್ರಿ ಮೆಡಿಕಲ್ ಸ್ಟೋರ್ ಕಾಂಪ್ಲೆಕ್ಸ್‌ನ್ನು ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಆರ್.ಬಂತಿ ಹಾಗೂ ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ನೇತೃತ್ವದಲ್ಲಿ ಗುರುವಾರ ಸೀಲ್‌ಡೌನ್ ಮಾಡಲಾಯಿತು.
ಇಲ್ಲಿನ ಬಸವನಹಳ್ಳಿಯ ಮಹಿಳೆಯೊಬ್ಬರು ತೀವ್ರ ಜ್ವರದ ಕಾರಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಎರಡನೇ ದಿನವೂ ಜ್ವರ ವಾಸಿಯಾಗದ ಕಾರಣ ಮತ್ತೆ ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಮಹಿಳೆಗೆ ಜ್ವರ ಬಿಡದ ಪ್ರಯುಕ್ತ ಪಟ್ಟಣದ ಖಾಸಗಿ ಕ್ಲಿನಿಕ್‌ನಲ್ಲಿ ತೋರಿಸಿದಾಗ ಆಕೆಗೆ ಟೈಫಾಡ್ ಜ್ವರ ಇರಬಹುದೆಂದು ಶಂಕಿಸಿ ಖಾಸಗಿ ಪ್ರಯೋಗಾಲಯಕ್ಕೆ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಖಾಸಗಿ ವೈದ್ಯರು ತಿಳಿಸಿದ್ದಾರೆ.
ಬುಧವಾರ ಆಕೆಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟ ಕಾರಣ ತಾಲೂಕು ಆಡಳಿತಕ್ಕೆ ಮಾಹಿತಿ ಬಂದ ಕೂಡಲೇ ಗುರುವಾರ ಪಟ್ಟಣದ ಕೋರಿ ಕಾಂಪ್ಲೆಕ್ಸ್ ಹಾಗೂ ಗಾಯತ್ರಿ ಮೆಡಿಕಲ್ ಸ್ಟೋರ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಯೋಗಾಲಯಕ್ಕೆ ಬಂದ ಹಿನ್ನಲೆಯಲ್ಲಿ ಗಾಯತ್ರಿ ಮೆಡಿಕಲ್ ಕಾಂಪ್ಲೆಕ್ಸ್‌ನ್ನು ಕೂಡ ಅಧಿಕಾರಿಗಳು ಸೀಲ್‌ಡೌನ್ ಮಾಡಿದರು.
ಕೊರೋನಾ ಪಾಸಿಟಿವ್ ದೃಢಪಟ್ಟಮಹಿಳೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಬಸವನಹಳ್ಳಿ ಹಾಗೂ ಮಾದನಬಾವಿ ಗ್ರಾಮ ಹಾಗೂ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಸೇರಿ 29 ಜನರನ್ನು ಮೊರಾರ್ಜಿ ವಸತಿ ಶಾಲೆ ಹಾಗೂ ಲಾಡ್ಜ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಹಿಳೆಯ ಗ್ರಾಮ ನ್ಯಾಮತಿ ತಾಲೂಕಿನ ಬಸವನಹಳ್ಳಿ ಹಾಗೂ ತವರು ಮನೆ ಮಾದನಬಾವಿ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ
ಡಾ.ಕೆಂಚಪ್ಪ ಆರ್ ಬಂತಿ ತಿಳಿಸಿದ್ದಾರೆ.