ಡ್ರಗ್ ಮಾಫಿಯಾ ದೂರುದಾರ ಪ್ರಶಾಂತ್ ಸಂಬರಗಿ ವಿರುದ್ಧವೇ ದೂರು ದಾಖಲಾಗಿದೆ. ಯಾವ ಪ್ರಕರಣ.. ಏನಿದು ದೂರು ಇಲ್ಲಿದೆ ವಿವರ
ಕಲಬುರಗಿ (ಸೆ.29): ರೈತ ಸಮುದಾಯದ ಪರವಾಗಿ ನಡೆಸಲಾಗುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಸಾಂತ ಸಂಬರಗಿ ಇವರು ರೈತರನ್ನು ಅವಹೇಳನ ಮಾಡುವ, ಪ್ರತಿಭಟನಾ ನಿರತ ಸಂಘಟನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ನಿಂದನೆ ಮಾಡಿದ್ದಾರೆಂದು ದೂರಿ ಭೀಮ ಆರ್ಮಿ ಕಲಬುರಗಿ ಜಿಲ್ಲಾ ಘಟಕ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದೆ.
ದಲಿತ ಸಮುದಾಯದ ಹಿತಾಸಕ್ತಿ ಕಾಪಾಡುವ ಬೀಮ ಆರ್ಮಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ಅರಿತರೂ ಪ್ರಶಾಂತ ಸಂಬರಗಿ ಇವರು ಫೇಸ್ಬುಕ್‌ನಲ್ಲಿ ದಲಿತರು, ರೈತರಿಗೆ ಅವಹೇಳ ಮಾಡುವ ಉದ್ದೇಶದಿಂದ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಉದ್ದೇಶದಿಂದ ಇಂತಹ ನಿಂದನೀಯ ಪೋಸ್ಟ್ ಹಾಕಿದ್ದಾರೆಂದು ದೂರಿನಲ್ಲಿ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಹೇಳಿದ್ದಾರೆ.
ಶಾಸಕ ಜಮೀರ್ ವಿರುದ್ಧ ಸಿಎಂಗೆ ಸಂಬರಗಿ ದೂರು ..
ಪಂಕ್ಚರ್ ಅಂಗಡಿಯವನಿಗೂ ಈ ಕೃಷಿ ಮಸೂದೆಗೂ ಏನ್ ಸಂಬಂಧ, ನಾನು ಈ ಮುಷ್ಕರ ಖಂಡಿಸುತ್ತೇನೆಂದು ಸಂಬರಗಿ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದನ್ನೇ ಉಲ್ಲೇಖಿಸಿ ಭೀಮ ಆರ್ಮಿ ಈ ದೂರು ದಾಖಲಿಸಿದೆ. ಸಮುದಾಯ ಎತ್ತಿ ಕಟ್ಟುವಂತಹ, ಜಾತಿ ನಿಂದನೆ ಉದ್ದೇಶದ ಇಂತಹ ಸಾಮಾಜಿಕ ಜಾಲ ತಾಣದ ಸಂದೇಶಗಳನ್ನು ಹಾಕಿದ್ದಕ್ಕಾಗಿ ಪ್ರಸಾಂತ ಸಂಬರಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮಾ ಆರ್ಮಿ ಜಿಲ್ಲಾಧ್ಯಕ್ಷ ನಾಗೇಶಕೊಳ್ಳಿ ದೂರಿನಲ್ಲಿ ಕೋರಿದ್ದಾರೆ.
ಪೊಲೀಸರು ಸದರಿ ದೂರನ್ನು ಸ್ವೀಕರಿಸಿದ್ದು ನಮೂನೆ 76 ಎ ಅಡಿಯಲ್ಲಿ ರೈತರ ಪ್ರತಿಭಟನೆಯನ್ನು ನಿಂದಿಸಿರುವ ಸಂಬರಗಿ ವಿರುದ್ಧದ ದೂರು ದಾಖಲಿಸಲು ಆಗಮಿಸಿದ್ದರೆಂದು ಸಾರುವ ರಸೀತಿ ನೀಡಿದ್ದಾರೆ.