ಕೊಡಗು: ಭಾರೀ ಮಳೆಗೆ ಉದುರಿದ ಕಾಫಿ, ಕಾಳುಮೆಣಸು, ಸಂಕಷ್ಟದಲ್ಲಿ ರೈತರು

By Girish Goudar  |  First Published Aug 8, 2023, 10:00 PM IST

ಕೊಡಗಿನಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಗೆ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಗೆ ಕಂಟಕ ಎದುರಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ತೀವ್ರ ಮಳೆಗೆ ಕಾಫಿಗೆ ಕೊಳೆ ರೋಗ ಕಾಡುತ್ತಿದೆ. ಗಿಡಗಳಲ್ಲಿದ್ದ ಬಹುತೇಕ ಕಾಯಿಗಳು ಉದುರಿ ಗಿಡಗಳ ಬುಡಗಳಲ್ಲಿ ಬಿದ್ದಿವೆ. ಇನ್ನು ಸಾಕಷ್ಟು ಕಾಫಿ ಕಾಯಿಗಳು ಗಿಡಗಳಲ್ಲಿಯೇ ಕೊಳೆಯುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ನಷ್ಟ ಎದುರಾಗಿದೆ. 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಆ.08):  ಕೊಡಗು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮ ಬಿಟ್ಟರೆ ಕಾಫಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಜಿಲ್ಲೆಯಲ್ಲಿ ಆ ಬೆಳೆಗೂ ಮಳೆ ಸಾಕಷ್ಟು ಹೊಡೆತ ನೀಡಿದೆ. ಮಳೆಗಾಲದ ಆರಂಭದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿತ್ತು. ಆಗಷ್ಟೇ ಹೂವು ಅರಳಿದ್ದರಿಂದ ಕಾಯಿಕಟ್ಟಲು ಮಳೆ ಬೇಕಾಗಿದ್ದರಿಂದ ರೈತರು ಸಾಲ ಮಾಡಿ ನೀರು ಹಾಯಿಸಿ ಕಾಫಿ ಉಳಿಸಿಕೊಂಡಿದ್ದರು. ಆದರೀಗ ಜುಲೈ ತಿಂಗಳ ಕೊನೆಯಲ್ಲಿ ಸುರಿದ ಭಾರೀ ಮಳೆ ಸುರಿದ ಪರಿಣಾಮ ಕಾಫಿಗೆ ಕೊಳೆ ರೋಗ ಬಂದಿದ್ದು ಕಾಫಿ ಕಾಯಿಗಳು ಸಂಪೂರ್ಣ ಉದುರಿ ಹೋಗುತ್ತಿವೆ. ಹೀಗಾಗಿ ಈಗ ಮಳೆ ಜಾಸ್ತಿಯಾಗಿ ಕಾಫಿ ಹಾಳಾಗುತ್ತಿದೆ. 

Tap to resize

Latest Videos

undefined

ಹೌದು, ಕೊಡಗಿನಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಗೆ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಗೆ ಕಂಟಕ ಎದುರಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ತೀವ್ರ ಮಳೆಗೆ ಕಾಫಿಗೆ ಕೊಳೆ ರೋಗ ಕಾಡುತ್ತಿದೆ. ಗಿಡಗಳಲ್ಲಿದ್ದ ಬಹುತೇಕ ಕಾಯಿಗಳು ಉದುರಿ ಗಿಡಗಳ ಬುಡಗಳಲ್ಲಿ ಬಿದ್ದಿವೆ. ಇನ್ನು ಸಾಕಷ್ಟು ಕಾಫಿ ಕಾಯಿಗಳು ಗಿಡಗಳಲ್ಲಿಯೇ ಕೊಳೆಯುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ನಷ್ಟ ಎದುರಾಗಿದೆ. 

