ಮಾ.4ರಂದು ನಗರದ ಶಿವಾಜಿ ಸರ್ಕಲ್‌ನಲ್ಲಿ ನಡೆದಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ಶಾಂತಿ ಸೌಹಾರ್ದತೆ ಕದಡುವ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಬ್ಬರು ಶಾಸಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯಪುರ(ಮಾ.07): ಮಾ.4ರಂದು ನಗರದ ಶಿವಾಜಿ ಸರ್ಕಲ್‌ನಲ್ಲಿ ನಡೆದಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ಶಾಂತಿ ಸೌಹಾರ್ದತೆ ಕದಡುವ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಬ್ಬರು ಶಾಸಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಹೈದ್ರಾಬಾದ್‌ನ ಗೋಶಮಹಾಲ ಶಾಸಕ ಟಿ.ರಾಜಾಸಿಂಗ್ ವಿರುದ್ಧ ನಗರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಗರ ನಿವಾಸಿ ಅಬುಬಕರ್ ಕಂಬಾಗಿ ಎಂಬುವವರು ಮಾ.5ರಂದು ಕಲಂ:153, 506, 504, 505(2) ಐಪಿಸಿ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.
ಶಾಸಕರ ವಿರುದ್ದ ದೂರು ದಾಖಲಾಗಿರುವ ಹಿನ್ನೆಲೆ ಭಾರತ ಭಾವೈಕ್ಯತಾ ಮಂಚ್ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಇಬ್ಬರು ಶಾಸಕರ ವಿರುದ್ದ ಹರಿಹಾಯ್ದರು ಮುಖಂಡ ಮಹಮ್ಮದ ರಫೀಕ್ ಟಪಾಲ್, ಛತ್ರಪತಿ ಶಿವಾಜಿ ಮಹಾರಾಜರು ಈ ದೇಶ ಕಂಡ ಮಹಾನ್ ನಾಯಕ. ಅವರು ಹಿಂದೂ ಮುಸ್ಲಿಂ ಭೇದಭಾವ ಮಾಡಿರಲಿಲ್ಲ. ಅವರ ಸೈನ್ಯದಲ್ಲಿ ಮುಸ್ಲಿಂರಿದ್ದರು. ಅವರ ಅಂಗರಕ್ಷರಲ್ಲಿ % 60 ಮುಸ್ಲಿಂರಿದ್ದರು. ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ನನ್ನು ಕೊಲ್ಲುವ ಸಮಯದಲ್ಲಿ ಶಿವಾಜಿಗೆ ಹುಲಿ ಉಗುರು ಕೊಟ್ಟಿದ್ದು ಮುಸ್ಲಿಂ ಅಂಗರಕ್ಷಕ. ಶಾಸಕ ಯತ್ನಾಳ ಹಾಗೂ ರಾಜಾಸಿಂಗ್ ನಗರದಲ್ಲಿ ಶಿವಾಜಿ ಯಜಂತಿ ಮೆರವಣಿಗೆ ಮಾಡಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಶಿವಾಜಿ ಜಯಂತಿಯಲ್ಲಿ ಶಿವಾಜಿಯ ಗುಣಗಾಣ, ಅವರ ಆಡಳಿತದ ಕುರಿತು ಮಾತಾಡಲಿಲ್ಲ, ಶಿವಾಜಿ ಮಹಾರಾಜರಿಂದ ಕಲಿಯಬೇಕಾದ ಸಂದೇಶ ಸಾರಲಿಲ್ಲ. ಅದನ್ನು ಬಿಟ್ಟು ಯತ್ನಾಳ ಅವರು ಅವಾಚ್ಯ ಶಬ್ದಗಳಿಂದ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಶಾಸಕರಾಗಿ ಹಿಂದೂ ಮುಸ್ಲಿಂ ಬೇರೆ ಮಾಡಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅದು ಅವರಿಂದ ಸಾಧ್ಯವಿಲ್ಲ. ದೇಶದಲ್ಲಿ ಎಲ್ಲೆ ಗಲಭೆಗಳಾದರೂ ವಿಜಯಪುದಲ್ಲಿ ಎಂದೂ ಹಿಂದೂ-ಮುಸ್ಲಿಂ ಗಲಭೆಗಳಾಗಿಲ್ಲ. ಈಗಾಗಲೇ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ಪೊಲೀಸರು ಶೀಘ್ರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆಯಿಂದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಡಿಶ್ಚಾರ್ಜ್
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಶಿವಾಜಿ ಮಹಾರಾಜರು ಜಾತ್ಯಾತೀತರು, ಅವರ ಜಯಂತಿ ಉತ್ಸವದಲ್ಲಿ ಅವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿತ್ತು. ಆದರೆ ಇವರು ಉದ್ರಿಕ್ತವಾಗಿ ಮಾತನಾಡಿದ್ದು ಖಂಡನೀಯ. ಯತ್ನಾಳ ವರ್ತೆನೆ ನೋಡಿದಾಗ ನಿಜವಾಗಿಯೂ ಇವರು ಹಿಂದೂ ಸಮಾಜದ ವಿರೋಧಿಗಳು ಇದ್ದಾರೆ. ಬಸವಣ್ಣನ ಹೆಸರಿಟ್ಟುಕೊಂಡು ಬಸವಣ್ಣನ ವಿರೋಧಿಗಳು ಯತ್ನಾಳ ಇದ್ದಾರೆ ಎಂದು ಆರೋಪಿಸಿದರು.
ಮತ್ತೋರ್ವ ಮುಖಂಡ ಗಂಗಾಧರ ಸಂಬಣ್ಣಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ದೇಶದ್ರೋಹಿಗಳು ಎನ್ನುವಂತೆ ಯತ್ನಾಳ ಮಾತಾಡ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಅದರಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದರು. ಯತ್ನಾಳ ಈ ಮೊದಲು ಜೆಡಿಎಸ್ ನಲ್ಲಿ ಇದ್ದಾಗ ಅಲ್ಪಸಂಖ್ಯಾತರು ಬೇಕಿತ್ತು, ಇವತ್ತು ಅವರು ಅಲ್ಪಸಂಖ್ಯಾತರು ದೇಶದ್ರೋಹಿಗಳು ಎಂಬಂತೆ ಮಾತಾಡ್ತಾರೆ. ರಂಜಾನ್ ಇದ್ದಾಗ ಇದೇ ಬಸನಗೌಡರು ಮುಸ್ಲಿಂ ರ ಆತಿಥ್ಯ ಸ್ವೀಕರಿಸಲು ಹೋಗುತ್ತಿದ್ರು. ಈಗ ಜನರಲ್ಲಿ ವಿಷಬೀಜ ಬಿತ್ತುವುದು ಸರಿಯಲ್ಲ ಎಂದರು.
ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ತಪ್ಪು ಯಾರೇ ಮಾಡಿದರು ತಪ್ಪೆ, ಕಾಂಗ್ರೆಸ್ ನವರು ಮಾಡಿದ್ರೆ ತಪ್ಪು, ಬಿಜೆಪಿಯವರು ಮಾಡಿದರು ತಪ್ಪಲ್ಲವಾ?. ನಮ್ಮ ದೇಶದಲ್ಲಿ ಅನ್ನತಿಂದು ದೃಶದ ಬಗ್ಗೆ ಮಾತಾಡಿದ್ರೂ ತಪ್ಪೆ. ಈ ಹಿಂದೆ ಸಿಂದಗಿಯಲ್ಲಿ ಹಾಗೂ ನಗರದ ಮನಗೂಳಿ ಅಗಸಿ ಬಳಿ ಧ್ವಜ ಹಾರಿಸಿದ್ದು ಇವರೇ. ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಇದ್ದೇವೆ, ಇವರು ಮಾತ್ರ ಎಲೆಕ್ಷನ್ ಸಲುವಾಗಿ ಹೀಗೆ ಮಾಡ್ತಿದಾರೆ. ಯತ್ನಾಳ ಅವರಿಗೆ ಏನು ಸಮಸ್ಯೆ ಇದೆ ಎಂಬುದರ ಬಗ್ಗೆ ಒಮ್ಮೆ ಆಸ್ಪತ್ರೆಗೆ ತೋರಿಸಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ವ್ಯಕ್ತಿಗತವಾಗಿ ಬೈಯಲಿ, ಆದ್ರೆ ಇಡಿ ಸಮಾಜಕ್ಕೆ ಬಯ್ಯುವುದು ತಪ್ಪು. ಯಾವ ಕಾರ್ಯಕ್ರಮಕ್ಕೆ ಹೋಗಿರ್ತಿರಿ, ಅದರ ಬಗ್ಗೆ ಮಾತನಾಡಿ ಇಲ್ಲದಿದ್ರೆ ತಪ್ಪು ಸಂದೇಶ ಹೋಗುತ್ತೆ ಎಂದರು.
ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್
ಮುಖಂಡ ಎಂ ಸಿ ಮುಲ್ಲಾ ಮಾತನಾಡಿ ಸಾಕಷ್ಟು ಸಲ ಸಭೆ ಸಮಾರಂಭದಲ್ಲಿ ಒಂದು ಕೋಮಿಗೆ ಬಯ್ಯುವುದು ಬಿಟ್ರೆ ಯತ್ನಾಳ ಅವರ ಕೆಲಸ ಏನು ಇಲ್ಲಾ. ಈ ಹಿಂದೆ ಎರಡು ಕಡೆ ಪಾಕಿಸ್ತಾನ ಧ್ವಜ ಹಾರಿಸಿದ್ರು, ಅದರ ಬಗ್ಗೆ ಶಾಸಕರಾಗಿ ಇವರು ಯಾಕೆ ಅಧಿವೇಶನದಲ್ಲಿ ಮಾತನಾಡಲಿಲ್ಲ? ಪಾಕಿಸ್ತಾನ ಧ್ವಜ ಹಾರಿಸಿದವರು ಹಾಗೂ ಅವರಿಗೆ ಕುಮ್ಮಕ್ಕು ಕೊಟ್ಟವರ ಬಗ್ಗೆ ಯಾಕೆ ಪ್ರತಿಕ್ರಿಯೆ ಕೊಡಲಿಲ್ಲ. ತನ್ನ ಕ್ಷೇತ್ರದಲ್ಲಿ ಧ್ವಜ ಹಾರಿಸಿಕೊಂಡವರು ಇವರು, ಇವರಿಗೆ ನೈತಿಕತೆ ಇಲ್ಲ. ಇಂತಹವರ ಹೆಸರು ಹೇಳಲು ಅಸಹ್ಯ ಅನಿಸುತ್ತಿದೆ ಎಂದರು.
ಮಹಮ್ಮದ್ ರಪೀಕ್ ಟಪಾಲ್, ಸೋಮನಾಥ ಕಳ್ಳಿಮನಿ, ಅಬ್ದುಲ್ ರಜಾಕ್ ಹೊರ್ತಿ, ಗಂಗಾಧರ ಸಂಬಣ್ಣಿ, ಫಯಾಜ್ ಕಲಾದಗಿ, ಎಂಸಿ ಮುಲ್ಲಾ, ಹಾಜಿ ಪಿಂಜಾರ್, ಶಕೀಲ ಗಡೇದ, ದಾದಾಪೀರ ಮುಜಾವರ, ಮಹಮ್ಮದ ನಸೀಮ್ ರೋಜಿಂದರ್ ಉಪಸ್ಥಿತಿ ಇದ್ದರು.