ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳನ್ನು ಹೊಂದಿರುವ ಎಲ್ಲ ಇಲಾಖೆಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣ ಪ್ರಗತಿ ಸಾಧಿಸುವಂತೆ ತಾಕೀತು ಮಾಡಲಾಗಿದೆ ಎಂದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರು (ಡಿ.4) : ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳನ್ನು ಹೊಂದಿರುವ ಎಲ್ಲ ಇಲಾಖೆಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣ ಪ್ರಗತಿ ಸಾಧಿಸುವಂತೆ ತಾಕೀತು ಮಾಡಲಾಗಿದೆ ಎಂದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರಿನ ಜಿ.ಪಂ.ನಲ್ಲಿ ಸಚಿವರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳು ಸರಿಯಾಗಿ ಕಾರ್ಯಗತಗೊಳ್ಳುತ್ತಿಲ್ಲ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಇಲಾಖೆಯ ನೋಡೆಲ್ ಏಜೆನ್ಸಿಯ ಸಭೆಯನ್ನು ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ನಡೆಸಲಾಗಿದೆ. ಈ ವೇಳೆ ಕಳೆದ ಬಾರಿಗಿಂತ ಈ ಬಾರಿ ಶೇ.42 ಪ್ರಗತಿ ಸಾಧಿಸಿರುವುದು ಗಮನಕ್ಕೆ ಬಂದಿದೆ. ಎಲ್ಲ ಯೋಜನೆಗಳನ್ನು ಪೂರ್ತಿ ಅನುಷ್ಠಾನಕ್ಕೆ ತರಲು ಮಾಚ್‌ರ್ ವರೆಗೆ ಕಾಲಾವಕಾಶ ಇದ್ದರೂ ಡಿಸೆಂಬರ್ ಅಂತ್ಯದೊಳಗೆ ಪ್ರಗತಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಓಬಿಸಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಪ್ರೇಮದ ಪಾಠ: ಕೋಟಾ ಶ್ರೀನಿವಾಸ ಪೂಜಾರಿ
ಬಳಕೆಯಾಗದಿದ್ದರೆ ಮರು ಹೊಂದಾಣಿಕೆ:
ಸಮಾಜ ಕಲ್ಯಾಣ ಇಲಾಖೆಯಡಿ ಎಲ್ಲ 43 ಇಲಾಖೆಗಳಿಗೆ ಹಿಂದುಳಿದವರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದ್ದು, ಸಾಧಾರಣ ಪ್ರಗತಿ ದಾಖಲಿಸಿವೆ. ಕೃಷಿ ಇಲಾಖೆ ಶೇ.16, ಅರಣ್ಯ ಇಲಾಖೆ ಶೇ.12, ಯುವ ಸಬಲೀಕರಣ ಶೇ.23, ಆಹಾರ ಸರಬರಾಜು ಇಲಾಖೆ ಶೇ.28, ವಾರ್ತಾ ಇಲಾಖೆ ಶೇ.28, ಉನ್ನತ ಶಿಕ್ಷಣ ಶೇ.6, ಪ್ರಾಥಮಿಕ ಶಿಕ್ಷಣ ಶೇ.18, ಆರೋಗ್ಯ ಇಲಾಖೆ ಶೇ.27, ಕೌಶಲಾಭಿವೃದ್ಧಿ ಇಲಾಖೆ ಶೇ.5, ಯೋಜನಾ ಇಲಾಖೆ ಶೇ.29, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಇಲಾಖೆ ಶೇ. 24 ಪ್ರಗತಿ ಸಾಧಿಸಿದೆ. ಅನುದಾನ ಸರಿಯಾಗಿ ಬಳಕೆ ಮಾಡದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಆ ಮೊತ್ತವನ್ನು ಇಲಾಖೆಯ ಬೇರೆ ಯೋಜನೆಗಳಿಗೆ ಮರು ಹೊಂದಾಣಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಇಲಾಖೆಗಳಿಗೆ ನೋಟಿಸ್:
ಕಡಿಮೆ ಅನುದಾನ ವೆಚ್ಚ ಮಾಡಿರುವ ಇಲಾಖೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಎಸ್‌ಸಿ ಎಸ್‌ಟಿ, ಟಿಎಸ್‌ಪಿ ಅನುದಾನವನ್ನು ನಿಗದಿತ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ವೆಚ್ಚ ಮಾಡಿರುವ ಬಗ್ಗೆ ದೂರುಗಳು ಬಂದಿದೆ. ಐದು ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗಿದೆ. ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಅನರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗೆ 2.40 ಲಕ್ಷ ರು. ವೆಚ್ಚ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ ಎಂದರು.
ಹಾಸ್ಟೆಲ್‌ಗಳಿಗೆ ದಿಂಬು, ಹಾಸಿಗೆ ಪೂರೈಕೆಗೆ ಕ್ರಮ
ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಿಗೆ ದಿಂಬು ಮತ್ತು ಹಾಸಿಗೆ ಪೂರೈಕೆಗೆ ಮುಖ್ಯಮಂತ್ರಿಗಳು 100 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಹಾಸ್ಟೆಲ್‌ಗಳಿಗೆ ಮೂಲಸೌಕರ್ಯ ಯೋಜನೆಯಡಿ ಈ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಲಬುರಗಿ, ಬೆಳಗಾವಿ, ದ.ಕ., ಬೆಂಗಳೂರು ಮತ್ತು ಮೈಸೂರುಗಳಲ್ಲಿ ದೀನದಯಾಳ್ ಹೆಸರಿನ ವಸತಿ ನಿಲಯ ತೆರೆಯಲಾಗುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಅವಕಾಶ ಇರುತ್ತದೆ. ಹಾಸ್ಟೆಲ್‌ಗಳಲ್ಲಿ ತಲಾ 1 ಸಾವಿರ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸುಲಭವಾಗಲು ಹೆಚ್ಚಾಗಿ ವಿವಿಗಳಿಗೆ ಸಮೀಪ ಇಂತಹ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮಂಗಳೂರಿನಲ್ಲಿ ಮೂರು ಕಡೆಗಳಲ್ಲಿ ಹಾಸ್ಟೆಲ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಮುಖ್ಯಮಂತ್ರಿಗಳು ಶಿಲಾನಾಸ ನೆರವೇರಿಸಲಿದ್ದಾರೆ ಎಂದರು.
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ನೇರ ಹಣ ಪಾವತಿ: ಆಸ್ಪತ್ರೆಯಿಂದಲೇ ಸಭೆ ನಡೆಸಿದ ಕೋಟಾ ಶ್ರೀನಿವಾಸ ಪೂಜಾರಿ
ವರ್ಷದಲ್ಲಿ 3 ಬ್ಯಾಚ್ ತರಬೇತಿ
ಪೊಲೀಸ್, ಮಿಲಿಟರಿ ಹಾಗೂ ಅಗ್ನಿಪಥ ಸೇನಾ ಸೇರ್ಪಡೆಗಾಗಿ ಪೂರ್ವ ತರಬೇತಿ ಕೇಂದ್ರವನ್ನು ಕರಾವಳಿಯ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೆರೆಯಲಾಗಿದೆ. ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವರ್ಷದಲ್ಲಿ ಮೂರು ಬ್ಯಾಚ್‌ಗಳನ್ನು ಕಲಿಸಲು ಉದ್ದೇಶಿಸಲಾಗಿದ್ದು, ಪ್ರತಿ ಬ್ಯಾಚ್‌ನ ಕಲಿಕಾ ಅವಧಿ ನಾಲ್ಕು ತಿಂಗಳು ಇರುತ್ತದೆ ಎಂದರು.