ಮೈಸೂರು ದಸರಾಕ್ಕೆ ಕೊಡಗಿನಿಂದ 8 ಆನೆಗಳ ಆಯ್ಕೆ ಬಹುತೇಕ ಖಚಿತ

ಮಳೆಯಿಂದ ಕಾಫಿ ಕೊಳೆ ರೋಗದಿಂದ ಉದುರಿ ಹೋಗುತ್ತಿರುವುದರಿಂದ ಅರ್ಧದಷ್ಟು ಬೆಳೆ ಕೈಗೆ ಸಿಗುವುದಿಲ್ಲವೋ ಏನೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಉತ್ತಮ ಮಳೆ ಬಂದಿದ್ದರೆ ಒಂದು ಎಕರೆ ಕಾಫಿ ತೋಟದಲ್ಲಿ 30 ಚೀಲದವರೆಗೆ ಕಾಫಿ ಕೊಯ್ಲು ಮಾಡುತ್ತಿದ್ದೆವು. ಆದರೆ ಈಗ ತೀವ್ರವಾಗಿ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ಕಾಯಿ ಉದುರಿ ಹೋಗಿದೆ. ಆದ್ದರಿಂದ ಈ ಬಾರಿ ಎಕರೆ 10 ರಿಂದ 12 ಚೀಲ ಕಾಫಿ ಫಸಲು ದೊರೆತರೆ ಅದೇ ದೊಡ್ಡದು ಎನ್ನುವಂತಾಗಿದೆ. ಇದರಿಂದ ಕಾಫಿ ತೋಟವನ್ನು ಹೇಗೆ ಮೈನ್ಟೆನ್ ಮಾಡುವುದು ಎನ್ನುವುದೇ ಚಿಂತೆಯಾಗಿದೆ. ಕಾಫಿ ತೋಟದಲ್ಲಿ ಕಳೆ ತೆಗೆಸುವುದು, ಕಾಫಿ ಕೊಯ್ಲು ಮಾಡಿಸುವುದು ಹೇಗೆ.? ಈಗ ಸಿಗುವ ಕಾಫಿಯಿಂದ ಇವುಗಳ ವೆಚ್ಚಕ್ಕೂ ಸಾಲದ ಪರಿಸ್ಥಿತಿ ಬಂದಿದೆ ಎಂದು ಕಾಫಿ ಬೆಳೆಗಾರ ಸಜ್ಜನ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ಕಾಫಿ ಅಷ್ಟೇ ಅಲ್ಲ, ಕಾಫಿ ತೋಟಗಳಲ್ಲಿ ಪರ್ಯಾಯ ಬೆಳೆಗಳಾಗಿದ್ದ ಕಾಣು ಮೆಣಸು ಕೂಡ ತೀವ್ರ ಮಳೆಗೆ ಕೊಳೆಯುತ್ತಿದೆ. ಮೆಣಸಿನ ಬಳಿಗಳು ಈಗಾಗಲೇ ಗೊನೆಗಳು ಹೊರಟಿದ್ದು, ತೀವ್ರ ಮಳೆಯಿಂದಾಗಿ ಮೆಣಸಿನ ಗೊನೆಗಳು ಕರಗಿ ಉದುರುತ್ತಿವೆ. ಕಾಫಿ ಕಡಿಮೆ ಫಸಲು ಬಂದರೂ ಕಾಳು ಮೆಣಸಿನಲ್ಲಾದರೂ ಉತ್ತಮ ಫಸಲು ಬಂದಿದ್ದರೆ ಕಾಫಿ ಬೆಳೆಯುವುದಕ್ಕೆ ತಗುಲುವ ವೆಚ್ಚಕ್ಕಾದರೂ ಈ ಕಾಳು ಮೆಣಸಿನ ಆದಾಯ ಆಗುತಿತ್ತು. ಈಗ ಅದೂ ಕೂಡ ಹಾಳಾಗುತ್ತಿರುವುದರಿಂದ ಅತ್ತ ಕಾಫಿ ಬೆಳೆಯಲ್ಲೂ ತೀವ್ರ ನಷ್ಟ ಉಂಟಾಗುತ್ತಿದ್ದರೆ, ಇತ್ತ ಕಾಣು ಮೆಣಸಿನಿಂದಲೂ ಸಾಕಷ್ಟು ನಷ್ಟ ಅನುಭವಿಸುವಂತೆ ಆಗುತ್ತಿದೆ. 

ತೀವ್ರ ಮಳೆಯ ಜೊತೆಗೆ ಭಾರೀ ಗಾಳಿ ಬೀಸಿದ್ದರಿಂದ ಮೆಣಸಿನ ಬಳಿ ಹಾಳಾಗಲು ಕಾರಣವಾಗಿದೆ. ಸದ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇನ್ನೂ ಮಳೆಯಿಂದ ಆಗಿರುವ ಬೆಳೆಯ ನಷ್ಟದ ಬಗ್ಗೆ ಯಾವುದೇ ಪರಿಶೀಲನೆ ಮಾಡಲು ಬಂದಿಲ್ಲ. ಒಂದು ವೇಳೆ ನಷ್ಟದ ಬಗ್ಗೆ ಪರಿಶೀಲನೆಗೆ ಬಂದು ಪರಿಹಾರ ನೀಡಿದರೂ ನಮಗೆ ನೈಜವಾಗಿ ಆಗಿರುವ ನಷ್ಟವನ್ನು ಭರಿಸುವುದಿಲ್ಲ. ಬದಲಾಗಿ ಎಕರೆಗೆ ಸಣ್ಣ ಪ್ರಮಾಣದ ಪರಿಹಾರ ನೀಡುತ್ತಾರೆ. ಇದರಿಂದ ಬೆಳೆಗಾರರ ಸಾಲವನ್ನು ತೀರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಳೆಗಾರ ಚಿಣ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಒಂದು ವಾರದ ಮಳೆಗೆ ರೈತರು ಸಂಕಷ್ಟ ಎದುರಿಸುವಂತೆ ಆಗಿದೆ.

click me!