Chamarajanagar: ಸರ್ಕಾರಿ ವೈದ್ಯನ ಕರ್ತವ್ಯಲೋಪ: ಸಿಎಂ ಬೊಮ್ಮಯಿಗೆ ದೂರು

By Kannadaprabha NewsFirst Published Sep 9, 2022, 10:00 PM IST
Highlights

ವೈದ್ಯಶಾಸ್ತ್ರ ತಜ್ಞರ ಹುದ್ದೆಗೆ ಅಗತ್ಯ ಅರ್ಹತೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ, ವಿಶೇಷ ಭತ್ಯೆ, ಕ್ರಮಕ್ಕೆ ಆಗ್ರಹ

ಕೊಳ್ಳೇಗಾಲ(ಸೆ.09): ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯ ಡಾ. ರವಿಶಂಕರ್‌ ಕರ್ತವ್ಯಕ್ಕೆ ತಡವಾಗಿ ಆಗಮಿಸುತ್ತಾರೆ. ವೈದ್ಯ ಹುದ್ದೆಗೆ ಅಗತ್ಯ ಅರ್ಹತೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ ವಿಶೇಷ ಭತ್ಯೆ ಮಂಜೂರು ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ಹಣ ಸೋರಿಕೆ ಉಂಟು ಮಾಡಿದ್ದು, ಅವರ ವಿರುದ್ಧ ಕೂಡಲೇ ತನಿಖೆ ನಡೆಸಿ ಅಮಾನತ್ತುಗೊಳಿಸಬೇಕು ಎಂದು ರಮೇಶ್‌ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

ಡಾ.ರವಿಶಂಕರ್‌, ತಜ್ಞ ವೈದ್ಯರಲ್ಲ, ಕೇವಲ ಎಂಬಿಬಿಎಸ್‌ ಅಧ್ಯಯನ ಮಾಡಿದ್ದು ನಿಯಮಾನುಸಾರ ವೈದ್ಯ ಶಾಸ್ತ್ರ ತಜ್ಞರ ಹುದ್ದೆಗೆ ಬೇಕಾದ ಅರ್ಹತೆ ಹೊಂದಿಲ್ಲ, ಆದರೂ, ಸರ್ಕಾರದ ವಿಶೇಷ ಭತ್ಯೆ ಪಡೆದು ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದ್ದು, ಕೊಳ್ಳೇಗಾಲ ಆಸ್ಪತ್ರೆಗೆ ತಡವಾಗಿ ಆಗಮಿಸಿ ಶೀಘ್ರ ವಾಪಸ್‌ ತೆರಳುತ್ತಾರೆ, 2ರಿಂದ 3ಗಂಟೆಗೆ ಕೊಳ್ಳೇಗಾಲದ ಖಾಸಗಿ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಿ, ಬಳಿಕ ರಾತ್ರಿ ಪಾಳಿಯಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ, ಸಣ್ಣ, ಪುಟ್ಟಸಮಸ್ಯೆಗೂ ಪ್ರಸಾದ್‌ ಸ್ಕ್ಯಾ‌ನಿಂಗ್‌ ಸೆಂಟರ್‌ಗೆ ಕ್ಷಕಿರಣಕ್ಕೆ ಇತರೆ 40ರಷ್ಟುಕಮಿಷನ್‌ ಕಳುಹಿಸುತ್ತಾರೆ. ಕರ್ತವ್ಯ ಲೋಪಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮೂರು ಬಾರಿ ನೋಟಿಸ್‌ ನೀಡಿದ್ದರೂ ಕ್ರಮ ಜರುಗಿಸಿಲ್ಲ, ವಿಚಾರಣೆ ನಡೆಸಿ ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ನನ್ನಂತ ಅನೇಕ ಬಡವರಿಗೆ ಅನ್ಯಾಯವಾಗಲಿದೆ ಎಂದು ದೂರು ನೀಡಿದ್ದಾರೆ.

ದೇಶದಲ್ಲಿ ಶಾಂತಿ ನೆಲಸಲು ಭಾರತ್‌ ಜೋಡೋ ಯಾತ್ರೆ: ಸಿದ್ದರಾಮಯ್ಯ

ರಮೇಶ್‌ ದೂರಿನ ಹಿನ್ನೆಲೆ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಉಮಾದೇವಿ ಈ ಸಂಬಂಧ ಸೂಕ್ತ ಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

73,500 ವಿಶೇಷ ಭತ್ಯೆ ಪಡೆದಿರುವ ವೈದ್ಯಾಧಿಕಾರಿ!

ಕೊಳ್ಳೇಗಾಲ: ಡಾ. ರವಿಶಂಕರ್‌ ವೈದ್ಯಶಾಸ್ತ್ರ ತಜ್ಞರ ಹುದ್ದೆಗೆ ಬೇಕಾದ ಅರ್ಹತೆ ಇಲ್ಲದಿದ್ದರೂ ತಜ್ಞ ವೈದ್ಯರು ಎಂದು ನಮೂದಿಸಿ ಆರೋಗ್ಯ ಇಲಾಖೆ ನಿಯಮ ಉಲ್ಲಂಘಿಸಿ 73ಸಾವಿರದ ಐನೂರು ರು. ಪಡೆದಿದ್ದಾರೆ. ಚನ್ನರಾಯಪಟ್ಟಣದಲ್ಲಿರುವ ತಮ್ಮ ಖಾತೆ ಸಂಖ್ಯೆಗೆ (071800101015662) ಜೂನ್‌ ತಿಂಗಳಲ್ಲಿ ಜಮಾ ಮಾಡಲಾಗಿದೆ. ತಜ್ಞ ವೈದ್ಯರಲ್ಲದಿದ್ದರೂ ವಿಶೇಷ ಭತ್ಯೆ ಪಡೆಯುವಂತಿಲ್ಲ ಎಂಬ ನಿಯಮವಿದ್ದರೂ ಆರೋಗ್ಯ ಇಲಾಖೆಯ ಯಾವ ನಿಯಮದಡಿ ಭತ್ಯೆ ಮಂಜೂರು ಮಾಡಿದೆ ಎಂಬ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ನೊಟೀಸ್‌ ನೀಡಲಾಗಿದ್ದು, ಪರಿಶೀಲಿಸಿ ಕ್ರಮ: ಡಿಎಚ್‌ಒ

ಡಾ.ರವಿಶಂಕರ್‌ ಆಸ್ಪತ್ರೆಗೆ ತಡವಾಗಿ ಬರುತ್ತಾರೆ, ಬಡ ರೋಗಿಗಳನ್ನು ಸಣ್ಣ, ಪುಟ್ಟಸಮಸ್ಯೆಗೂ ಖಾಸಗಿ ಸ್ಕ್ಯಾ‌ನಿಂಗ್‌ ಸೆಂಟರ್‌ಗೆ ಕಳುಹಿಸುತ್ತಾರೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆ ನೋಟೀಸ್‌ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ವಿಶೇಷ ಭತ್ಯೆ ಪಡೆದಿರುವ ವಿಚಾರ ನನಗೆ ತಿಳಿದಿಲ್ಲ, ಈ ಸಂಬಂಧ ನನಗೆ ದೂರು ಸಲ್ಲಿಕೆಯಾದರೆ ಪರಿಶೀಲಿಸಿ ಮುಂದಿನ ಕ್ರಮವಹಿಸುತ್ತೇನೆ ಅಂತ ಚಾಮರಾಜನಗರ ಡಿಎಚ್‌ಒ ಡಾ. ವಿಶ್ವೇಶ್ವರಯ್ಯ ತಿಳಿಸಿದ್ದಾರೆ. 
 

click me!